ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಪಕ್ಷಗಳ ಸಮಬಲದ ಹೋರಾಟ

ಪಾವಗಡ: ಸಮಸ್ಯೆಗಳನ್ನೇ ಹೊದ್ದು ಮಲಗಿರುವ ಕ್ಷೇತ್ರ
Last Updated 6 ಮೇ 2018, 14:09 IST
ಅಕ್ಷರ ಗಾತ್ರ

ತುಮಕೂರು: ಪಾವಗಡ ಸೋಲಾರ್ ಪಾರ್ಕ್ ಕಾರಣಕ್ಕೆ ವಿಶ್ವದ ಗಮನ ಸೆಳೆದಿದೆ. ಜಿಲ್ಲೆಯ ಗಡಿಭಾಗದ ಈ ತಾಲ್ಲೂಕು ಅಭಿವೃದ್ಧಿಯಲ್ಲಿ ಹಿಂದುಳಿದ ಹಣೆಪಟ್ಟಿ ಹೊಂದಿದೆ. ಹಳ್ಳಿಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ನೀಗಿಲ್ಲ! ಫ್ಲೋರೈಡ್ ನೀರಿನ ಸಮಸ್ಯೆ ಇಲ್ಲಿನ ರಾಜಕಾರಣದ ಪ್ರಮುಖ ವಿಷಯ.

ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಪಾವಗಡ ಕ್ಷೇತ್ರದಲ್ಲಿ ಆಂಧ್ರಪ್ರದೇಶ ಶೈಲಿಯ ರಾಜಕಾರಣದ ಪ್ರಭಾವ ಹೆಚ್ಚಿದೆ. ನಕ್ಸಲ್ ಹೆಜ್ಜೆಯ ಹಳೇ ಗುರುತು ಕಾಣುತ್ತವೆ. ಶುದ್ಧ ಕುಡಿಯುವ ನೀರಿನ ಸಮಸ್ಯೆ, ಮೂಲಸೌಕರ್ಯಗಳ ಕೊರತೆ, ನಿರುದ್ಯೋಗ ಸಮಸ್ಯೆ ಹೀಗೆ ಸಮಸ್ಯೆಗಳು ಹೊದ್ದು ಮಲಗಿವೆ.  ಮಟ್ಕಾ ಹಾವಳಿಯೂ ಕ್ಷೇತ್ರವನ್ನು ಬಿಟ್ಟಿಲ್ಲ!

ಇಲ್ಲಿಯವರೆಗೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರಾ ನೇರ ಹಣಾಹಣಿ ಇದೆ. ಈ ಬಾರಿ ಬಿಜೆಪಿಯಿಂದ ನವೀಕರಿಸಬಹುದಾದ ಇಂಧನ ನಿಗಮದ (ಕ್ರೆಡಲ್) ಮಾಜಿ ವ್ಯವಸ್ಥಾಪಕ ನಿರ್ದೇಶಕ ಬಲರಾಂ ಸ್ಪರ್ಧಿಸಿದ್ದಾರೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಇದೆ.

ಕಾಂಗ್ರೆಸ್‌ನಿಂದ ಮಾಜಿ ಸಚಿವ ವೆಂಕಟರಮಣಪ್ಪ, ಜೆಡಿಎಸ್‌ನಿಂದ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹುರಿಯಾಳುಗಳು. ಕಳೆದ ಮೂರು ಚುನಾವಣೆಗಳಲ್ಲಿಯೂ ಈ ಇಬ್ಬರು ಕಣದಲ್ಲಿ ಇದ್ದರು. ಬಲರಾಂ ತಾಲ್ಲೂಕಿನವರೇ ಆದರೂ ರಾಜಕೀಯವಾಗಿ ಜನರಿಗೆ ಹೊಸಮುಖ. ಅಲ್ಲದೆ ಸೋಲಾರ್ ಪಾರ್ಕ್ ನಿರ್ಮಾಣದ ಮೂಲಕ ಹೆಚ್ಚು ಜನರಿಗೆ ಪರಿಚಿತರಾದವರು.

ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುವ ಅವರ ಪ್ರಯತ್ನ ಯಶ ಕಾಣಲಿಲ್ಲ. ಕಣಕ್ಕಿಳಿಯಲೇಬೇಕು ಎಂಬ ಅವರ ಆಸೆಗೆ ಕೈ ಜೋಡಿಸಿದ್ದು ಬಿಜೆಪಿ. ಹೀಗಾಗಿ, ಆ ಪಕ್ಷದಿಂದ ಸ್ಪರ್ಧಿಸಿದ್ದಾರೆ.

2004ರಲ್ಲಿ ಜೆಡಿಎಸ್ ಅಭ್ಯರ್ಥಿ ತಿಮ್ಮರಾಯಪ್ಪ ವಿರುದ್ಧ ಪರಾಭವ ಗೊಂಡರು. 2008ರಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದಾಗ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಕಂಡರು. ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರ ಬೆಂಬಲಿಸಿದರು. ರೇಷ್ಮೆ ಸಚಿವರಾಗಿದ್ದರು.

2013ರಲ್ಲಿ ಮತ್ತೆ ಕಾಂಗ್ರೆಸ್‌ ಸೇರಿ ಟಿಕೆಟ್ ಗಿಟ್ಟಿಸುವ ಪ್ರಯತ್ನ ಕೈಗೂಡಲಿಲ್ಲ. ಬದಲಾಗಿ ಅವರ ಪುತ್ರ ವೆಂಕಟೇಶ್ ಟಿಕೆಟ್ ಪಡೆದರು.ಆದರೆ ಅವರ ಪುತ್ರ ಪರಾಭವ ಗೊಂಡರು. ತಿಮ್ಮರಾಯಪ್ಪ ಗೆಲುವು ಸಾಧಿಸಿದ್ದರು.

ಸಚಿವರಾಗಿ ಕ್ಷೇತ್ರಕ್ಕೆ ನಿರುದ್ಯೋಗ ಹೋಗಲಾಡಿಸುವ ಯೋಜನೆ ತರಲಿಲ್ಲ. ಶಾಶ್ವತವಾಗಿ ನೀರಿನ ಸಮಸ್ಯೆ ಹೋಗಲಾಡಿಸಲು ಪ್ರಯತ್ನಿಸಲಿಲ್ಲ ಎಂಬ ಬೇಸರ ಜನರಲ್ಲಿದೆ. ಇಷ್ಟೆಲ್ಲ ಬೇಸರ ಇದ್ದರೂ ವೆಂಕಟರಮಣಪ್ಪ ವೈಯಕ್ತಿಕ ವರ್ಚಸ್ಸಿನಿಂದ ಕ್ಷೇತ್ರದಲ್ಲಿ ಹಿಡಿತ ಇಟ್ಟುಕೊಂಡಿ ದ್ದಾರೆ. ಇದೇ ಅವರ ಶಕ್ತಿ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ಅಭ್ಯರ್ಥಿ ಹಾಗೂ ಶಾಸಕ ತಿಮ್ಮರಾಯಪ್ಪ ಜನರ ಸಮಸ್ಯೆಗಳಿಗೆ ಕೈಲಾದಷ್ಟು ಸ್ಪಂದಿಸುತ್ತಾರೆ. ಕುಡಿಯುವ ನೀರು ಪೂರೈಕೆ ಯೋಜನೆ, ಮೂಲಸೌಕರ್ಯ ಕುರಿತ ಹೋರಾಟದಲ್ಲಿ ಜನರೊಂದಿಗೆ ಬೀದಿಗಿಳಿದು ಹೋರಾಟಕ್ಕೂ ಬಂದಿದ್ದಾರೆ. ಸಾರ್ವಜನಿಕರಿಗೆ ಅನಗತ್ಯವಾಗಿ ತೊಂದರೆ ಕೊಡದ ವ್ಯಕ್ತಿ. ಶಾಸಕರ ಅನುದಾನವನ್ನು ಬಳಸಿಕೊಂಡು ಕೆಲಸ ಮಾಡಿದ್ದಾರೆ ಎಂಬ ಮಾತಿದೆ.

ಚುನಾವಣೆ ಬಂದಾಗ ಯೋಜನೆ

‘ಕೇವಲ ಚುನಾವಣೆ ಬಂದಾಗ ಮಾತ್ರ ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ಭದ್ರಾ, ತುಂಗಭದ್ರಾ ನೀರು ಹರಿಸುವ ಯೋಜನೆ ನೆನಪಾಗುತ್ತವೆ. ಚುನಾವಣೆ ಸಮೀಪಿಸಿದಾಗ ಭರವಸೆ ನೀಡಿ ಹೋರಾಟದ ನಾಟಕ ಮಾಡುತ್ತಾರೆ. ಚುನಾವಣೆ ಮುಗಿದ ಬಳಿಕ ಮರೆತು ಬಿಡುತ್ತಾರೆ’ ಎಂದು ವೈದ್ಯ ಡಾ.ನರೇಂದ್ರ ಬಾಬು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ವೈಯಕ್ತಿಕ ಲಾಭ ಆಗುವ ದೃಷ್ಟಿಕೋನದಿಂದ ತಮಗೆ ಲಾಭವಾಗುವ ಪಕ್ಷಗಳತ್ತ ಮುಖಂಡರು ಹೋಗುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT