ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಗೊಂಡ ಚಾವಣಿ ಕೆಳಗೆ ಮಕ್ಕಳಿಗೆ ಪಾಠ

ಅಪಾಯದ ಗಂಟೆ ಬಾರಿಸುತ್ತಿದೆ ಯಳವತ್ತಿ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ
Last Updated 19 ಡಿಸೆಂಬರ್ 2018, 9:46 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಸಮೀಪದ ಯಳವತ್ತಿ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಶಿಥಿಲಗೊಂಡಿದ್ದು, ಇದರ ಮೇಲೆ ಹೊದೆಸಿರುವ ಹಂಚುಗಳು ಆಗಲೋ ಈಗಲೋ ಮಕ್ಕಳ ಮೇಲೆ ಬೀಳುವ ಸ್ಥಿತಿಯಲ್ಲಿವೆ.

ಈ ಶಾಲೆಯಲ್ಲಿ 120ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಗೋಡೆಗಳು ಗಟ್ಟಿಮುಟ್ಟಾಗಿವೆ.ಮೇಲ್ಛಾವಣಿ ಮಾತ್ರ ಶಿಥಿಲಗೊಂಡಿದೆ. ಹಂಚುಗಳು ಬಹುತೇಕ ಒಡೆದಿದೆ. ಒಡೆದ ಹಂಚುಗಳನ್ನು ತೆಗೆಯದೆ ಅದರ ಮೇಲೆಯೇ ತಗಡಿನ ಶೀಟುಗಳನ್ನು ಹೊದಿಸಲಾಗಿದೆ. ಹೀಗಾಗಿ ಹಂಚಿನ ತುಂಡುಗಳು ಉದುರಿ ವಿದ್ಯಾರ್ಥಿಗಳ ತಲೆಯ ಮೇಲೆ ಬೀಳುವ ಅಪಾಯಕಾರಿ ಸ್ಥಿತಿ ಇದೆ. ಈ ಶಿಥಿಲಗೊಂಡ ಸೂರಿನ ಕೆಳಗೆ ಕುಳಿತು ಮಕ್ಕಳು ಪಾಠ ಆಲಿಸುತ್ತಿದ್ದಾರೆ.

‘ನಮ್ಮೂರಿನ ಕನ್ನಡ ಶಾಲೆ ಬೀಳುವ ಹಂತ ತಲುಪಿದೆ. ಇದನ್ನು ದುರಸ್ತಿ ಮಾಡುವಂತೆ ಸಂಸದರಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾರೂ ಇತ್ತ ಗಮನ ಹರಿಸುತ್ತಿಲ್ಲ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಚನಗೌಡ ಅಜ್ಜನಗೌಡ್ರ, ಬಸನಗೌಡ ಪಿಡ್ಡನಗೌಡ್ರ, ಬಾಪುಗೌಡ ಭರಮಗೌಡ್ರ, ಶರೀಫಸಾಬ್ ಅಗಸಿಮನಿ, ಯಲ್ಲಪ್ಪ ಮಾಗಡಿ ನೋವಿನಿಂದ ಹೇಳಿದರು.

‘ಯಳವತ್ತಿಯ ಪ್ರಾಥಮಿಕ ಶಾಲೆಯ ಹಂಚು ಮತ್ತು ಶೀಟುಗಳನ್ನು ತೆಗೆದು ಎಲ್ಲ ಕೊಠಡಿಗಳಿಗೆ ಸ್ಲ್ಯಾಬ್ ಹಾಕಲು ಪ್ರಸ್ತಾವನೆ ಕಳಿಸಿದ್ದೇವೆ. ಅನುದಾನ ಬಂದ ತಕ್ಷಣ ಈ ಕೆಲಸವನ್ನು ತುರ್ತಾಗಿ ಮಾಡಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT