ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಮೊಗದಲ್ಲಿ ‘ನಗು ಮರಳಿಸಿದ’ ಪೊಲೀಸರು

ಗದಗ ಜಿಲ್ಲಾ ಪೊಲೀಸರಿಂದ ಪ್ರಾಪರ್ಟಿ ರಿಟರ್ನ್‌ ಪರೇಡ್‌; ಜನರಿಂದ ಮೆಚ್ಚುಗೆ
Last Updated 25 ನವೆಂಬರ್ 2020, 3:23 IST
ಅಕ್ಷರ ಗಾತ್ರ

ಗದಗ: ಆಪತ್ಕಾಲದಲ್ಲಿ ನೆರವಿಗೆ ಬರುತ್ತದೆ ಎಂಬ ಉದ್ದೇಶದಿಂದ ಕೊಂಡುಕೊಂಡಿದ್ದ ಚಿನ್ನ, ಅಪ್ಪ– ಅಮ್ಮ ಪ್ರೀತಿಯಿಂದ ಕೊಡಿಸಿದ್ದ ಬೈಕ್‌, ಮಗಳ ಮದುವೆ, ಸ್ವಂತಕ್ಕೊಂದು ಸೂರು ಕಟ್ಟಿಕೊಳ್ಳಲೆಂದು ಕೂಡಿಟ್ಟಿದ್ದ ಹಣವನ್ನು ರಾತ್ರೋರಾತ್ರಿ ಕಳೆದುಕೊಂಡು ದುಃಖದಲ್ಲಿದ್ದ ಸಂತ್ರಸ್ತರ ಮೊಗದಲ್ಲಿ ಗದಗ ಜಿಲ್ಲಾ ಪೊಲೀಸರು ಮರಳಿ ನಗು ಅರಳುವಂತೆ ಮಾಡಿದ್ದಾರೆ.

ನಗರದ ಪೊಲೀಸ್‌ ಭವನದಲ್ಲಿ ಮಂಗಳವಾರ ನಡೆದ ಪ್ರಾಪರ್ಟಿ ರಿಟರ್ನ್‌ ಪರೇಡ್‌ನಲ್ಲಿ ಮನೆ ಕಳ್ಳತನ, ಚೈನ್ ಕಳವು, ನಗದು ಕಳ್ಳತನ, ವಿವಿಧ ಬಗೆಯ ವಾಹನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 50 ಪ್ರಕರಣಗಳಲ್ಲಿ ₹39 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು, ಮಾಲೀಕರಿಗೆ ಮರಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್‌ ಎನ್. ಮಾತನಾಡಿ, ‘2019ರ ನ. 1ರಿಂದ 2020ರ ನ. 20ರ ಅವಧಿಯಲ್ಲಿ ದಾಖಲಾದ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಶೇ 56ರಷ್ಟು ಪ್ರಕರಣಗಳನ್ನು ಭೇದಿಸಲಾಗಿದೆ. ಈ ವೇಳೆ ಸ್ವತ್ತುಗಳನ್ನು ವಶಕ್ಕೆ ಪಡೆದು ಸಂಬಂಧಿಸಿದ ಮಾಲೀಕರಿಗೆ ವಿತರಿಸಲಾಗಿದೆ. ಬಾಕಿ ಉಳಿದಿರುವ ಪ್ರಕರಣಗಳನ್ನೂ ಶೀಘ್ರದಲ್ಲೇ ಭೇದಿಸಲಾಗುವುದು’ ಎಂದು ಹೇಳಿದರು.

ಮುಂಡರಗಿ ಠಾಣೆ ವ್ಯಾಪ್ತಿಯಲ್ಲಿನ ಆರು ಪ್ರಕರಣಗಳಲ್ಲಿ 90 ಗ್ರಾಂ. ಚಿನ್ನ, 1.85 ಕೆ.ಜಿ. ಬೆಳ್ಳಿ ಹಾಗೂ 2 ಬೈಕ್‌ (₹3.56 ಲಕ್ಷ), ನರಗುಂದ ಠಾಣೆ ವ್ಯಾಪ್ತಿಯಲ್ಲಿನ ಐದು ಪ್ರಕರಣಗಳಲ್ಲಿ 40 ಗ್ರಾಂ. ಚಿನ್ನ (₹1.58 ಲಕ್ಷ), ಬೆಟಗೇರಿ ಠಾಣೆ ವ್ಯಾಪ್ತಿಯಲ್ಲಿನ ಮೂರು ಪ್ರಕರಣಗಳಲ್ಲಿ 22.5 ಗ್ರಾಂ. ಚಿನ್ನ ಹಾಗೂ 4 ಬೈಕ್‌ (₹1.65 ಲಕ್ಷ), ಬಡಾವಣೆ ಠಾಣೆ ವ್ಯಾಪ್ತಿಯಲ್ಲಿನ ನಾಲ್ಕು ಪ್ರಕರಣಗಳಲ್ಲಿ 3 ಬೈಕ್‌ (₹90 ಸಾವಿರ), ಗಜೇಂದ್ರಗಡ ಠಾಣೆ ವ್ಯಾಪ್ತಿಯಲ್ಲಿನ ಮೂರು ಪ್ರಕರಣಗಳಲ್ಲಿ 5 ಬೈಕ್‌ (₹3.30 ಲಕ್ಷ) ಸ್ವತ್ತು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.

ಮುಳಗುಂದ ಠಾಣೆ ವ್ಯಾಪ್ತಿಯಲ್ಲಿನ ಒಂದು ಪ್ರಕರಣದಲ್ಲಿ ಒಂದು ವಾಹನ (₹6.20 ಲಕ್ಷ), ನರೇಗಲ್‌ ಠಾಣೆ ವ್ಯಾಪ್ತಿಯಲ್ಲಿನ ಒಂದು ಪ್ರಕರಣದಲ್ಲಿ 85 ಗ್ರಾಂ. ಚಿನ್ನ (₹2.10 ಲಕ್ಷ), ರೋಣ ಠಾಣೆ ವ್ಯಾಪ್ತಿಯಲ್ಲಿನ ನಾಲ್ಕು ಪ್ರಕರಣಗಳಲ್ಲಿ 42 ಗ್ರಾಂ. ಚಿನ್ನ, 1 ಮೋಟಾರ್ ಸೈಕಲ್ ಹಾಗೂ ಒಂದು ವಾಹನ (₹2.48 ಲಕ್ಷ), ಶಿರಹಟ್ಟಿ ಠಾಣೆ ವ್ಯಾಪ್ತಿಯಲ್ಲಿನ ಒಂದು ಪ್ರಕರಣದಲ್ಲಿ ₹86 ಸಾವಿರ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.

ಗದಗ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿನ ಏಳು ಪ್ರಕರಣಗಳಲ್ಲಿ 169 ಗ್ರಾಂ. ಚಿನ್ನ, 210 ಗ್ರಾಂ. ಬೆಳ್ಳಿ ಹಾಗೂ 2 ಬೈಕ್‌ (₹6.76 ಲಕ್ಷ), ಗದಗ ಶಹರ ಠಾಣೆ ವ್ಯಾಪ್ತಿಯಲ್ಲಿನ ಹದಿನೈದು ಪ್ರಕರಣಗಳಲ್ಲಿ 228 ಗ್ರಾಂ. ಚಿನ್ನ, 205 ಗ್ರಾಂ. ಬೆಳ್ಳಿ, 6 ಬೈಕ್‌ ಹಾಗೂ 2 ನಾಲ್ಕು ಚಕ್ರದ ವಾಹನ (₹3.56 ಲಕ್ಷ) ವಶಕ್ಕೆ ಪಡೆಯಲಾಗಿದೆ ಎಂದು ವಿವರ ನೀಡಿದರು.

‘ಇಲಾಖೆಗೆ ಸವಾಲು ಒಡ್ಡುವಂತಹ ಅನೇಕ ಪ್ರಕರಣಗಳನ್ನು ನಮ್ಮ ಅಧಿಕಾರಿಗಳು, ಸಿಬ್ಬಂದಿ ಚಾಕಚಕ್ಯತೆಯಿಂದ ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಚಿನ್ನಾಭರಣ, ದ್ವಿಚಕ್ರ ವಾಹನಗಳನ್ನು ಕಳೆದುಕೊಂಡು ತೊಂದರೆಯಲ್ಲಿದ್ದವರಿಗೆ ವಸ್ತುಗಳನ್ನು ಮರಳಿಸಲಾಗಿದೆ. ಇನ್ನೂ ಅನೇಕ ಪ್ರಕರಣಗಳ ತನಿಖೆ ಮುಂದುವರಿದಿದೆ’ ಎಂದು ಅವರು ಹೇಳಿದರು.

ಡಿವೈಎಸ್‍ಪಿಗಳಾದ ಎಸ್.ಕೆ.ಪ್ರಹ್ಲಾದ, ಶಿವಾನಂದ ಕಟಗಿ, ಸಿಪಿಐಗಳಾದ ಪಿ.ವಿ.ಸಾಲಿಮಠ, ಬಿ.ಎ.ಬಿರಾದಾರ, ರವಿ ಕಪ್ಪತ್ತನವರ, ಸುನೀಲ ಸವದಿ, ಡಿ.ಬಿ. ಪಾಟೀಲ, ಸುಧೀರ ಬೆಂಕಿ ಸೇರಿ ಎಲ್ಲ ಠಾಣೆಗಳ ಪಿಎಸ್‍ಐಗಳು, ಸಿಬ್ಬಂದಿ ಹಾಜರಿದ್ದರು.

‘ಒಂದೇ ತಿಂಗಳಲ್ಲಿ ಹಣ ವಾಪಸ್‌’

‘ನನ್ನ ಗಂಡ ಸೇನೆಯಿಂದ ನಿವೃತ್ತರಾದ ಬಳಿಕ ಮನೆ ಕಟ್ಟಿಸುತ್ತಿದ್ದೆವು. ಈ ವೇಳೆ ಕೂಡಿಟ್ಟಿದ್ದ ₹2 ಲಕ್ಷ ಕಳ್ಳತನ ಮಾಡಿದ್ದರು. ಪೊಲೀಸರು ಒಂದೇ ತಿಂಗಳಲ್ಲಿ ಕಳ್ಳರನ್ನು ಪತ್ತೆ ಹಚ್ಚಿ, ಹಣ ಮರಳಿಸಿದ್ದಾರೆ. ಈ ಮೂಲಕ ಪೊಲೀಸರ ಮೇಲಿನ ನಂಬಿಕೆ, ಗೌರವ ಹೆಚ್ಚಾಗಿದೆ’ ಎಂದು ಗಜೇಂದ್ರಗಡದ ರೇಷ್ಮಾ ಗಾರಗಿ ಖುಷಿ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT