ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಶೇ 89.13ರಷ್ಟು ವಿದ್ಯಾರ್ಥಿಗಳು ಪಾಸ್‌

ಎಸ್ಸೆಸ್ಸೆಲ್ಸಿ: ವಿದ್ಯಾರ್ಥಿನಿಯರ ಮೇಲುಗೈ; ಜಿಲ್ಲೆಯಲ್ಲಿ ಒಟ್ಟು 13,729 ಮಂದಿ ಉತ್ತೀರ್ಣ
Last Updated 20 ಮೇ 2022, 5:15 IST
ಅಕ್ಷರ ಗಾತ್ರ

ಗದಗ: 2021–22ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಗದಗ ಜಿಲ್ಲೆ ಶೇ 89.13 ಫಲಿತಾಂಶ ದಾಖಲಿಸುವ ಮೂಲಕ ‘ಎ’ಗ್ರೇಡ್‌ನಲ್ಲಿ ಸ್ಥಾನ ಪಡೆದಿದೆ.

ಜಿಲ್ಲೆಯ ಒಟ್ಟು 15,403 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 13,729 ಮಂದಿ ಉತ್ತೀರ್ಣರಾಗಿದ್ದಾರೆ.

ಮೂವರು ವಿದ್ಯಾರ್ಥಿಗಳು 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ. 9 ವಿದ್ಯಾರ್ಥಿಗಳು 623 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಏಳು ವಿದ್ಯಾರ್ಥಿಗಳು 622 ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ 22 ಸರ್ಕಾರಿ ಶಾಲೆಗಳು, 6 ಅನುದಾನಿತ ಹಾಗೂ 27 ಅನುದಾನ ರಹಿತ ಶಾಲೆಗಳು ಶೇ100ರಷ್ಟು ಫಲಿತಾಂಶ ದಾಖಲಿಸಿವೆ. ಜಿಲ್ಲೆಯಲ್ಲಿ ಮೂರು ಶಾಲೆಗಳು ಶೇ 40ಕ್ಕಿಂತ ಕಡಿಮೆ ಫಲಿತಾಂಶ ದಾಖಲಿಸಿವೆ.

ಗದಗ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ 13.64 ಅಂದರೆ 1,873 ಮಕ್ಕಳು ‘ಎ ಪ್ಲಸ್‌’ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 3,235 ಮಂದಿ ‘ಎ’ ಶ್ರೇಣಿ, 3,140 ಮಂದಿ ‘ಬಿ ಪ್ಲಸ್‌’ ಶ್ರೇಣಿ, 2,992 ಮಂದಿ ‘ಬಿ’ ಶ್ರೇಣಿ, 2,053 ಮಂದಿ ‘ಸಿ ಪ್ಲಸ್‌’ ಮತ್ತು 436 ಮಂದಿ ವಿದ್ಯಾರ್ಥಿಗಳು ‘ಸಿ’ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಶಾಲೆ ಶೂನ್ಯ ಫಲಿತಾಂಶ ದಾಖಲಿಸಿಲ್ಲ.

‘2020ರಲ್ಲಿ ಶೇ 56 ಫಲಿತಾಂಶ ದಾಖಲಿಸಿದ್ದ ಗದಗ ಜಿಲ್ಲೆ, 2021ರಲ್ಲಿ ಕೋವಿಡ್‌ ಕಾರಣದಿಂದಾಗಿ ಶೇ 100ರಷ್ಟು ಫಲಿತಾಂಶ ದಾಖಲಿಸಿತ್ತು. ಅಂಕಿ ಅಂಶಗಳನ್ನು ಗಮನಿಸಿದಾಗ ಜಿಲ್ಲೆ ಕಳೆದ ಎರಡು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸುತ್ತಿದೆ’ ಎಂದು ಡಿಡಿಪಿಐ ಬಸವಲಿಂಗಪ್ಪ ಜಿ.ಎಂ. ತಿಳಿಸಿದ್ದಾರೆ.

‘ಈ ವರ್ಷ 625ಕ್ಕೆ 616ರಿಂದ 624ರ ವರೆಗೆ ಅಂಕ ಪಡೆದ 88 ಮಂದಿ ವಿದ್ಯಾರ್ಥಿಗಳು ಇದ್ದಾರೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಫಲಿತಾಂಶ ದಾಖಲಿಸಿದ್ದಾರೆ. ಗದಗ ಜಿಲ್ಲೆಯಲ್ಲಿ ನರಗುಂದ ತಾಲ್ಲೂಕು ಶೇ 91.36ರಷ್ಟು ಫಲಿತಾಂಶದೊಂದಿಗೆ ‌ಜಿಲ್ಲೆ ಮೊದಲ ಸ್ಥಾನ ಪಡೆದಿದ್ದರೆ, ಶೇ 85.76ರಷ್ಟು ಅಂಕಗಳನ್ನು ಪಡೆದು ಗದಗ ಶಹರ ಕೊನೆ ಸ್ಥಾನದಲ್ಲಿದೆ’ ಎಂದು ಅವರು ತಿಳಿಸಿದ್ದಾರೆ.

‘2022ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗದಗ ಜಿಲ್ಲೆ ಉತ್ತಮ ಸಾಧನೆ ಮಾಡಿದ್ದು, ಟಾಪ್‌ ಟೆನ್‌ ಒಳಗೆ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಶಿಕ್ಷಣ ಇಲಾಖೆಯಿಂದ ಪಟ್ಟಿ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆ ಉತ್ತಮ ಸಾಧನೆ ಮಾಡಲು ಜಿಲ್ಲಾಡಳಿತ ಹಾಗೂ ಶಿಕ್ಷಕ ವೃಂದದ ಸಹಕಾರ ಸ್ಮರಣೀಯ’ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ಟಾಪರ್‌ಗಳು

*ನವೀನ್‌ಗೌಡ ಮಲ್ಲನಗೌಡ (624) ನರಗುಂದ ತಾಲ್ಲೂಕಿನ ಬೆನಕನಕೊಪ್ಪದ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿ
*ಮೆಹಕ್‌ಅಫ್ರೀನ್‌ ಜಕ್ಕಲಿ (624) ಗದಗ ನಗರದ ಲೊಯೊಲಾ ಪ್ರೌಢಶಾಲೆ
*ವಾಣಿಶ್ರೀ ಲಕ್ಷ್ಮಣಗೌಡ ಕುಲಕರ್ಣಿ (624) ನರಗುಂದ ತಾಲ್ಲೂಕಿನ ಬೆನಕನಕೊಪ್ಪದ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT