ಗುರುವಾರ , ಡಿಸೆಂಬರ್ 5, 2019
25 °C
ಮಕ್ಕಳಿಗೆ ವಿಜ್ಞಾನ ಕಲಿಸಲು ‘ವರ್ಚುವಲ್‌ ರಿಯಾಲಿಟಿ’ ತಂತ್ರಜ್ಞಾನದ ನೆರವು

‘ಇದ್ದುದನ್ನು ಇದ್ದ ಹಾಗೆ ತೋರಿಸಿ, ಕಲಿಸಿ’

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೃದಯ ಹೇಗೆ ಕೆಲಸ ಮಾಡುತ್ತದೆ? ನಮ್ಮ ಜೀವಕೋಶದೊಳಗಿನ ವ್ಯವಸ್ಥೆ ಹೇಗಿರುತ್ತದೆ? ಸಾವು ಸೇವಿಸುವ ಆಹಾರದ ಪಚನ ಕ್ರಿಯೆ ಹೇಗೆ ನಡೆಯುತ್ತದೆ? ಮೂಲಧಾತುಗಳಲ್ಲಿ ಅಣುಗಳ ರಚನೆ ಹೇಗಿರುತ್ತದೆ? 

ಈ ವಿಷಯಗಳನ್ನೆಲ್ಲಾ ಶಾಲಾ ಅಧ್ಯಾಪಕರು ತರಗತಿಗಳಲ್ಲಿ ಚಿತ್ರ ಬಿಡಿಸಿ, ಚಾರ್ಟ್‌ ತೋರಿಸಿ ಎಷ್ಟೇ ವಿವರಿಸಿ ಹೇಳಿದರೂ ವಿದ್ಯಾರ್ಥಿಗಳ ತಲೆಗೇ ಹೋಗುವುದಿಲ್ಲ. ಇವುಗಳನ್ನು ಇದ್ದುದ್ದನ್ನು ಇದ್ದ ಹಾಗೆಯೇ ತೋರಿಸಿದರೆ ವಿದ್ಯಾರ್ಥಿಗಳು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲರು. ಐದರಿಂದ 10ನೇ ತರಗತಿವರೆಗಿನ ವಿಜ್ಞಾನ ಪಠ್ಯಗಳನ್ನು ವರ್ಚುವಲ್‌ ರಿಯಾಲಿಟಿ (ಇದ್ದುದನ್ನು ಇದ್ದ ಹಾಗೆ ತೋರಿಸುವ) ವಿಡಿಯೊಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಸುವ ಸಲುವಾಗಿ ಎಸ್‌ಎಚ್‌ಎಲ್‌ಆರ್‌ ಟೆಕ್ನೊಸಾಫ್ಟ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ಹೊಸ ಉತ್ಪನ್ನವನ್ನು ಸಿದ್ಧಪಡಿಸಿದೆ. ಪಠ್ಯದ ವಿವರಗಳು ಇಂಗ್ಲಿಷ್‌ ಜೊತೆ ಕನ್ನಡದಲ್ಲೂ ಲಭ್ಯ.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ವಸ್ತುಪ್ರದರ್ಶನದಲ್ಲಿ ಸಂಸ್ಥೆಯು ಈ ಉತ್ಪನ್ನವನ್ನು ಪರಿಚಯಿಸಿದೆ. ವಿದ್ಯಾರ್ಥಿಗಳು ಹಾಗೂ ಸಂದರ್ಶಕರು ಈ ತ್ರಿ–ಡಿ ವಿಡಿಯೊಗಳ ಮೂಲಕ ವಿಜ್ಞಾನ ಕಲಿಯುವ ಹೊಸ ಅನುಭವ ಪಡೆದರು.

‘ವಿಜ್ಞಾನ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವುದು ಕಷ್ಟ. ಕೆಲವು ವಿದ್ಯಾರ್ಥಿಗಳಿಗೆ ಚಿತ್ರಗಳ ಅಥವಾ ಚಾರ್ಟ್‌ಗಳ ಮೂಲಕ ತೋರಿಸಿದರೂ ಸರಿಯಾಗಿ ಅರ್ಥವಾಗುವುದಿಲ್ಲ. ಆದರೆ, ನಾವು ಸಿದ್ಧಪಡಿಸಿರುವ ಮೂರು ಆಯಾಮಗಳ ವರ್ಚುವಲ್‌
ರಿಯಾಲಿಟಿ (ವಿ.ಆರ್‌) ವಿಡಿಯೊಗಳನ್ನು ವೀಕ್ಷಿಸಿದರೆ ಪಠ್ಯ ವಿಷಯವನ್ನು ವಿದ್ಯಾರ್ಥಿಗಳು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲರು. ಇದು ಶಿಕ್ಷಕರ ಶ್ರಮವನ್ನು ಬಹಳಷ್ಟು ಕಡಿಮೆ ಮಾಡಲಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್‌ ತಳವಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಡಿಯೊ ಜೊತೆಗೆ ಧ್ವನಿ ವಿವರಣೆಯನ್ನೂ ನೀಡುತ್ತೇವೆ. ಅಗತ್ಯ ಇರುವ ಕಡೆ ಹೆಸರುಗಳನ್ನೂ (ಲೇಬಲಿಂಗ್‌) ತೋರಿಸಿದ್ದೇವೆ. ನಿರ್ದಿಷ್ಟ ವಿಷಯದ ಬಗ್ಗೆ ಹೆಚ್ಚು ತಿಳಿಯಬೇಕಾದರೆ ವಿದ್ಯಾರ್ಥಿಗಳು ಝೂಮ್‌ ಮಾಡಿ ವಿಡಿಯೊ ನೋಡಬಹುದು. ಉದಾಹರಣೆಗೆ, ದೇಹದ ರಚನೆ ಕುರಿತ ವಿಡಿಯೊದಲ್ಲಿ ಹೃದಯ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ನೋಡಬೇಕಿದ್ದರೆ, ಆ ಭಾಗವನ್ನು ಝೂಮ್‌ ಮಾಡಬಹುದು’ ಎಂದು ಈ ಸಾಫ್ಟ್‌ವೇರ್‌ ಅಭಿವೃದ್ಧಿ ಪಡಿಸಿದ ಎಂಜಿನಿಯರ್‌ ಸಾಯಿ ಪ್ರಶಾಂತ್‌ ವಿವರಿಸಿದರು.

‘ಸದ್ಯಕ್ಕೆ ರಾಜ್ಯ ಪಠ್ಯಕ್ರಮ ಹಾಗೂ ಕೇಂದ್ರ ಪಠ್ಯಕ್ರಮದ ಪಾಠಗಳಿಗೆ ವಿಡಿಯೋ ತಯಾರಿಸಿದ್ದೇವೆ. ಈ ಪಠ್ಯಕ್ರಮದಲ್ಲಿ ಏನಾದರೂ ಬದಲಾವಣೆಗಳಾದರೆ ನಾವು ಅದಕ್ಕೆ ತಕ್ಕ ವಿಡಿಯೊ ರೂಪಿಸಿಕೊಡುತ್ತೇವೆ. ಸದ್ಯಕ್ಕೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್‌ ಪ್ರೌಢಶಾಲೆಯಲ್ಲಿ ಇದನ್ನು ಪ್ರಾಯೋಗಿಕವಾಗಿ ಬಳಸಿದ್ದೇವೆ. ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದರು.

 ₹ 5 ಲಕ್ಷಕ್ಕೆ ಲಭ್ಯ: ‘ವರ್ಚುವಲ್‌ ರಿಯಾಲಿಟಿ ವಿಡಿಯೊ ಪಠ್ಯ ಸೇವೆ ಒದಗಿಸಲು ಶಾಲೆಯೊಂದಕ್ಕೆ ₹ 5 ಲಕ್ಷ ದರ ನಿಗದಿಪಡಿಸಿದ್ದೇವೆ. ತ್ರಿ–ಡಿ ವಿಡಿಯೊ ವೀಕ್ಷಣೆಯ ಸಾಧನಗಳನ್ನು, ತಂತ್ರಾಂಶವನ್ನು ಶಾಲೆಯವರಿಗೆ ಒದಗಿಸುತ್ತೇವೆ. ನಂತರ ಪ್ರತಿ ವರ್ಷ ₹ 15 ಸಾವಿರ ಶುಲ್ಕ ಪಡೆಯುತ್ತೇವೆ’ ಎಂದು ತಳವಾರ್‌ ತಿಳಿಸಿದರು.

ಸಂಪರ್ಕ: 7619399391; ಇ–ಮೇಲ್‌: srikant.talawar@shlrtechnosoft.in

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು