ಶಿರಹಟ್ಟಿ: ಕುತೂಹಲ ಕೆರಳಿಸಿದ್ದ ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ಪ್ರಕಟಗೊಂಡು, ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಮಹಿಳಾ ಸದಸ್ಯರು ಅಧಿಕಾರ ಹಿಡಿಯುವ ತವಕದಲ್ಲಿದ್ದಾರೆ.
ಆ.5ರಂದು ಶಿರಹಟ್ಟಿಯೂ ಸೇರಿದಂತೆ ರಾಜ್ಯದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿಗೊಳಿಸಿ ಆದೇಶ ಹೊರಡಿಸಿದೆ. ಎರಡು ದಶಕಗಳ ನಂತರ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಯ ಪಾಲಾಗಿದ್ದು, ಆ.20ರಂದು ಚುನಾವಣೆ ನಡೆಯಲಿದೆ.
ಸ್ಥಳೀಯ ಪಟ್ಟಣ ಪಂಚಾಯಿತಿಯ ಒಟ್ಟು 18 ಸದಸ್ಯರಲ್ಲಿ ಕಾಂಗ್ರೆಸ್‌ನ 11 ಹಾಗೂ ಬಿಜೆಪಿಯ 7 ಸದಸ್ಯರಿದ್ದಾರೆ. ಈಗಾಗಲೇ ಮೊದಲ ಅವಧಿಯ 3ಬಿ ಮೀಸಲಾತಿಗೆ ಇರುವ 30 ತಿಂಗಳನ್ನು ಸಮನಾಗಿ ಹಂಚಿಕೊಂಡು ಕಾಂಗ್ರೆಸ್ ಪಕ್ಷದ ಪರಮೇಶ ಪರಬ ಹಾಗೂ ಗಂಗಮ್ಮ ಆಲೂರ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದಾರೆ. ಅದರಂತೆ ಉಪಾಧ್ಯಕ್ಷರಾಗಿ ಈಸಾಕ ಅಹ್ಮದ್ ಆದರಳ್ಳಿ ಹಾಗೂ ದೇವಪ್ಪ ಆಡೂರ ಅವಧಿ ಮುಗಿಸಿದ್ದಾರೆ. ಸದ್ಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಇರುವ ಮೂವರು ಮಹಿಳಾ ಕಾಂಗ್ರೆಸ್ ಸದಸ್ಯರಲ್ಲಿ ಪಕ್ಷದ ನಾಯಕರು ಯಾರನ್ನು ನೇಮಕ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.
ರೆಸಾರ್ಟ್ ರಾಜಕೀಯ ಸಂಭವ
ಅಧಿಕಾರ ತೆಕ್ಕೆಗೆ ತೆಗೆದುಕೊಳ್ಳಲು ಪೂರ್ಣ ಸಂಖ್ಯಾಬಲ ಹೊಂದದ ಬಿಜೆಪಿಯಲ್ಲಿಯೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿರುವ ಮೀಸಲಾತಿಗೆ ಮೂವರ ಅರ್ಹ ಅಭ್ಯರ್ಥಿಗಳಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಬಿಜೆಪಿಯಿಂದ ಆಯ್ಕೆಯಾದ ಶಾಸಕರಿದ್ದು, ಅವರ ಮಾರ್ಗದರ್ಶನದಲ್ಲಿ ಕೆಲ ಅತೃಪ್ತ ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಬೆಂಬಲ ನೀಡುವ ನಿರೀಕ್ಷೆ ಇದೆ ಎಂಬ ವದಂತಿ ಹರಿದಾಡುತ್ತಿದೆ. ಶಾಸಕ, ಸಂಸದರನ್ನು ಹೊಂದಿದ ಬಿಜೆಪಿ ಮೊದಲಿನ ಅವಧಿಯಂತೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತದೆಯೋ ಅಥವಾ ರೆಸಾರ್ಟ್ ರಾಜಕಾರಣ ಮಾಡಿ ಅಧಿಕಾರ ಹಿಡಿಯುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.
ಕಾಂಗ್ರೆಸ್ ನಾಯಕರ ಮಾರ್ಗದರ್ಶನದಲ್ಲಿ ಪ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು. ಪಕ್ಷದ ಸದಸ್ಯರು ಒಗ್ಗಟ್ಟಾಗಿದ್ದು ಎಲ್ಲಾ ಮಹಿಳಾ ಸದಸ್ಯರಿಗೂ ಅಧಿಕಾರ ನೀಡಲಾಗುವುದು
- ಹುಮಾಯೂನ ಮಾಗಡಿ ಅಧ್ಯಕ್ಷ ಬ್ಲಾಕ್ ಕಾಂಗ್ರೆಸ್ ಶಿರಹಟ್ಟಿ
ಕಾಂಗ್ರೆಸ್‌ನ ಅರ್ಹ ಅಭ್ಯರ್ಥಿಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿರುವ ಸಾಮಾನ್ಯ ಮಹಿಳೆ ಮೀಸಲಾತಿಗೆ ಆಡಳಿತ ಚುಕ್ಕಣಿ ಹಿಡಿಯಲು ಅಗತ್ಯವಿರುವ ಸಂಖ್ಯಾ ಬಲ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ಜನ ಅರ್ಹ ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಅದರಲ್ಲಿ ವಾರ್ಡ್ ನಂ.13ರಿಂದ ಆಯ್ಕೆಯಾಗಿದ್ದ ಗಂಗಮ್ಮ ಆಲೂರ ಈಗಾಗಲೇ ಅಧ್ಯಕ್ಷರಾಗಿ ಅಧಿಕಾರ ಮುಗಿಸಿದ್ದು ಉಳಿದ ಮೂರು ಜನ ಸದಸ್ಯರಾದ ದೇವಕ್ಕ ಗುಡಿಮನಿ ದಾವಲಬ್ಬಿ ಮಾಚೇನಹಳ್ಳಿ ಹಾಗೂ ನೀಲವ್ವ ಹುಬ್ಬಳ್ಳಿ ರೇಸ್‌ನಲ್ಲಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.