ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡದಿಂದ ಹೊರಬರಲು ಕ್ರೀಡೆ ಸಹಕಾರಿ: ಜಿಲ್ಲಾಧಿಕಾರಿ ಸುಂದರೇಶ್‌ ಬಾಬು

ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮ: ಜಿಲ್ಲಾಧಿಕಾರಿ ಸುಂದರೇಶ್‌ ಬಾಬು ಅಭಿಮತ
Last Updated 30 ಮೇ 2022, 3:53 IST
ಅಕ್ಷರ ಗಾತ್ರ

ಗದಗ: ‘ಸಾರ್ವಜನಿಕ ಆಡಳಿತದ ಕೆಲಸದಲ್ಲಿರುವ ಸರ್ಕಾರಿ ನೌಕರರು ನಿತ್ಯವೂ ಒತ್ತಡ ಎದುರಿಸುತ್ತಾರೆ. ಅದರಿಂದ ಹೊರಬರಲು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿ’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ನುಡಿದರು.

ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಶನಿವಾರ ನಡೆದ ಪ್ರಸಕ್ತ ಸಾಲಿನ ವಾರ್ಷಿಕ ಮಹಾಸಭೆ ಮತ್ತು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನೌಕರಸ್ಥರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಉತ್ಸಾಹದಿಂದ ಹೆಚ್ಚಿನ ಕರ್ತವ್ಯ ನಿರ್ವಹಿಸಲು ಸಂಘದ ಕಾರ್ಯಕ್ರಮಗಳು ಪ್ರೇರಣೆಯಾಗಿವೆ’ ಎಂದರು.

‘ಸರ್ಕಾರಿ ನೌಕರರ ಸಂಘ ಎಂದರೇ ಕೇವಲ ಪ್ರತಿಭಟನೆ, ಮುಷ್ಕರ ನಡೆಸುವ ಸಂಘಟನೆ ಎನ್ನುವ ದಿನಗಳಲ್ಲಿ ಚರ್ಚೆ ಮೂಲಕವೇ ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಮೂಲಕ ರಾಜ್ಯದಲ್ಲಿಯೇ ಸಂಘವು ಮಾದರಿ ಎನಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘಧ ಗದಗ ಜಿಲ್ಲಾ ಘಟಕ ಅಧ್ಯಕ್ಷ ರವಿ ಗುಂಜೀಕರ‌ ಮಾತನಾಡಿ, ‘ಒಒಡಿ ಸೌಲಭ್ಯ ನೀಡಿದರೂ ನೌಕರ ವರ್ಗದವರು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳದೇ ಇರುವುದು ಬೇಸರದ ಸಂಗತಿ. ಮುಂದಿನ ವರ್ಷವಾದರೂ ನೌಕರರು ಆಸಕ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದರು.

ಇದೇ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸರ್ಕಾರಿ ನೌಕರರ ಒಟ್ಟು 44 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಅಲ್ಲದೇ, ಸಂಘದ 300 ಜಿಲ್ಲಾ ಕ್ರೀಡಾಪಟುಗಳಿಗೆ ಟ್ರ್ಯಾಕ್‌ಸೂಟ್‌ ವಿತರಿಸಲಾಯಿತು.

ಎಸ್.ಡಿ.ಗಾಂಜಿ, ಸತೀಶ ಕಟ್ಟಿಮನಿ, ಡಾ.ಬಸವರಾಜ ಬಳ್ಳಾರಿ, ಡಾ.ಶರಣು ಗೋಗೇರಿ, ಎಸ್.ಆರ್.ಬಂಡಿ, ಸಿದ್ದಪ್ಪ ಲಿಂಗದಾಳ, ಆರ್.‌ ಎಂ.ನಿಂಬನಾಯ್ಕರ ಇದ್ದರು.

ಸರ್ಕಾರಿ ನೌಕರರು ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆಗಿಂತಲೂ ಚರ್ಚೆ ಮಾರ್ಗ ಅನುಸರಿಸಿದರೆ, ಆರೋಗ್ಯಕರ ವಾತಾವರಣ ನಿರ್ಮಾಣವಾಗಿ ಸಮಸ್ಯೆ ತ್ವರಿತ ಪರಿಹರಿಸಬಹುದು

ಎಂ.ಸುಂದರೇಶ್‌ ಬಾಬು, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT