ಶಾಲಾ ತೋಟ; ಸುಂದರ ನೋಟ

7
ಪರಿಸರ ಶಿಕ್ಷಣ ಕೇಂದ್ರವಾಗಿರುವ ಗೊಜನೂರಿನ ಸರ್ಕಾರಿ ಪ್ರೌಢಶಾಲೆ

ಶಾಲಾ ತೋಟ; ಸುಂದರ ನೋಟ

Published:
Updated:

ಲಕ್ಷ್ಮೇಶ್ವರ: ದಟ್ಟ ಕಾನನದ ನಡುವಿನ ಮಲೆನಾಡಿನ ಶಾಲೆಯನ್ನು ನೆನಪಿಸುವ ಪರಿಸರ ಇಲ್ಲಿ ಮೈದಳೆದಿದೆ. ಸತತ ಬರ ಮತ್ತು ಮಳೆ ಕೊರತೆಯಿಂದ ಹಸಿರೇ ಕಣ್ಮರೆಯಾಗಿರುವ ಈ ಪ್ರದೇಶದಲ್ಲಿ ಶಾಲಾ ಶಿಕ್ಷಕರು,ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸೇರಿ ಸುಂದರ ಉದ್ಯಾನ ನಿರ್ಮಿಸಿದ್ದಾರೆ. ಇದು ತಾಲ್ಲೂಕಿನ ಗೊಜನೂರಿನ ಸರ್ಕಾರಿ ಪ್ರೌಢಶಾಲೆ. ಈ ಶಾಲೆಯ ಆವರಣದಲ್ಲಿ ನಿತ್ಯ ಪ್ರಕೃತಿ ದೇವಿ ನರ್ತಿಸುತ್ತಿದ್ದಾಳೆ.

ಈ ಶಾಲೆಯ ಎದುರು 3 ಎಕರೆ ಸುಂದರ ಉದ್ಯಾನವಿದೆ. ಇದರ ಹಿಂದೆ ಮುಖ್ಯ ಶಿಕ್ಷಕ ರವಿ ಬೆಂಚಳ್ಳಿ ಮತ್ತು ಸಹ ಶಿಕ್ಷಕರ ಶ್ರಮವಿದೆ. ತೇಗ, ತೆಂಗು, ಮಾವು, ಹುಣಸೆ, ಚೆರಿ, ಬಾದಾಮಿ, ತಾಳೆಮರ, ಕಾಡುನೆಲ್ಲಿ, ಚಿಕ್ಕು, ಲಿಂಬೆ, ಪೇರಲ, ಸೀತಾಫಲ ಹೀಗೆ ವಿವಿಧ ಸಸ್ಯಗಳು, ಹೂವುಗಳ ಮೂಲಕ, ನಿತ್ಯ ವಸಂತ ಹೂರಸೂಸುತ್ತಿದೆ.

ಸ್ಥಳೀಯ ಸಂಸ್ಥೆಗಳು ಅಭಿವೃದ್ಧಿಪಡಿಸುವ ಸಾರ್ವಜನಿಕ ಉದ್ಯಾನದಂತೆ ಈ ಶಾಲಾ ಉದ್ಯಾನ ಅಭಿವೃದ್ಧಿಗೊಂಡಿದೆ. ಹುಲ್ಲುಹಾಸಿನ ಮಧ್ಯೆ ಅಲ್ಲಲ್ಲಿ ಪಕ್ಷಿಗಳು, ಪ್ರಾಣಿಗಳ ಮೂರ್ತಿಗಳು ಗಮನ ಸೆಳೆಯುತ್ತವೆ. ಎರೆಹುಳು ಗೊಬ್ಬರ, ಜೀವಸಾರ ಘಟಕ, ಜೀವಾಮೃತ, ಮಳೆನೀರು ಕೊಯ್ಲು, ಇಂಗುಗುಂಡಿ ಹೀಗೆ ಪರಿಸರ ಶಿಕ್ಷಣವೂ ಇಲ್ಲಿ ವಿದ್ಯಾರ್ಥಿಗಳಿಗೆ ಲಭಿಸುತ್ತದೆ.

ಮಾಹಿತಿ ತಂತ್ರಜ್ಞಾನ ಸದ್ಬಳಕೆ ವಿಷಯದಲ್ಲೂ ಈ ಶಾಲೆ ಮುಂದಿದೆ. ಧ್ವನಿವರ್ಧಕ, ಸ್ಮಾರ್ಟಕ್ಲಾಸ್, ರೇಡಿಯೊ ಪಾಠ, ದೂರದರ್ಶನ, ಧ್ವನಿ–ದೃಶ್ಯ ಆಧಾರಿತ ಕಲಿಕೆ, ತಂತ್ರಾಂಶ ಆಧಾರಿತ ಶಿಕ್ಷಣವೂ ಇಲ್ಲಿ ಲಭ್ಯವಿದೆ.

ಬಡ, ವಿಶೇಷ ಮತ್ತು ಪ್ರತಿಭಾವಂತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು,ಯುವಕ ಮಂಡಳಗಳ ಸಹಾಯದೊಂದಿಗೆ ಅಂದಾಜು ₹ 1 ಕೋಟಿ ದೇಣಿಗೆ ಸಂಗ್ರಹಿಸಿ ಶಾಲೆ ಅಭಿವೃದ್ಧಿ ಮಾಡಿದ್ದು ಸಾಧನೆ.

ಅತ್ಯುತ್ತಮ ಕಲಿಕಾ ವಾತಾವರಣ ನಿರ್ಮಾಣ, ಜಿಲ್ಲಾ ಪರಿಸರ ಮಿತ್ರ ಶಾಲೆ, ಅತ್ಯುತ್ತಮ ಮಕ್ಕಳ ಸ್ನೇಹಿ ಶಾಲೆ, ಸ್ವಚ್ಚ ವಿದ್ಯಾಲಯ, ಜಿಲ್ಲಾ ಮಾದರಿ ಶಾಲೆ, ರಾಜ್ಯಮಟ್ಟದ ಮಾದರಿ ಶಾಲೆ ಸೇರಿದಂತೆ ಹಲವು ಪ್ರಶಸ್ತಿಗಳು ಈ ಶಾಲೆಯ ಮುಡಿಗೇರಿವೆ.

ನಮ್ಮ ಶಾಲೆಯ ಉದ್ಯಾನ ರಾಜ್ಯಕ್ಕೇ ಹೆಸರುವಾಸಿ. ಇಲ್ಲಿ ಪಠ್ಯ ಕಲಿಕೆಯ ಜತೆಯಲ್ಲೇ ಪ್ರಕೃತಿ ಶಿಕ್ಷಣವನ್ನೂ ಪಡೆಯುತ್ತೇವೆ. ಕೃಷಿ ಪಾಠವನ್ನೂ ಕಲಿಯುತ್ತೇವೆ
ಧರ್ಮರಾಜ ನಾಕೋಡ, ನೇತ್ರಾವತಿ ದೋಟಿಕಲ್ ಶಾಲೆಯ ವಿದ್ಯಾರ್ಥಿಗಳು

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !