ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಥಲಸ್ಸೇಮಿಯಾ’ ಕಾಯಿಲೆಯಿಂದ ಬಳಲುತ್ತಿರುವ ಮಗು

ಚಿಕಿತ್ಸೆಗೆ ₹40 ಲಕ್ಷ ಖರ್ಚು; ಕಂಗಾಲಾದ ಪಾಲಕರು; ನೆರವಿಗಾಗಿ ಮನವಿ
Last Updated 12 ಜನವರಿ 2019, 11:10 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ:ತಾಲ್ಲೂಕಿನ ಉಂಡೇನಹಳ್ಳಿಯ ಅಜಯ ಕರಿಗೌಡರ ಅವರ ಒಂದೂವರೆ ವರ್ಷದ ಗಂಡು ಮಗು ಉದಯಶಂಕರ ‘ಥಲಸ್ಸೇಮಿಯಾ’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆಡಿ,ನಲಿದು ಬೆಳೆಯಬೇಕಾದ ಈ ಪುಟ್ಟ ಮಗುವಿನ ಬಾಲ್ಯವನ್ನು ಈ ಕಾಯಿಲೆ ಹಿಂಡಿ ಹಿಪ್ಪೆ ಮಾಡಿದೆ.

ದೇಹದಲ್ಲಿ ರಕ್ತ ಉತ್ಪಾದನೆ ಆಗದಿರುವುದೇ ‘ಥಲಸ್ಸೇಮಿಯಾ’ ಕಾಯಿಲೆ. ರಕ್ತ ಉತ್ಪತ್ತಿ ಮಾಡುವ ಅಸ್ತಿಮಜ್ಜೆಯಲ್ಲಿ ರಕ್ತಕಣಗಳು ಉತ್ಪತ್ತಿ ಆಗದಿರುವುದರಿಂದ ಇದು ಕಾಣಿಸಿಕೊಳ್ಳುತ್ತದೆ. ಇದು ಅಪರೂಪದಲ್ಲೇ ಅಪರೂಪದ ಕಾಯಿಲೆ. ಅಸ್ತಿಮಜ್ಜೆ ಕಸಿಯಿಂದ ಈ ಕಾಯಿಲೆಯನ್ನು ಗುಣಪಡಿಸಬಹುದು ಎನ್ನುತ್ತಾರೆ ವೈದ್ಯರು. ಆದರೆ, ಇದು ಬಲು ದುಬಾರಿ.

‘ಉದಯಶಂಕರನಿಗೆ 6 ತಿಂಗಳು ಇದ್ದಾಗ, ‘ಥಲಸ್ಸೇಮಿಯಾ’ ಇರುವುದು ಪಾಲಕರ ಅರಿವಿಗೆ ಬಂದಿದೆ. ನಂತರ ಮಗುವನ್ನು ಕರೆದುಕೊಂಡು ರಾಜ್ಯದ ಹಲವು ಆಸ್ಪತ್ರೆಗಳ ಬಾಗಿಲನ್ನು ತಟ್ಟಿದರೂ ಇದಕ್ಕೆ, ಸುಲಭದಲ್ಲಿ ಚಿಕಿತ್ಸೆ ಇಲ್ಲ ಎಂದು ಎಲ್ಲ ವೈದ್ಯರು ಹೇಳಿದ್ದರಿಂದ ಅವರಿಗೆ ದಿಕ್ಕೇ ತೋಚದಂತಾಗಿದ್ದಾರೆ.

ಪ್ರತಿ ತಿಂಗಳು ರಕ್ತ ಹಾಕಿಸಿದರೆ ಮಾತ್ರ ಮಗು ಉಸಿರಾಡುತ್ತದೆ. ಇಲ್ಲದಿದ್ದರೆ ಜೀವಕ್ಕೆ ಅಪಾಯ.ಈಗ ಚಿಕ್ಕ ಮಗು ಆಗಿರುವುದರಿಂದ ಒಂದು ಬಾರಿ 700 ಎಂಎಲ್ ರಕ್ತ ಸಾಕಾಗುತ್ತದೆ. ಆದರೆ ಮಗು ಬೆಳೆದಂತೆ, ರಕ್ತ ಹಾಕಬೇಕಾದ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆ.ಹರೆಯಕ್ಕೆ ಬಂದಾಗ ತಿಂಗಳಿಗೆ ಕನಿಷ್ಠ 4ರಿಂದ 5 ಲೀಟರ್‌ನಷ್ಟು ರಕ್ತ ಬೇಕಾಗುತ್ತದೆ. ಮಗನ ಈ ಸ್ಥಿತಿ ನೆನೆದು ತಂದೆ, ತಾಯಿ ಮಮ್ಮಲ ಮರುಗುತ್ತಿದ್ದಾರೆ.

ಕೇವಲ ಐದು ಎಕರೆ ಜಮೀನು ಹೊಂದಿರುವ ಅಜಯ ಕರಿಗೌಡರ ಅವರು ಇದುವರೆಗೆ ಮಗನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಕೆಲ ಆಸ್ಪತ್ರೆಗಳಲ್ಲಿ ಈ ಕಾಯಿಲೆಗೆ ಚಿಕಿತ್ಸೆ ಇದೆ. ಆದರೆ, ದುಬಾರಿ ವೆಚ್ಚದಿಂದಾಗಿ ತಂದೆ, ತಾಯಿ ಚಿಂತಾಕ್ರಾಂತರಾಗಿದ್ದಾರೆ. ತಮಿಳುನಾಡಿನ ವೆಲ್ಲೂರಿನಲ್ಲಿರುವ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ರೋಗಕ್ಕೆ ಚಿಕಿತ್ಸೆ ಲಭ್ಯವಿದ್ದು, ಅಲ್ಲಿಗೂ ಮಗನನ್ನು ಕರೆದುಕೊಂಡು ಹೋಗಿ ತೋರಿಸಿಕೊಂಡು ಬಂದಿದ್ದಾರೆ. ಅಸ್ತಿಮಜ್ಜೆ ಕಸಿಯಿಂದ ರಕ್ತ ಉತ್ಪತ್ತಿ ಆಗುತ್ತದೆ. ಇದಕ್ಕೆ ₹40 ಲಕ್ಷ ಖರ್ಚು ಆಗುತ್ತದೆ ಎಂದು ಅಲ್ಲಿನ ವೈದ್ಯರು ಹೇಳಿ ಕಳುಹಿಸಿದ್ದಾರೆ. ಇಷ್ಟು ದೊಡ್ಡ ಮೊತ್ತವನ್ನು ಈ ಬಡ ದಂಪತಿಗೆ ಹೊಂದಿಸುವುದು ಕಷ್ಟಸಾಧ್ಯ. ಹೀಗಾಗಿ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ. ಮಗನ ಮುಖ ನೋಡಲು ಆಗದೆ ನಿತ್ಯ ಕಣ್ಣೀರು ಹಾಕುತ್ತಿದ್ದಾರೆ.

‘‘ಥಲಸ್ಸೇಮಿಯಾ’ ಲಕ್ಷದಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ. ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟೇಷನ್ ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು. ಆದರೆ, ಇದಕ್ಕೆ ತುಂಬ ಖರ್ಚು ತಗಲುತ್ತದೆ’ ಎಂದು ಸಮೀಪದ ಸೂರಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅನಿಲ ತೋಟದ ಹೇಳಿದರು.

ಮಗುವಿನ ಚಿಕಿತ್ಸೆಗೆ ನೆರವಾಗಲು ಬಯಸುವ ದಾನಿಗಳು ಅಜಯ ಕರಿಗೌಡರ ಅವರನ್ನು 8073937615 ಸಂಪರ್ಕಿಸಬಹುದು. ಅವರ ಬ್ಯಾಂಕ್‌ ಖಾತೆ 0570101024424. ಕೆನರಾ ಬ್ಯಾಂಕ್‌ನ ಶಿಗ್ಲಿ ಶಾಖೆಗೂ ಹಣ ಕಳುಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT