ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಸಂರಕ್ಷಣೆಗೆ ಕಲ್ಲು ಗೋಡೆ ನಿರ್ಮಾಣ

ನರೇಗಾ ಯೋಜನೆಯಡಿ ಅರಣ್ಯ ಇಲಾಖೆಯ ವಿನೂತನ ಪ್ರಯೋಗ
Last Updated 11 ಡಿಸೆಂಬರ್ 2020, 7:21 IST
ಅಕ್ಷರ ಗಾತ್ರ

ಶಿರಹಟ್ಟಿ: ನರೇಗಾ ಯೋಜನೆ ಅಡಿಯಲ್ಲಿ ಚರಂಡಿ ರಿಪೇರಿ, ರಸ್ತೆ ದುರಸ್ತಿ, ಸೇತುವೆ ಕಾಮಗಾರಿಗಳು, ಬದು ನಿರ್ಮಾಣ, ಇಂಗು ಗುಂಡಿಗಳ ನಿರ್ಮಿಸುವುದು ಮತ್ತು ಕರೆ ಕಟ್ಟೆಗಳಲ್ಲಿನ ಹೂಳೆತ್ತುವ ಸಮುದಾಯ ಕಾರ್ಯಗಳನ್ನು ನಡೆಸುವುದು ಸಾಮಾನ್ಯ. ಇದರ ಜತೆಗೆ ಈಗ ಕಾಡನ್ನು ಸಂರಕ್ಷಿಸಲು ಕಲ್ಲು ಗೋಡೆ ನಿರ್ಮಿಸಿರುವುದು ವಿನೂತನ ಪ್ರಯೋಗವಾಗಿದೆ.

‘ತಾಲ್ಲೂಕಿನ ಶಿರಹಟ್ಟಿ ಪ್ರಾದೇಶಿಕ ಅರಣ್ಯ ವಲಯದ ಕಡಕೋಳ, ಜಲ್ಲಿಗೇರಿ, ಹೊಸೂರು, ಸಗ್ನಳ್ಳಿ, ಕುಸಲಾಪುರ ಅರಣ್ಯ ವ್ಯಾಪ್ತಿಯ ಕಾಡನ್ನು ಸಂರಕ್ಷಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸೂರ್ಯಸೇನ್‌ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಹೊಸದಾಗಿ ಯೋಚಿಸಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ₹7.51 ಲಕ್ಷದಲ್ಲಿ ಅರಣ್ಯದಲ್ಲೇ ದೊರೆಯುವ ಕಲ್ಲುಗಳನ್ನು ಬಳಕೆ ಮಾಡಿಕೊಂಡು 1.745 ಕಿ.ಮೀ. ಕಲ್ಲು ಗೋಡೆ ನಿರ್ಮಿಸಲಾಗಿದೆ’ ಎಂದು ಶಿರಹಟ್ಟಿ ವಲಯ ಅರಣ್ಯಾಧಿಕಾರಿ ಫಯಾಜ್‌ ಖಾಜಿ ಮಾಹಿತಿ ನೀಡಿದ್ದಾರೆ.

ಕೋವಿಡ್‌-19 ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಪ್ರದೇಶ ಸಾವಿರಾರು ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಇಲಾಖೆ ವತಿಯಿಂದ 2,732 ಮಾನವ ದಿನಗಳ ಕೆಲಸ ಒದಗಿಸಲಾಗಿದೆ ಎಂದು ಕಡಕೋಳ ಉಪ ವಲಯ ಅರಣ್ಯಾಧಿಕಾರಿ ಎಸ್.ಬಿ.ಪೂಜಾರ ತಿಳಿಸಿದರು.

ಈ ರೀತಿ ಗೋಡೆ ನಿರ್ಮಾಣ ಮಾಡುವುದರಿಂದ ಅರಣ್ಯ ಪ್ರದೇಶ ಗಡಿಯನ್ನು ಗುರುತಿಸಲು ಸಹಕಾರಿಯಾಗುವುದರ ಜೊತೆಗೆ ಮಾನವ ಮತ್ತು ಪ್ರಾಣಿ ಸಂಘರ್ಷ ಕಡಿಮೆಯಾಗುತ್ತದೆ. ಕಾಡು ಪ್ರಾಣಿಗಳಿಂದ ರೈತರ ಬೆಳೆಗೆ ಹಾನಿ ಕಡಿಮೆ. ಕಾಡಿನಲ್ಲಿ ಆಕಸ್ಮಿಕವಾಗಿ ಸಂಭವಿಸುವ ಅಗ್ನಿ ಅವಘಡಗಳನ್ನು ತಡೆಯಲು ಸಹಕಾರಿ ಎಂದು ಹೇಳಿದರು.

ಅರಣ್ಯ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳಿಂದ ಮರ, ಪರಿಸರ ಮತ್ತು ಜೀವ ವೈವಿಧ್ಯದ ರಕ್ಷಣೆ, ಅರಣ್ಯ ಒತ್ತುವರಿ ಸಮಸ್ಯೆಗೆ ಮುಕ್ತಿ, ಮಣ್ಣಿನ ಸವಕಳಿ ತಡೆಗಟ್ಟುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಕಾಡಿನ ರಕ್ಷಣೆಗೆ ಸಾಂಪ್ರದಾಯಿಕ ವಿಧಾನವನ್ನು ಅನುಸರಿಸಿ ಗೋಡೆ ನಿರ್ಮಿಸಲಾಗಿದ್ದು, ಕಾಡಿನ ಸೌಂದರ್ಯ ಹೆಚ್ಚಲು ಕಾರಣವಾಗಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT