ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಗುಂದ: ನಿರ್ವಹಣೆ ಇಲ್ಲದೇ ಸೊರಗಿದ ಉದ್ಯಾನ

ಸಿದ್ದೇಶ್ವರ ದೇವಾಲಯದಲ್ಲಿ ಹಳೆಯ ವೈಭವ ಮರುಕಳಿಸುವುದೇ?
Last Updated 23 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಮುಳಗುಂದ: ಹಸಿರು ಸಿರಿಯ ನಡುವೆ ಕಂಗೊಳಿಸುತ್ತ, ಪ್ರವಾಸಿಗರನ್ನು ಸೆಳೆಯುತ್ತಿದ್ದ ಪಟ್ಟಣದ ಸಿದ್ದೇಶ್ವರ ದೇವಾಲಯ ಇಂದು ನಿರ್ವಹಣೆ ಕೊರತೆಯಿಂದ ಹಳೆಯ ವೈಭವ ಕಳೆದುಕೊಳ್ಳುತ್ತಿದೆ. ಸೂಕ್ತ ನಿರ್ವಹಣೆ ಇಲ್ಲದೆ ಗಿಡಗಳು ಬಾಡಿವೆ. ಹುಲ್ಲು ಹಾಸು ಒಣಗಿದೆ. ಕಸ ಬೆಳೆದು ಮೊದಲಿನ ಅಂದ ಕಳೆದುಕೊಂಡಿದೆ.

ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ದಶಕದ ಹಿಂದೆ ಈ ದೇವಾಲಯವನ್ನು ಅಂದಾಜು ₹ 1 ಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರ ಮಾಡಿತ್ತು. ಅದೇ ವೇಳೆ, ದೇವಾಲಯದ ವಿಶಾಲ ಆವರಣದಲ್ಲಿ ಉದ್ಯಾನ ಕೂಡ ನಿರ್ಮಿಸಲಾಗಿತ್ತು. ಅಪಾರ ಹಣ ವ್ಯಯಿಸಿ ಕಾಯಕಲ್ಪ ನೀಡಿದ್ದರಿಂದಾಗಿ ಈ ದೇವಾಲಯ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದಿತ್ತು.

ಈಚೆಗೆ ಎರಡು ವರ್ಷಗಳಿಂದ ದೇವಾಲಯದ ಉದ್ಯಾನದ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ನಿರ್ವಹಣೆ ಗುತ್ತಿಗೆ ಅವಧಿ ಮುಗಿದಿರುವುದರಿಂದ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ನೀರಿಲ್ಲದೆ ಗಿಡಗಳು, ಹಸಿರಿನ
ನೆಲಹಾಸು ಒಣಗಿವೆ. ಉದ್ಯಾನದ ತುಂಬ ಪಾರ್ಥೇನಿಯಂ ಸೇರಿದಂತೆ ಇನ್ನಿತರ ಕಸದ ಗಿಡಗಳು ಬೆಳೆದು ನಿಂತಿವೆ.

ದೇವಾಲಯದ ಸುತ್ತಲಿನ ಗ್ರಿಲ್‍ಗಳಿಗೆ ಅಳವಡಿಸಿದ್ದ ಆಲಂಕಾರಿಕ ವಿದ್ಯುತ್ ದೀಪಗಳು ಹಾಳಾಗಿದ್ದು, ರಾತ್ರಿ ಹೊತ್ತು ಕತ್ತಲು ಕವಿಯುತ್ತಿದೆ. ದೇವಾಲಯದ ಕಾವಲಿಗೆ ಕಾವಲುಗಾರ ಇಲ್ಲದ ಪರಿಣಾಮ ಕಿಡಿಗೇಡಿಗಳು ಇಲ್ಲಿನ ಗಿಡಗಳನ್ನು ಕಿತ್ತು ಹಾಳು ಮಾಡಿದ್ದಾರೆ. ಅಷ್ಟೋಂದು ಹಣ ಖರ್ಚು ಮಾಡಿ ನಿರ್ಮಿಸಿದ ಉದ್ಯಾನ ನಿರ್ವಹಣೆ ಕಳೆದುಕೊಂಡಿರುವುದರಿಂದ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆಕೂಡಲೇ ಗಮನಹರಿಸಿ ರಕ್ಷಣೆಗೆ ಮುಂದಾಗಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ಈ ಹಿಂದೆ ಯುವಕರೆಲ್ಲರೂ ಸೇರಿಕೊಂಡು ಎರಡು ಬಾರಿ ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ಕಾರ್ಯ ನಡೆಸಿದ್ದೆವು. ಈಗ ಮತ್ತೇ ಕಸ ಬೆಳೆದು ಉದ್ಯಾನ ಹಾಳಾಗಿದೆ. ಉದ್ಯಾನ ನಿರ್ವಹಣೆ ಮಾಡುವಂತೆ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದೆವು. ಆದರೆ, ಇಲ್ಲಿಯವರೆಗೂ ಆ ಕೆಲಸ ನೆರವೇರಿಲ್ಲ. ತಕ್ಷಣವೇ ನಿರ್ವಹಣೆ ಆರಂಭಿಸಿ ಐತಿಹಾಸಿಕ ದೇವಸ್ಥಾನದ ಅಂದವನ್ನು ಇಮ್ಮಡಿಗೊಳಿಸಬೇಕು’ ಎಂದು ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಸುಂಕಾಪೂರ
ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT