ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ದ್ಯಾಮಮ್ಮನ ಗುಡಿಗೆ ಬೀಗ ಹಾಕಿ ಅವಮಾನ

ಶ್ಯಾಗೋಟಿ ಗ್ರಾಮದ ಮಾದಿಗ ಸಮುದಾಯದ ಜನರಿಂದ ಆರೋಪ
Last Updated 25 ಜನವರಿ 2023, 5:39 IST
ಅಕ್ಷರ ಗಾತ್ರ

ಗದಗ: ‘ತಾಲ್ಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ವಾಸಿಸುವ ಮಾದಿಗ ಸಮುದಾಯ ಜನರಿಗೆ ಸಂವಿಧಾನ ಬದ್ಧ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಊರಿನಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ’ ಎಂದು ಗ್ರಾಮದ ಹಿರಿಯರಾದ ಹನುಮಪ್ಪ ಮಾದರ ಮಾಧ್ಯಮದವರ ಮುಂದೆ ಆರೋಪಿಸಿದ್ದಾರೆ.

‘ಜ.26ರಂದು ಮಾದಿಗ ಸಮುದಾಯದ ಮದುವೆ ಇದ್ದು, ಇದರ ನಿಮಿತ್ತ ಮಂಗಳವಾರ ಊರಿನಲ್ಲಿರುವ ದ್ಯಾಮಮ್ಮ ಗುಡಿಗೆ ಹಾಲುಗಂಬ, ಹಸಿರುಗಂಬ ಪೂಜೆಗೆ ಹೋಗಿದ್ದೆವು. ಆದರೆ, ಈ ಸಂದರ್ಭದಲ್ಲಿ ಊರಿನ ಇತರೆ ಸಮುದಾಯಗಳ ಮುಖಂಡರು ಗುಡಿಗೆ ಬೀಗ ಹಾಕಿಸಿ ನಮ್ಮ ಹಕ್ಕಿಗೆ ಧಕ್ಕೆ ತಂದಿದ್ದಾರೆ’ ಎಂದು ಅವರು ದೂರಿದ್ದಾರೆ.

‘ಜ.21ರಂದು ಶ್ಯಾಗೋಟಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಗ್ರಾಮದಲ್ಲಿ ಇಂದಿಗೂ ಜೀವಂತವಾಗಿರುವ ಅಸ್ಪೃಶ್ಯತೆ ನಿವಾರಣೆಗೆ ಕ್ರಮವಹಿಸುವಂತೆ ಊರಿನ ಹಿರಿಯರು, ಯುವಕರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಅದಾದ ನಂತರ, ಗ್ರಾಮಕ್ಕೆ ಗದಗ ಪೊಲೀಸರು ಭೇಟಿ ನೀಡಿ ಊರಿನವರ ಸಮ್ಮುಖದಲ್ಲೇ ಮಾದಿಗ ಸಮುದಾಯದ ಜನರನ್ನು ಊರಿನ ದೇವಸ್ಥಾನಗಳಿಗೆ ಪ್ರವೇಶಾವಕಾಶ ಕಲ್ಪಿಸಿದ್ದರು. ಆಗ ಸುಮ್ಮನಿದ್ದ ಗ್ರಾಮಸ್ಥರು ಈಗ ಬೇಕಂತಲೇ ಗುಡಿಗೆ ಬೀಗ ಹಾಕಿಸಿ, ಅವಮಾನ ಮಾಡಿದ್ದಾರೆ’ ಎಂದು ಆಕ್ರೋಶ ಹೊರಹಾಕಿದರು.

‘ಮದುವೆ ಸಂಬಂಧ ಕಿರಾಣಿ ಖರೀದಿಗೆ ಹೋದರೆ ಆ ಅಂಗಡಿಗಳಿಗೂ ಬೀಗ ಹಾಕಿಸಿದ್ದಾರೆ. ಚಹಾದಂಗಡಿ, ಕ್ಷೌರದಂಗಡಿ ಎಲ್ಲಡೆಯೂ ನಮ್ಮನ್ನು ಅಸ್ಪೃಶ್ಯರನ್ನಾಗಿ ನೋಡಲಾಗುತ್ತಿದೆ. ನಮಗೆ ಏನಾದರೂ ಕೊಟ್ಟರೆ ದಂಡ ವಿಧಿಸುವುದಾಗಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ’ ಎಂದು ಆರೋಪ ಮಾಡಿದರು.

‘ಗ್ರಾಮದಲ್ಲಿ ಯಾರಿಗೂ ಯಾವ ಸೇವೆಯನ್ನೂ ನಿರಾಕರಿಸಿಲ್ಲ. ನಿರಾಕರಿಸಿದ್ದರೆ ಅದನ್ನು ಸರಿಪಡಿಸಲು ಕ್ರಮವಹಿಸಲಾಗುವುದು. ಊರಿನವರು ಇದಕ್ಕೆ ವಿರೋಧ ವ್ಯಕ್ತಪಡಿಸಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ದ್ಯಾಮಮ್ಮ ಗರ್ಭಗುಡಿಗೆ ಬೀಗ ಹಾಕಿರಬಹುದು ಅಥವಾ ಅರ್ಚಕರು ಊರಿಗೆ ಹೋಗಿದ್ದಿರಬಹುದು. ಇದನ್ನೂ ಪರಿಶೀಲಿಸಿ, ಸಮಸ್ಯೆ ಬಗೆಹರಿಸಲಾಗುವುದು’ ಎಂದು ಗದಗ ಗ್ರಾಮೀಣ ಸಿಪಿಐ ಸಿದ್ದನಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಶ್ಯಾಗೋಟಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಸಿದ ಸಂದರ್ಭದಲ್ಲಿ ಈ ವಿಚಾರ ತಿಳಿದುಬಂದಿದ್ದು, ಆ ದಿನವೇ ಎಲ್ಲರೊಂದಿಗೂ ಸಭೆ ನಡೆಸಿ, ತಿಳಿವಳಿಕೆ ಮೂಡಿಸಲಾಗಿದೆ. ಕಿಶನ್‌ ಕಲಾಲ್‌, ತಹಶೀಲ್ದಾರ್, ಗದಗ

ಗ್ರಾಮದಲ್ಲಿ ಮಾದಿಗ ಸಮುದಾಯದ 14 ಮನೆಗಳು ಮಾತ್ರ ಇವೆ. ಊರಿನಲ್ಲಿರುವ ಎಲ್ಲರಂತೆ ನಮ್ಮ 70 ಮಂದಿಗೂ ಸಮಾನವಾಗಿ ಬದುಕುವ ಅವಕಾಶ ಕಲ್ಪಿಸಿಕೊಡಬೇಕು ಎಂಬುದಷ್ಟೇ ನಮ್ಮ ಆಗ್ರಹ
ಹೆಸರು ಹೇಳಲಿಚ್ಛಿಸದ ಯುವಕ, ಶ್ಯಾಗೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT