ಮಣ್ಣಿನ ಮಡಕೆ: ದೇಹಕ್ಕೂ, ಮನಸ್ಸಿಗೂ ತಂಪು..!

7

ಮಣ್ಣಿನ ಮಡಕೆ: ದೇಹಕ್ಕೂ, ಮನಸ್ಸಿಗೂ ತಂಪು..!

Published:
Updated:
Deccan Herald

ಗದಗ: ನಗರದಲ್ಲಿ ಡಿಸೆಂಬರ್‌ ತಿಂಗಳ ಚಳಿ ಮಾಯವಾಗಿ, ಕಳೆದೊಂದು ವಾರದಿಂದ ಹಗಲು ಹೊತ್ತಿನಲ್ಲಿ ಒಣ ಹವೆಯ ಅನುಭವ ಆಗುತ್ತಿದೆ. ಸರಾಸರಿ 27 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದ ಗರಿಷ್ಠ ಉಷ್ಣಾಂಶ ಮತ್ತೆ 30 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಬಿಸಿಲಿನ ಝಳದಿಂದ ರಕ್ಷಿಸಿಕೊಳ್ಳಲು ಜನರು ತಂಪು ಪಾನಿಗಳತ್ತ ಮುಖಮಾಡಿದ್ದಾರೆ. ಬೇಸಿಗೆಯಲ್ಲಿ ತಂಪಾದ ನೀರಿಗೆ ನೈಸರ್ಗಿಕ ಪರಿಹಾರವಾದ ಮಡಕೆ ಬಳಸಲು ನಗರವಾಸಿಗಳು ಆಸಕ್ತಿ ತೋರಿಸುತ್ತಿದ್ದಾರೆ. ಪರಿಣಾಮವಾಗಿ ನಗರದಲ್ಲಿ ಮಡಕೆ ಮಾರಾಟ ಹೆಚ್ಚಿದೆ.

ನಗರದ ಹಳೇ ಬಸ್‌ ನಿಲ್ದಾಣ, ತೋಂಟದಾರ್ಯ ಮಠದ ರಸ್ತೆ, ಬೆಟಗೇರಿಯಲ್ಲಿ ಮಣ್ಣಿನ ಮಡಕೆ ಮಾರಾಟ ಜೋರಾಗಿದೆ. ಜನರು ಮಡಕೆಗಳನ್ನು ಖರೀದಿಸಿ, ಬೈಕ್‌ಗಳಲ್ಲಿ, ಆಟೊಗಳಲ್ಲಿ ಮನೆಗೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕಂಡುಬರುತ್ತಿದೆ.ಸಾಮಾನ್ಯವಾಗಿ ಎಲ್ಲ ವರ್ಷ ಜನವರಿ ಫೆಬ್ರುವರಿ ತಿಂಗಳಲ್ಲಿ ಈ ದೃಶ್ಯ ಸಾಮಾನ್ಯವಾಗಿತ್ತು. ಈ ಬಾರಿ ಡಿಸೆಂಬರ್‌ನಲ್ಲೇ ಜನರು ಮಡಕೆ ಖರೀದಿಸಲು ತೊಡಗಿದ್ದಾರೆ.‌

ಜೀವನ ಶೈಲಿಗೆ ತಕ್ಕಂತೆ ಮಡಕೆಯ ವಿನ್ಯಾಸದಲ್ಲೂ ಬದಲಾವಣೆಯಾಗಿದೆ. ಸಾಂಪ್ರದಾಯಿಕ ವಿನ್ಯಾಸದ ಬದಲು,ಕಚೇರಿಯಲ್ಲಿಡಲು ಮತ್ತು ಮನೆ ಬಳಕೆಗಾಗಿ ಪ್ರತ್ಯೇಕ ಮಡಕೆಗಳು ಮಾರುಕಟ್ಟೆಗೆ ಬಂದಿವೆ. ಹೂಜಿಯಾಕಾರದ, ಹಿಡಿಕೆ ಹೊಂದಿರುವ, ಮೇಲ್ಭಾಗದಲ್ಲಿ ಮುಚ್ಚಳ ಇರುವ ವಿವಿಧ ವಿನ್ಯಾಸದ ಮಡಕೆಗಳು ಸಿಗುತ್ತವೆ. ಸಾಮಾನ್ಯ ಮಡಕೆಗಿಂತ ನಳ ಅಳವಡಿಸಿರುವ ಮಡಕೆಗೆ ಬೆಲೆ ಸ್ವಲ್ಪ ಹೆಚ್ಚು. ಮಡಕೆ ಗಾತ್ರಕ್ಕೆ ಅನುಗುಣವಾಗಿ ₹ 100ರಿಂದ ₹ 500ರವರೆಗೆ ಬೆಲೆ ಇದೆ. ಮನೆಗಳಲ್ಲಿ ಅಲಂಕಾರಿಕವಾಗಿ ಇಡಲು ಬಣ್ಣ ಹಚ್ಚಿದ, ಕುಸುರಿ ಕಲೆ ಇರುವ ಮಡಕೆಗಳೂ ಲಭ್ಯವಿದೆ.

‘ನಳ ಅಳವಡಿಸಿರುವ ಮಡಕೆಗಳಿಗೆ ಬೇಡಿಕೆ ಹೆಚ್ಚು.ಮಡಕೆ ನೀರು ಆರೋಗ್ಯಕ್ಕೂ ಒಳ್ಳೆಯದು. ಇತ್ತೀಚಿನ ವರ್ಷಗಳಲ್ಲಿ ಮಡಕೆಗಳಿಗೆ ಮತ್ತೆ ಬೇಡಿಕೆ ಹೆಚ್ಚುತ್ತಿದೆ. ಜನರು ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ಹುಡುಕುತ್ತಿದ್ದಾರೆ’ಎಂದು ವ್ಯಾಪಾರಿ ವೀರಣ್ಣ ಕುಂಬಾರ ಹೇಳಿದರು.

‘ಪ್ರತಿ ವರ್ಷ ಬೇಸಿಗೆಯಲ್ಲಿ ಹೊಸ ಮಡಕೆ ಖರೀದಿಸುತ್ತೇವೆ. ಬೇಸಿಗೆ ಮುಗಿಯುವರೆಗೆ ಮಡಕೆ ನೀರನ್ನೇ ಕುಡಿಯುತ್ತೇವೆ. ನಳ ಅಳವಡಿಸಿರುವುದರಿಂದ ಬಳಕೆಗೂ ಸುಲಭ’ಎಂದು ಗ್ರಾಹಕ ಮುತ್ತಣ್ಣ ಅಭಿಪ್ರಾಯಪಟ್ಟರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !