ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ನಗರದ ಹಸಿರೀಕರಣಕ್ಕೆ ಕ್ರಮ ವಹಿಸಿ

ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು
Last Updated 22 ಸೆಪ್ಟೆಂಬರ್ 2020, 13:27 IST
ಅಕ್ಷರ ಗಾತ್ರ

ಗದಗ: ‘ಕೆರೆ, ರಾಜ ಕಾಲುವೆ ಹಾಗೂ ಖಾಲಿ ಜಾಗಗಳ ಒತ್ತುವರಿ ತೆರವು ಕಾರ್ಯವನ್ನು ತ್ವರಿತವಾಗಿ ಮುಗಿಸಬೇಕು. ಒತ್ತುವರಿ ತೆರೆವುಗೊಳಿಸಿದ ಕೆರೆ ಪಕ್ಕದಲ್ಲಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸಸಿಗಳನ್ನು ನೆಟ್ಟು ಹಸಿರೀಕರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಅಧಿಕಾರಿಗಳಿಗೆ ಸೂಚಿಸಿದರು.

ಗದಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ತೆರವುಗೊಳಿಸಿದ ಕೆರೆಗಳು ಮತ್ತೆ ಒತ್ತುವರಿ ಆಗದಂತೆ ಗಡಿ ಗುರುತಿಸಬೇಕು. ಕೊಳಚೆ ನೀರು ಕೆರೆಗೆ ಸೇರದಂತೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿರುವ ಎಲ್ಲ ಉದ್ಯಾನಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಕಲೆ ಹಾಕಿ, ಸ್ಥಳೀಯರ ಸಹಭಾಗಿತ್ವದೊಂದಿಗೆ ಅವುಗಳ ಪುನಶ್ಚೇತನಕ್ಕೆ ಕ್ರಿಯಾಯೋಜನೆ ರೂಪಿಸಬೇಕು’ ಎಂದು ತಿಳಿಸಿದರು.

‘ಕೆರೆಯ ಸುತ್ತಲೂ ಸ್ವಚ್ಛತೆ ಕಾಪಾಡುವುದರ ಜೊತೆಗೆ ಖಾಲಿ ಜಾಗದಲ್ಲಿ ಸಸಿಗಳನ್ನು ನೆಡಬೇಕು. ನಗರ ಪ್ರದೇಶದ ಉದ್ಯಾನಗಳನ್ನು ಹಸಿರೀಕರಣಗೊಳಿಸಲು ಅರಣ್ಯಾಧಿಕಾರಿಗಳ ಜತೆಗೆ ಚರ್ಚಿಸಿ ಯೋಜನೆ ಸಿದ್ಧಪಡಿಸಬೇಕು’ ಎಂದು ಹೇಳಿದರು.

‘ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳು ಸಾರ್ವಜನಿಕರಿಂದ ಸಕಾಲಕ್ಕೆ ತೆರಿಗೆ ವಸೂಲಿ ಮಾಡಬೇಕು. ಸ್ಥಳೀಯ ಸಂಸ್ಥೆಗಳ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಕ್ರಮ ವಹಿಸಬೇಕು. ವ್ಯಾಪಾರ ಪರವಾನಗಿ ಪಡೆಯದ ವರ್ತಕರನ್ನು ಅದರ ವ್ಯಾಪ್ತಿಗೆ ಒಳಪಡಿಸಬೇಕು. ಒಳಚರಂಡಿ, ಸ್ವಚ್ಛತೆ, ಬಿದಿ ದೀಪ ನಿರ್ವಹಣೆ, ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳನ್ನು ಆರು ತಿಂಗಳ ಒಳಗೆ ಅಭಿವೃದ್ಧಿ ಪಡಿಸಬೇಕು’ ಎಂದು ತಿಳಿಸಿದರು.

‘ನರಗುಂದ ಹಾಗೂ ಶಿರಹಟ್ಟಿ ಪಟ್ಟಣದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಕೂಡಲೇ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಆತ್ಮ ನಿರ್ಭರ ಭಾರತ ಯೋಜನೆ ಅಡಿ ಎಲ್ಲ ಬೀದಿ ವ್ಯಾಪಾರಸ್ಥರ ಸರ್ವೇ ಕಾರ್ಯ ಪೂರ್ಣಗೊಳಿಸಿ ಯೋಜನೆಯ ಕಿರುಸಾಲ, ಸಹಾಯಧನ ಒದಗಿಸಲು ಮುಖ್ಯಾಧಿಕಾರಿಗಳು ಕ್ರಮವಹಿಸಬೇಕು. ಆಶ್ರಯ ಮನೆಗಳ ನಿರ್ಮಾಣ ಯೋಜನೆಯಡಿ ದೇವದಾಸಿ, ಅಲೆಮಾರಿ, ಅರೆ ಅಲೆಮಾರಿ, ವೃದ್ಧರು ಹಾಗೂ ಅಂಗವಿಕಲರಿಗೆ ಮನೆಗಳ ಹಂಚಿಕೆ ಸಮಯದಲ್ಲಿ ಆದ್ಯತೆ ನೀಡಬೇಕು’ ಎಂದು ಸೂಚಿಸಿದರು.

‘ಕೋವಿಡ್-19 ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ಪೌರಕಾರ್ಮಿಕರ ಆರೋಗ್ಯ ಕಾಳಜಿಗಾಗಿ ಪ್ರತಿವಾರ ಅವರಿಗೆ ಮಾಸ್ಕ್‌, ಸುರಕ್ಷತಾ ಪರಿಕರಗಳನ್ನು ಪೂರೈಸಬೇಕು. ನಗರಸಭೆ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿ ಇರುವವರು ನಿಯಮ ಉಲ್ಲಂಘಿಸದಂತೆ ನಿಗಾ ವಹಿಸಬೇಕು’ ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್‌ ಎಸ್.ಎನ್., ಗದಗ- ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ ಜಾದವ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಎಂಜಿನಿಯರ್‌ಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT