ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಚ್ಛಾಶಕ್ತಿ ಕೊರತೆ; ಮೇಲೇಳದ ಕೈಗಾರಿಕೋದ್ಯಮ

ಗಗನಕ್ಕೇರಿದ ಭೂಮಿಯ ಬೆಲೆ, ಅಭಿವೃದ್ಧಿಗೊಳ್ಳದ ಮೂಲಸೌಕರ್ಯಗಳು: ಪ್ರಗತಿಗೆ ಹಿನ್ನಡೆ
Last Updated 7 ಆಗಸ್ಟ್ 2022, 7:09 IST
ಅಕ್ಷರ ಗಾತ್ರ

ಗದಗ: ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ, ಅಭಿವೃದ್ಧಿಗೊಳ್ಳದ ಮೂಲಸೌಕರ್ಯಗಳು ಹಾಗೂ ಗಗನಕ್ಕೇರಿರುವ ಭೂಮಿಯ ಬೆಲೆಯ ಕಾರಣದಿಂದಾಗಿ ಗದಗ ಜಿಲ್ಲೆ ಕೈಗಾರಿಕೋದ್ಯಮದಲ್ಲಿ ಇನ್ನೂ ತೆವಳುತ್ತಿದೆ.

ಜಿಲ್ಲೆಯಲ್ಲಿ ಸಾಕಷ್ಟು ಐಟಿಐ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಿವೆ. ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಅಲ್ಲಿಂದ ಹೊರಬರುತ್ತಾರೆ. ಅವರಿಗೆ ಸ್ಥಳೀಯವಾಗಿಯೇ ಉದ್ಯೋಗವಕಾಶ ಕಲ್ಪಿಸುವ ಇಚ್ಛಾಶಕ್ತಿ ಜನಪ್ರತಿನಿಧಿಗಳು ತೋರುತ್ತಿಲ್ಲ.

ಯಾವುದೇ ಒಂದು ಉದ್ಯಮ ಸ್ಥಾಪನೆಗೆ ಮೂಲಸೌಕರ್ಯಗಳು ಮುಖ್ಯ. ಆದರೆ, ಜಿಲ್ಲೆಯಲ್ಲಿ ಉದ್ಯಮ ಸ್ಥಾಪನೆಗೆ ಪೂರಕವಾದ ವಾತಾವರಣ ಇಲ್ಲ. ಜಿಲ್ಲೆಯಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ಸಕ್ರಿಯವಾಗಿಲ್ಲದಿದ್ದರೂ, ಭೂಮಿಯ ಬೆಲೆ ಮಾತ್ರ ಗಗನಕ್ಕೇರಿದೆ. ಇದರಿಂದಾಗಿ ಸಣ್ಣ ಪುಟ್ಟ ಕೈಗಾರಿಕೆಗಳನ್ನು ಸ್ಥಾಪಿಸುವ ಆಸೆ ಹೊಂದಿರುವ ಉದ್ಯಮಿಗಳು ಇಲ್ಲಿನ ಭೂಮಿಯ ಬೆಲೆ ಕೇಳಿಯೇ ಹಿಂದೆ ಸರಿಯುತ್ತಿದ್ದಾರೆ.

‘ಗದಗ ಜಿಲ್ಲೆಯಲ್ಲಿ ಫುಡ್‌ ಮತ್ತು ಕಾಟನ್‌ ಇಂಡಸ್ಟ್ರಿಗಳ ಸ್ಥಾಪನೆಗೆ ಸಾಕಷ್ಟು ಅವಕಾಶಗಳಿವೆ. ಈ ಉದ್ಯಮಗಳಿಗೆ ಬೇಕಿರುವ ಕಚ್ಚಾವಸ್ತುಗಳು ಕೂಡ ಸ್ಥಳೀಯವಾಗಿಯೇ ಸಿಗುತ್ತವೆ. ಆದರೆ, ಇಂತಹ ಸಣ್ಣ ಪುಟ್ಟ ಉದ್ಯಮಗಳ ಸ್ಥಾಪನೆಗೆ ಬೇಕಿರುವ ಸೌಕರ್ಯಗಳು ಕೂಡ ನಮ್ಮಲ್ಲಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ನರಸಾಪುರ ಇಂಡಸ್ಟ್ರಿಯಲ್‌ ಅಸೋಸಿಯೇಷನ್‌ ಅಧ್ಯಕ್ಷ ಶಿವಕುಮಾರ್‌ ಪಾಟೀಲ.

‘ಗದಗ ನಗರದಿಂದ ಕೈಗಾರಿಕಾ ವಲಯಕ್ಕೆ ತಲುಪಲು ಸರಿಯಾದ ರಸ್ತೆಯೇ ಇಲ್ಲ. 28 ಹಂಪ್ಸ್‌ಗಳನ್ನು ದಾಟಬೇಕು. ನಗರಸಭೆಯವರು ರಸ್ತೆಯುದ್ದಕ್ಕೂ ಕಸ ಸಂಗ್ರಹಣೆ ಡಬ್ಬಿ ಇರಿಸಿದ್ದಾರೆ. ಅವು ತುಂಬಿ ತುಳುಕುತ್ತಿದ್ದರೂ ಸ್ವಚ್ಛಗೊಳಿಸುವ ಗೋಜಿಗೆ ಹೋಗುವುದಿಲ್ಲ. ಇಲ್ಲಿನ ಹೈಟೆನ್‌ ಕಂಪನಿ ತಯಾರಿಸುವ ನಟ್‌, ಬೋಲ್ಟ್‌ಗಳು 20ಕ್ಕೂ ಅಧಿಕ ದೇಶಗಳಿಗೆ ರಫ್ತಾಗುತ್ತವೆ. ಜರ್ಮನಿಯಿಂದ ಇಲ್ಲಿಗೆ ಬರುವ ತಂತ್ರಜ್ಞರಿಗೆ ಇದನ್ನೆಲ್ಲಾ ನೋಡಿದರೆ ಏನನ್ನಿಸುತ್ತದೆ’ ಎಂದು ಪ್ರಶ್ನಿಸುತ್ತಾರೆ ಅವರು.

ಗದುಗಿಗೆ 24/7 ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಆದ ನಂತರ ಉದ್ಯಮಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಶಾಸಕ ಎಚ್‌.ಕೆ.ಪಾಟೀಲ ತಿಳಿಸಿದ್ದರು. ಆದರೆ, ಅವೆರಡೂ ಕೇವಲ ಭರವಸೆಯಾಗಿಯೇ ಉಳಿದವು. ಸಂಸದ ಶಿವಕುಮಾರ ಉದಾಸಿ ಅವರು ಕೂಡ ಈ ಬಗ್ಗೆ ಹೆಚ್ಚಿನ ಪ್ರಯತ್ನಗಳನ್ನು ಮಾಡಲಿಲ್ಲ ಎಂದು ದೂರುತ್ತಾರೆ ಅವರು.

10– 15 ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆ ಕೈಗಾರಿಕಾ ಕ್ಷೇತ್ರದಲ್ಲಿ ಹಿಂದುಳಿದಿತ್ತು. ಅಲ್ಲಿನ ರಾಜಕಾರಣಿಗಳ ಬದ್ಧತೆಯಿಂದಾಗಿ ಇಂದು ಸಾಕಷ್ಟು ಉದ್ಯಮಗಳು ತಲೆ ಎತ್ತಿವೆ. ನಮ್ಮಲ್ಲಿ ಕ್ಲಸ್ಟರ್‌ ಹೋಗಲಿ, ಕಲ್ಲು ಒಗೆದರೆ ಮುದ್ರಾಣಾಲಯ ಅಥವಾ ಕೈಮಗ್ಗಗಳ ಮೇಲೆ ಬೀಳುತ್ತದೆ ಎಂದು ಹೇಳುತ್ತಿದ್ದ ಮಾತು ಈಗ ಕ್ಲೀಷೆ ಅಂತ ಅನಿಸುತ್ತದೆ. ಒಂದು ಕಾಲದಲ್ಲಿ ಹತ್ತಿ ಮತ್ತು ಆಯಿಲ್‌ ಮಿಲ್‌ಗಳಿಗೆ ಹೆಸರುವಾಸಿಯಾಗಿದ್ದ ಜಿಲ್ಲೆಯಲ್ಲೀಗ ಎಲ್ಲವೂ ನಶಿಸಿವೆ ಎನ್ನುತ್ತಾರೆ ಅವರು.

‘ಗದಗ ಜಿಲ್ಲೆಗೆ ಇನ್ನೂ ಹೆಚ್ಚಿನ ಉದ್ಯಮಗಳು ಬರಬೇಕು. ಈ ಹಿನ್ನಲೆಯಲ್ಲಿ ಸಚಿವ ಮುರುಗೇಶ ನಿರಾಣಿ ಅವರನ್ನು ಭೇಟಿ ಮಾಡಿ ಹೊಸ ಉದ್ಯಮ ಸ್ಥಾಪ‍ನೆಗೆ ಅಗತ್ಯವಿರುವ 216 ಭೂಮಿ ಒದಗಿಸುವಂತೆ ಮನವಿ ಮಾಡಿದ್ದೇವೆ. ಸಚಿವ ಸಿ.ಸಿ.ಪಾಟೀಲ ಅವರು ಕೂಡ ಭೂಮಿ ಒದಗಿಸಿಕೊಡುವ ಭರವಸೆ ನೀಡಿದ್ದಾರೆ’ ಎನ್ನುತ್ತಾರೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ರಾಮನಗೌಡ ಬಿ. ದಾನಪ್ಪಗೌಡ್ರ.

ಗದಗ ಜಿಲ್ಲೆಯಲ್ಲಿ ಮೆಣಸಿನಕಾಯಿ, ಹೆಸರು, ಕಡಲೆ, ಈರುಳ್ಳಿ, ಸೂರ್ಯಕಾಂತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇವುಗಳನ್ನು ಮೌಲ್ಯವರ್ಧನೆ ಮಾಡುವಂತಹ ಕೈಗಾರಿಕೆಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆ ಆಗಬೇಕು ಎಂಬುದು ಉದ್ಯಮಿಗಳ ಆಶಯವಾಗಿದೆ.

ಮಾತಿನಲ್ಲೇ ಉಳಿದ ಕನಸು

ಈ ಹಿಂದೆ ಗದುಗಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ‘ಯೋಜಿತ ರೀತಿಯಲ್ಲಿ ಮುನ್ನಡೆದರೆ ಈ ಭಾಗದ ಜಿಲ್ಲೆಗಳಲ್ಲಿ ಆಹಾರ ಸಂಸ್ಕರಣಾ ಘಟಕಗಳ ಸರಪಳಿಯನ್ನೇ ಸೃಷ್ಟಿಸಿ ಉತ್ತರ ಕರ್ನಾಟಕವನ್ನು ಮಿನಿ ಪಂಜಾಬ್‌ ಮಾಡಬಹುದು’ ಎಂದು ಹೇಳಿ ಕೈಗಾರಿಕೆ ಅಭಿವೃದ್ಧಿಯ ಹೊಸ ಕನಸು ಬಿತ್ತಿದ್ದರು.

ಆದರೆ, ಅವರ ಮಾತು ಮಾತಾಗಿಯೇ ಉಳಿಯಿತೇ ಹೊರತು ಆ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನು ಮುಂದಿಟ್ಟಿಲ್ಲ.

‘ಜವಳಿ, ಆಟೊಮೊಬೈಲ್‌ ಮತ್ತು ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡಲು ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿವೆ. ಈ ಮೂರು ಉದ್ಯಮಗಳಿಂದ ಅತಿಹೆಚ್ಚು ಉದ್ಯೋಗ ಸೃಷ್ಟಿ ಆಗುತ್ತದೆ. ಆದ್ದರಿಂದ ಈ ಕಲ್ಪನೆ ಸಾಕಾರಕ್ಕೆ ನೀರಾವರಿ, ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳನ್ನು ಒಗ್ಗೂಡಿಸಿ ರೈತ ಸ್ನೇಹಿ, ಪರಿಸರ ಸ್ನೇಹಿ ಉದ್ಯಮಗಳ ಸ್ಥಾಪನೆಗೆ ಒತ್ತು ನೀಡಬೇಕು’ ಎನ್ನುತ್ತಾರೆನರಸಾಪುರ ಇಂಡಸ್ಟ್ರಿಯಲ್‌ ಅಸೋಸಿಯೇಷನ್‌ ಅಧ್ಯಕ್ಷ ಶಿವಕುಮಾರ್‌ ಪಾಟೀಲ.

ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಸಿಕ್ಕರೆ ಹೊಸ ಉದ್ಯಮಗಳ ಸ್ಥಾಪನೆಗೆ ಅನುಕೂಲ ಆಗಲಿದೆ. ಇದರಿಂದ ಕೈಗಾರಿಕಾ ಕ್ಷೇತ್ರ ಅಭಿವೃದ್ಧಿಗೊಳ್ಳುವ ವಿಶ್ವಾಸವಿದೆ

ರಾಮನಗೌಡ ಬಿ. ದಾನಪ್ಪಗೌಡ್ರ, ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ

ಭೂಮಿಯ ಹೆಚ್ಚಿದ ಬೆಲೆ, ಸಣ್ಣ ಉದ್ಯಮಿಗಳಿಗೆ ನಷ್ಟ ತಡೆದುಕೊಳ್ಳುವ ಶಕ್ತಿ ಇಲ್ಲದಿರುವುದು, ದುಡ್ಡಿನ ಜತೆಗೆ ಆಸ್ತಿ ಭದ್ರತೆ ನೀಡಬೇಕಿರುವುದರಿಂದ ಜಿಲ್ಲೆಯಲ್ಲಿ ಹೊಸ ಉದ್ಯಮಗಳ ಸ್ಥಾಪನೆ ಆಗುತ್ತಿಲ್ಲ

ಆನಂದ್‌ ಪೊತ್ನೀಸ್‌, ವಾಣಿಜ್ಯೋದ್ಯಮ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT