ಗದಗ: 40 ಡಿಗ್ರಿ ಸೆಲ್ಸಿಯಸ್‌ ಸಮೀಪಕ್ಕೆ ಉಷ್ಣಾಂಶ; ಬಿಸಿಲ ತಾಪಕ್ಕೆ ತತ್ತರಿಸಿದ ಜನ

ಸೋಮವಾರ, ಏಪ್ರಿಲ್ 22, 2019
29 °C

ಗದಗ: 40 ಡಿಗ್ರಿ ಸೆಲ್ಸಿಯಸ್‌ ಸಮೀಪಕ್ಕೆ ಉಷ್ಣಾಂಶ; ಬಿಸಿಲ ತಾಪಕ್ಕೆ ತತ್ತರಿಸಿದ ಜನ

Published:
Updated:
Prajavani

ಗದಗ: ಹವಾಮಾನ ಇಲಾಖೆಯ ಮುನ್ನೋಟದ ಪ್ರಕಾರ ಇನ್ನೊಂದು ವಾರದೊಳಗೆ ನಗರದ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ದಾಟಲಿದೆ. ಮಾ.25ರಂದು ರಂಗಪಂಚಮಿ ದಿನ ಗದಗ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಯಾಗಿದ್ದರೆ, ಗದುಗಿನಲ್ಲಿ 38.5 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಮಂಗಳವಾರ ಉಷ್ಣಾಂಶ 39 ಡಿಗ್ರಿ ಸಮೀಪಕ್ಕೆ ಬಂದಿದೆ.

ನಗರ ಮತ್ತು ಜಿಲ್ಲೆಯಾದ್ಯಂತ ಬಿಸಿಲಿನ ತಾಪ ದಿನೇ ದಿನೇ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು, ಬಿಸಿಲಿನ ತಾಪಕ್ಕೆ ಬೆಚ್ಚಿ ಬಿದ್ದಿದ್ದಾರೆ.ಪರೀಕ್ಷಾ ಕೇಂದ್ರಗಳಲ್ಲಿ ಕೆಲವೆಡೆ ತಂಪಾದ ನೀರು ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. ಆದರೂ, ಗ್ರಾಮೀಣ ಪ್ರದೇಶಗಳಿಂದ ಪರೀಕ್ಷೆ ಬರೆಯಲು ದೂರದ ಊರುಗಳಿಗೆ ಬರುವ ವಿದ್ಯಾರ್ಥಿಗಳು ರಣ ಬಿಸಿಲು ಮತ್ತು ಬಿಸಿಗಾಳಿಯಿಂದಾಗಿ ತತ್ತರಿಸಿದ್ದಾರೆ.

ಬಿಸಿಲಿನ ತೀವ್ರತೆಯಿಂದ ಮಧ್ಯಾಹ್ನದ ವೇಳೆಗೆ ಜನರು ಮನೆಗಳಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮಧ್ಯಾಹ್ನ 12ರಿಂದ 3 ಗಂಟೆಯ ವರೆಗೆ ಮಾರುಕಟ್ಟೆಯಲ್ಲಿ ಜನದಟ್ಟಣೆ ಕಾಣುತ್ತಿಲ್ಲ.ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಸ್ಟೇಷನ್‌ ರಸ್ತೆ, ಬ್ಯಾಂಕ್‌ ರಸ್ತೆಗಳಲ್ಲಿ ಮಧ್ಯಾಹ್ನದ ವೇಳೆಗೆ ಜನಸಂದಣಿ ಕರಗುತ್ತಿದೆ.ನಗರದ ಭೂಮರೆಡ್ಡಿ ವೃತ್ತ, ಗಾಂಧಿ ವೃತ್ತ ಸೇರಿದಂತೆ ಅಲ್ಲಲ್ಲಿ ಸ್ಥಾಪಿಸಲಾಗಿರುವ ಅರವಟಿಗೆಗಳ ಮುಂದೆ ಜನ ಕುಡಿಯುವ ನೀರಿಗಾಗಿ ಮುಗಿ ಬೀಳುತ್ತಿದ್ದಾರೆ.

ಮಾರ್ಚ್‌ನಲ್ಲಿ ಜಿಲ್ಲೆಯಲ್ಲಿ 36ರಿಂದ 37 ಡಿಗ್ರಿ ಸೆಲ್ಸಿಯಸ್‌ ವಾಡಿಕೆ ಉಷ್ಣಾಂಶ ಇರುತ್ತದೆ. ಆದರೆ,ಈ ಬಾರಿ ಮಾರ್ಚ್‌ 1ರಿಂದಲೇ ಬಿಸಿಲಿನ ಝಳದಲ್ಲಿ ಏರಿಕೆ ಆಗಿದೆ. ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ತೀವ್ರ ಬಿಸಿಲಿರುತ್ತದೆ. ಸಾರ್ವಜನಿಕರು ಬಿಸಿಲಿನಿಂದ ರಕ್ಷಣೆ ಪಡೆಯಲು ಕೊಡೆ ಹಿಡಿದು ಮನೆಯಿಂದ ಹೊರಗಡಿ ಇಡುತ್ತಿದ್ದಾರೆ. ಉಷ್ಣಾಂಶ ಏರಿಕೆಯಿಂದ ನಗರ ಮಧ್ಯಾಹ್ನದ ವೇಳೆಗೆ ಕಾದ ಕಾವಲಿಯಂತೆ ಬದಲಾಗುತ್ತಿದೆ. ರಾತ್ರಿ ವೇಳೆ, ವಿಪರೀತ ಸೆಕೆಯಿಂದಾಗಿ ಜನರು ಮನೆಯ ತಾರಸಿ ಮೇಲೆ ಸೊಳ್ಳೆ ಪರದೆಗಳನ್ನು ಕಟ್ಟಿಕೊಂಡು ಮಲಗುತ್ತಿದ್ದಾರೆ.

ಹವಾಮಾನ ಇಲಾಖೆ ಮುನ್ನೋಟದ ಪ್ರಕಾರ ಏಪ್ರಿಲ್‌ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಣಹವೆ ಮುಂದುವರಿಯಲಿದ್ದು, 40 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ಇರಲಿದೆ. ಒಂದು ವಾರದಿಂದ 24 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗುತ್ತಿದೆ.

ಜಿಲ್ಲೆಯಲ್ಲಿ 2011ರಿಂದ ಅಂದರೆ ಕಳೆದ 8 ವರ್ಷಗಳಿಂದ ವಾಡಿಕೆಗಿಂತ (641.6 ಮಿ.ಮೀ) ಕಡಿಮೆ ಮಳೆ ಆಗುತ್ತಿದೆ. ಜಲಮೂಲಗಳು ಕಣ್ಮರೆ ಆಗಿರುವುದರಿಂದ ವಾತಾವರಣದಲ್ಲಿ ತೇವಾಂಶ ಕಡಿಮೆ ಆಗಿದೆ. ಇದರಿಂದ ನಗರದಲ್ಲಿ ಬಿಸಿಲ ಧಗೆ ಹೆಚ್ಚುತ್ತಿದೆ. ಇನ್ನೊಂದೆಡೆ ಒಣ ಹವೆ ಕೂಡ ಹೆಚ್ಚಾಗುತ್ತಿದೆ.ವಿವಿಧ ಕೆಲಸದ ನಿಮಿತ್ತ ಸುತ್ತಲಿನ ಗ್ರಾಮಗಳಿಂದ ಪಟ್ಟಣಕ್ಕೆ ಬರುವ ಜನರು ಬಿಸಿಲಿನ ತಾಪಕ್ಕೆ ಬಸವಳಿಯುತ್ತಿದ್ದಾರೆ. ಮರದ ನೆರಳಿನಲ್ಲಿ, ಉದ್ಯಾನಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಮಾರ್ಚ್ ತಿಂಗಳ ಜಿಲ್ಲೆಯ ಗರಿಷ್ಠ ಉಷ್ಣಾಂಶ

2018; 37.6

2017; 38.9

2016; 39.4

2015; 36.06

2014; 38.0

2013; 38.0

2012; 38.05

2011; 37.01

2010; 37.09

1953; 40.0*

(* ಜಿಲ್ಲೆಯಲ್ಲಿ ದಾಖಲಾಗಿರುವ ಸಾರ್ವಕಾಲಿಕ ದಾಖಲೆ ಉಷ್ಣಾಂಶ)

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !