ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ನಿರೂಪಣೆಗೆ ಸಂಘರ್ಷ ಅನಿವಾರ್ಯ

ತೋಂಟದಾರ್ಯ ಮಠದಲ್ಲಿ ಶಿವಾನುಭವ ಕಾರ್ಯಕ್ರಮ; ಸಿದ್ಧಲಿಂಗ ಸ್ವಾಮೀಜಿ ಅಭಿಮತ
Last Updated 21 ಸೆಪ್ಟೆಂಬರ್ 2018, 9:37 IST
ಅಕ್ಷರ ಗಾತ್ರ

ಗದಗ: ‘ಸತ್ಯದ ವಿಚಾರಗಳನ್ನು, ಸಮಾನತೆಯ ಮೌಲ್ಯಗಳನ್ನು ಸಮಾಜದಲ್ಲಿ ಜಾತಿ, ಮತ, ಲಿಂಗಬೇಧವಿಲ್ಲದೇ ಜಾರಿಗೊಳಿಸಲು 12ನೇ ಶತಮಾನದ ಶರಣರು ರಾಜಪ್ರಭುತ್ವದೊಂದಿಗೆ ಸಂಘರ್ಷ ಮಾಡುವ ಅನಿವಾರ್ಯತೆ ಉಂಟಾಯಿತು. ಪಟ್ಟಭದ್ರ ಹಿತಾಸಕ್ತಿಗಳು ಎಲ್ಲ ಕಾಲದಲ್ಲೂ ಬದಲಾವಣೆಯನ್ನು ವಿರೋಧಿಸಿದರು’ ಎಂದು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಶರಣರು ನುಡಿದಂತೆ ನಡೆದರು. ಕಂದಾಚಾರಗಳನ್ನು ವಿರೋಧಿಸಿ, ದೇಹವೇ ದೇಗುಲವೆಂದು ಸಾರಿ ಎಲ್ಲ ಕರ್ಮಠಗಳನ್ನು ವಿರೋಧಿಸಿದರು’ ಎಂದರು.

‘ಶತಶತಮಾನಗಳಿಂದ ಅರ್ಥವಿಲ್ಲದ ಆಚರಣೆಗಳನ್ನು ಮೌಢ್ಯಯುತವಾಗಿ ಆಚರಿಸುತ್ತಾ ಬಂದಿದ್ದೇವೆ. ಇದರಿಂದ ಹಣ ಮತ್ತು ಸಮಯ ವ್ಯರ್ಥ ಆಗುತ್ತಿದೆ. ಅರಿವಿನ ಕೊರತೆಯಿಂದ ಕಂದಾಚಾರಗಳು ಇವತ್ತಿಗೂ ಉಳಿದುಕೊಂಡಿವೆ. ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಶರಣರ ಸತ್ ಚಿಂತನೆಗಳನ್ನು ಅನುಸರಿಸುವ ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು’ ಎಂದು ಇಳಕಲ್ಲದ ಚಿತ್ತರಗಿ ವಿಜಯ ಮಹಾಂತೇಶ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.

‘ಕಂದಾಚಾರದಿಂದ ಲಿಂಗಾಚಾರದೆಡೆಗೆ’ ವಿಷಯದ ಕುರಿತು ಗದಗ–ಹುಬ್ಬಳ್ಳಿಯ ಬಸವಕೇಂದ್ರದ ಕಾರ್ಯಾಧ್ಯಕ್ಷ ಪ್ರೊ.ಜಿ.ಬಿ.ಹಳ್ಯಾಳ ಉಪನ್ಯಾಸ ನೀಡಿದರು.

‘ಮಡಿ ಮೈಲಿಗೆ, ಪಂಚಾಂಗ, ಜ್ಯೋತಿಷ, ಸ್ಥಾವರಲಿಂಗ ಪೂಜೆ, ಲಿಂಗ ತಾರತಮ್ಯ, ಜಾತಿ ಬೇಧವನ್ನು ಶರಣರು ವಿರೋಧಿಸಿದರು. ತಮ್ಮ ವಚನಗಳಲ್ಲಿ ಈ ಅಂಶಗಳನ್ನು ಉಲ್ಲೇಖಿಸಿ, ಇಂತಹ ಆಚರಣೆಗಳು ಅರ್ಥಹೀನ ಎನ್ನುವುದನ್ನು ತಿಳಿಸಿದರು. ಶರಣರ ವಚನಗಳನ್ನು ಅಧ್ಯಯನ ಮಾಡಿ, ಸೂಕ್ತ ವಿಚಾರಗಳನ್ನು ಅಳವಡಿಸಿಕೊಂಡರೆ, ಬದುಕು ಸಾರ್ಥಕಗೊಳ್ಳುತ್ತದೆ’ ಎಂದರು.

ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟಗೊಂಡ ರತ್ನಪ್ಪಣ್ಣ ಕುಂಬಾರ ಪುಸ್ತಕದ ಪರಿಚಯನ್ನು ಬಸವೇಶ್ವರ ಕಾಲೇಜಿನ ಡಾ.ರಶ್ಮಿ ಅಂಗಡಿ ಮಾಡಿದರು.

ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ಅವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು. ಮಹಾಂತೇಶ ಎಳಲಿ ಧರ್ಮಗ್ರಂಥ ಪಠಣ, ಚಿನ್ಮಯಿ ಎಳಲ್ಲಿ ವಚನ ಚಿಂತನೆ ನಡೆಸಿದರು. ಪ್ರಾಚಾರ್ಯ ಡಾ.ಪ್ರಸಾದ ರೂಡಗಿ, ಮಂಜುಳಾ ಹಾಸಲಕರ, ಜಿ.ಪಿ.ಕಟ್ಟಿಮನಿ, ಶೇಖಣ್ಣ ಕವಳಿಕಾಯಿ, ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಅನ್ನಪೂರ್ಣಕ್ಕ ಬಡಿಗಣ್ಣವರ, ಎಸ್.ಯು.ಸಜ್ಜನಶೆಟ್ಟರ, ಶಿವಕುಮಾರ ರಾಮನಕೊಪ್ಪ, ಮಂಜುನಾಥ ಅಸುಂಡಿ, ವಿಜಯಕುಮಾರ ಹಿರೇಮಠ, ಶರಣಬಸಪ್ಪ ಅಂಗಡಿ, ಶಿವನಗೌಡ ಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT