ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಭಾವೈಕ್ಯ ದಿನಾಚರಣೆ 21ಕ್ಕೆ

ತೋಂಟದಾರ್ಯ ಮಠದ ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ ಅವರ 72ನೇ ಜಯಂತ್ಯುತ್ಸವ
Last Updated 19 ಫೆಬ್ರುವರಿ 2021, 5:13 IST
ಅಕ್ಷರ ಗಾತ್ರ

ಗದಗ: ‘ತೋಂಟದಾರ್ಯ ಮಠದ ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ ಅವರ 72ನೇ ಜಯಂತ್ಯುತ್ಸವದ ಅಂಗವಾಗಿ, ಫೆ. 21ರಂದು ಭಾವೈಕ್ಯ ದಿನಾಚರಣೆ ಹಾಗೂ ಶ್ರೀಗಳ ಕುರಿತ ಗ್ರಂಥಗಳ ಲೋಕಾರ್ಪಣೆ ಸಮಾರಂಭ ನಡೆಯಲಿದೆ’ ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಎಂ.ಸಿ. ಐಲಿ ಹೇಳಿದರು.

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾನುವಾರ ಬೆಳಿಗ್ಗೆ 9ಕ್ಕೆ ನಗರದ ಭೀಷ್ಮಕೆರೆ ಆವರಣದಲ್ಲಿರುವ ಬಸವೇಶ್ವರರ ಮೂರ್ತಿಯಿಂದ ತೋಂಟದಾರ್ಯ ಮಠದವರೆಗೆ ಭಾವೈಕ್ಯ ಯಾತ್ರೆ ನಡೆಯಲಿದೆ. ಯಾತ್ರೆಯಲ್ಲಿ ಸಿದ್ಧರಾಮ ಸ್ವಾಮೀಜಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ’ ಎಂದರು.

‘ಬೆಳಿಗ್ಗೆ 11ಕ್ಕೆ ಮಠದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಠದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ತೋಂಟದಾರ್ಯ ಮಹಾಸಂಸ್ಥಾನದ ಮುಂಡರಗಿ ಶಾಖಾ ಮಠದ ನಿಜಗುಣಪ್ರಭು ಸ್ವಾಮೀಜಿ, ಶಿರೋಳ ಶಾಖಾಮಠದ ಗುರುಬಸವ ಸ್ವಾಮೀಜಿ, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ, ಸಂಡೂರು ವಿರಕ್ತ ಮಠದ ಪ್ರಭು ಸ್ವಾಮೀಜಿ, ಅರಸೀಕೆರೆ ಕೋಲಶಾಂತೇಶ್ವರ ಮಠದ ಶಾಂತಲಿಂಗ ಸ್ವಾಮೀಜಿ, ಆಳಂದ ಅನುಭವ ಮಂಟಪದ ಕೋರಣೇಶ್ವರ ಸ್ವಾಮೀಜಿ, ಯಶವಂತ ನಗರ ಸಿದ್ಧರಾಮೇಶ್ವರ ಮಠದ ಗಂಗಾಧರ ಸ್ವಾಮೀಜಿ, ತೋಂಟದಾರ್ಯ ಮಠದ ಮಹಾಂತ ದೇವರು ಉಪಸ್ಥಿತರಿರುವರು’ ಎಂದು ತಿಳಿಸಿದರು.

‘ಲಿಂಗೈಕ್ಯ ಶ್ರೀಗಳ ಕುರಿತು ಡಾ. ಜಗದೀಶ ಕೊಪ್ಪ ಹಾಗೂ ಪ್ರೊ. ಶಶಿಧರ ತೋಡಕರ ಅವರು ಸಂಪಾದಿಸಿದ ‘ಸಮಾಜಮುಖಿ’, ಪ್ರೊ. ಮಲ್ಲಿಕಾರ್ಜುನ ಹುಲಗಬಾಳಿ ರಚಿಸಿದ ‘ಸನ್ನಿಧಾನ’, ವೀರನಗೌಡ ಮರಿಗೌಡ್ರ ಅವರ ‘ವಿಶ್ವ ಮಾನವ’ ಹಾಗೂ ಜಿ.ವಿ. ಹಿರೇಮಠ ರಚಿಸಿದ ‘ಡಂಬಳದ ತೋಂಟದ ಅರ್ಧನಾರೀಶ್ವರ ಶಿವಯೋಗಿಗಳು’ ಕೃತಿಗಳನ್ನು ನಿವೃತ್ತ ಗೃಹ ಕಾರ್ಯದರ್ಶಿ ಡಾ.ಎಸ್.ಎಂ. ಜಮಾದಾರ ಬಿಡುಗಡೆ ಮಾಡುವರು. ಇದೇ ವೇಳೆ ಡಂಬಳ-ಮಾನ್ವಿಯ ವೈದ್ಯ ಡಾ.ಎಸ್.ಡಿ. ಪ್ಯಾಟಿ ಅವರಿಗೆ ಸನ್ಮಾನ ನಡೆಯಲಿದೆ’ ಎಂದು ಹೇಳಿದರು.

ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ದಾನಯ್ಯ ಗಣಾಚಾರಿ, ಸಿದ್ದು ಪಲ್ಲೇದ, ಅಶೋಕ ಕುಡತಿನ್ನಿ, ಶೇಖಣ್ಣ ಕವಳಿಕಾಯಿ, ಕೊಟ್ರೇಶ ಮೆಣಸಿನಕಾಯಿ ಇದ್ದರು.

ಭಾವೈಕ್ಯ ದಿನ ಘೋಷಣೆಗೆ ಆಗ್ರಹ

ಗದಗ: ‘ಲಿಂಗೈಕ್ಯ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಜನ್ಮದಿನವನ್ನು (ಫೆ.21) ಸರ್ಕಾರ ಪ್ರತಿವರ್ಷ ಭಾವೈಕ್ಯ ದಿನವೆಂದು ಆಚರಿಸಬೇಕು’ ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಎಂ.ಸಿ.ಐಲಿ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ 2003ರಲ್ಲಿ ಶ್ರೀಗಳಿಗೆ ರಾಷ್ಟ್ರೀಯ ಕೋಮುಸೌಹಾರ್ದ ಪ್ರಶಸ್ತಿ ನೀಡಿ ಗೌರವಿಸಿತ್ತು. ಗದುಗಿನ ಬಸವಣ್ಣ ಎಂದೇ ಜನಪ್ರಿಯರಾಗಿದ್ದ ತೋಂಟದ ಶ್ರೀಗಳು ಸಾಮಾನ್ಯರ ಸ್ವಾಮೀಜಿಯಾಗಿದ್ದರು. ಸರ್ಕಾರ ಫೆ.21ನ್ನು ಭಾವೈಕ್ಯ ದಿನವಾಗಿ ಆಚರಿಸಬೇಕು. ಶ್ರೀಗಳ ಹೆಸರಿನಲ್ಲಿ ಭಾವೈಕ್ಯತಾ ಪ್ರಶಸ್ತಿ ನೀಡಬೇಕು. ಗದುಗಿನಲ್ಲಿ ಶ್ರೀಗಳ ಹೆಸರಿನಲ್ಲಿ ಭಾವೈಕ್ಯ ಭವನ ನಿರ್ಮಿಸಬೇಕು. ಅದಕ್ಕೆ ಅಗತ್ಯವಿರುವ ಜಾಗವನ್ನು ಮಠದ ವತಿಯಿಂದ ಒದಗಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT