ಲಕ್ಷ್ಮೇಶ್ವರ: ‘ಶಿಕ್ಷಕರಾದವರು ಪ್ರಾಮಾಣಿಕವಾಗಿ ತಮ್ಮ ಸೇವೆಯನ್ನು ಮಾಡಬೇಕು. ಅಂದಾಗ ಮಾತ್ರ ಶಾಂತಿಯ ಸಮಾಜ ನಿರ್ಮಾಣವಾಗಲು ಸಾಧ್ಯ‘ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಜ.ವೀರಗಂಗಾಧರ ರಂಭಾಪುರಿ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪುರಸಭೆ ಉಮಾ ವಿದ್ಯಾಲಯದ ಪ್ರೌಢಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಸ್.ಎಫ್.ಆದಿ ಅವರ ‘ಪುಲಿಗೆರೆ ಆದಿಶೇಖರ’ ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಗುರುಗಳ ಸನ್ಮಾನ ಸಮಾರಂಭದಲ್ಲಿ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.
‘ಶಿಕ್ಷಕ ವೃತ್ತಿ ಹೆಚ್ಚು ಪವಿತ್ರವಾದದ್ದು. ವಿದ್ಯೆ ಕಲಿಸುವ ಗುರುಗಳು ಹೇಗಿರುತ್ತಾರೆಯೋ ಹಾಗೆಯೇ ಶಿಷ್ಯರು ಆಗುತ್ತಾರೆ. ಸಮಾಜವನ್ನು ಉತ್ತಮ ಮಾರ್ಗದಲ್ಲಿ ತೆಗೆದುಕೊಂಡು ಹೋಗುವ ಶಿಷ್ಯರನ್ನು ತಯಾರು ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ‘ಎಲ್ಲರಿಗೂ ಶಿಕ್ಷಣ ಅವಶ್ಯ. ಶಿಕ್ಷಣ ಇಲ್ಲದೆ ಪ್ರಗತಿ ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಒಳ್ಳೆಯ ಶಿಕ್ಷಣ ಮಕ್ಕಳನ್ನು ಮನುಷ್ಯರನ್ನಾಗಿ ಮಾಡುತ್ತದೆ. ಎಷ್ಟೇ ಕಷ್ಟ ಬಂದರೂ ಪಾಲಕರು ಮಕ್ಕಳಿಗೆ ತಪ್ಪದೆ ಶಿಕ್ಷಣ ಕೊಡಿಸಬೇಕು. ವಿದ್ಯೆ ಇಲ್ಲದೆ ಬದುಕು ಪರಿಪೂರ್ಣ ಆಗಲಾರದು’ ಎಂದರು.
ನಿವೃತ್ತ ಶಿಕ್ಷಕ ಎಸ್.ಎಫ್. ಆದಿ ಅವರು ತಮ್ಮ ಶಿಕ್ಷಕ ವೃತ್ತಿಯಲ್ಲಿ ಅನುಭವಿಸಿದ ನೋವು ನಲಿವುಗಳ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಜಿ.ಎಂ.ಮಹಾಂತಶೆಟ್ಟರ, ಡಾ.ಎನ್.ವಿ. ಧೂಳಖೇಡ ಮತ್ತಿತರರು ಮಾತನಾಡಿದರು. ಮುಕ್ತಿಮಂದಿರ ಧರ್ಮಕ್ಷೇತ್ರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ, ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಎಸ್.ಎಫ್. ಆದಿ ಅವರು ತಮಗೆ ವಿದ್ಯೆ ಕಲಿಸಿದ ಶಿಕ್ಷಕರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು. ಆನಂತರ ಆದಿ ಗುರುಗಳನ್ನು ಅವರ ನೂರಾರು ಶಿಷ್ಯರು ಸನ್ಮಾನಿಸಿ ಅಭಿನಂದಿಸಿದರು.
ಜಯಕ್ಕ ಕಳ್ಳಿ, ಪೂಜಾ ಖರಾಟೆ, ಮಹೇಶ ಹೊಗೆಸೊಪ್ಪಿನ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.