ಶನಿವಾರ, ಸೆಪ್ಟೆಂಬರ್ 21, 2019
21 °C
ರಂಜಾನ್ ಮಾಸದ ಆರಂಭದಲ್ಲೇ ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ

ತರಕಾರಿ ಬೆಲೆ ಮತ್ತಷ್ಟು ತುಟ್ಟಿ

Published:
Updated:
Prajavani

ಗದಗ: ಬೇಸಿಗೆ ಝಳದ ಜತೆಗೆ ಹಣ್ಣು ಮತ್ತು ತರಕಾರಿ ಬೆಲೆ ಏರಿಕೆಯಿಂದ ಗ್ರಾಹಕರು ಬೇಸತ್ತು ಹೋಗಿದ್ದಾರೆ. ರಂಜಾನ್ ಮಾಸದ ಆರಂಭದಲ್ಲೇ ಬೆಲೆ ಏರಿಕೆ ಬಿಸಿಯೂ ಗ್ರಾಹಕರನ್ನು ಜೋರಾಗಿಯೇ ಕಾಡುತ್ತಿದೆ.

ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ, ಗದಗ ಮಾರುಕಟ್ಟೆಗೆ ತುಮಕೂರು, ದಾವಣಗೆರೆ ಹಾಗೂ ಬಾಗಲಕೋಟೆಯಿಂದ ಆವಕವಾಗುತ್ತಿದ್ದ ತರಕಾರಿ ಪ್ರಮಾಣ ತುಂಬ ಇಳಿಕೆಯಾಗಿದೆ. ಮುಂಡರಗಿ, ರೋಣ, ಶಿರಹಟ್ಟಿ, ಗಜೇಂದ್ರಗಡ ಸೇರಿದಂತೆ ಸ್ಥಳೀಯವಾಗಿಯೂ ತಾಜಾ ತರಕಾರಿ ಪೂರೈಕೆಯಲ್ಲಿ ಇಳಿಮುಖವಾಗಿದೆ. ಪೂರೈಕೆ ಕಡಿಮೆಯಾಗಿದ್ದರಿಂದ ಬೆಲೆಯಲ್ಲಿ ಏರಿಕೆ ಕಂಡಿದೆ.

ವಾರದ ಹಿಂದೆ ಕೆ.ಜಿ.ಗೆ ₹80 ದಾಟಿದ್ದ ಬೀನ್ಸ್‌ ಸದ್ಯ 120ಕ್ಕೆ ಏರಿಕೆಯಾಗಿದೆ. ಕ್ಯಾರೆಟ್‌, ಹೀರೇಕಾಯಿ, ಹಾಗಲಕಾಯಿ ಬೆಲೆ ಕೆ.ಜಿಗೆ ₹60ಕ್ಕೆ ಏರಿಕೆಯಾಗಿದೆ. ಜವಾರಿ ಮೆಣಸಿನಕಾಯಿ ಬೆಲೆ ಕೆ.ಜಿ.ಗೆ ₹90 ಇದೆ. ಈರುಳ್ಳಿ ಮತ್ತು ಟೊಮೊಟೊ ಧಾರಣೆಯಲ್ಲಿ ಹೆಚ್ಚಳವಾಗಿದೆ. ಈರುಳ್ಳಿ ಕೆ.ಜಿ.ಗೆ ₹30ರಂತೆ ಟೊಮೊಟೊ ₹40ರಂತೆ ಮಾರಾಟವಾಗುತ್ತಿವೆ.

ಸೊಪ್ಪುಗಳ ದರದಲ್ಲೂ ಸ್ವಲ್ಪ ಏರಿಕೆಯಾಗಿದೆ. ಕೊತ್ತಂಬರಿ, ಮೆಂತೆ, ಸಬ್ಬಸಗಿ, ಕಿರಕಸಾಲಿ, ಪುದೀನಾ, ಪುಂಡಿಪಲ್ಲೆ, ಪಾಲಕ್ ಸೊಪ್ಪುಗಳು ₹10ಕ್ಕೆ 2 ಕಟ್ಟಿನಂತೆ ಮಾರಾಟವಾಗುತ್ತಿವೆ.

ಕಲ್ಲಂಗಡಿ, ಕರಬೂಜ, ಕಿತ್ತಳೆ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ನಾಗಪುರ ಮತ್ತು ಮಡಿಕೇರಿ ಕಿತ್ತಳೆ ಆವಕವಾಗುತ್ತಿದ್ದು, ಕೆ.ಜಿ.ಗೆ ₹90 ದರದಲ್ಲಿ ಮಾರಾಟ ಆಗುತ್ತಿದೆ. ದಾಳಿಂಬೆ ಕೆ.ಜಿ.ಗೆ ₹80ಕ್ಕೆ, ಸೇಬು ₹ 100ರಿಂದ ₹200, ಮೋಸಂಬಿ ₹100, ಸೀತಾಫಲ ₹ 70, ಪಪ್ಪಾಯಿ ಕೆ.ಜಿ.ಗೆ ₹40ಕ್ಕೆ ಮಾರಾಟವಾಗುತ್ತಿವೆ.

Post Comments (+)