ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆ ಅರಿವು ಕೃಷಿ ಮಂತ್ರಿಗೂ ಇಲ್ಲ: ವಿಚಾರ ಸಂಕಿರಣ

ಖಾಸಗೀಕರಣ ವಿರೋಧ ಹೋರಾಟ ವೇದಿಕೆ
Last Updated 15 ಮಾರ್ಚ್ 2021, 3:06 IST
ಅಕ್ಷರ ಗಾತ್ರ

ಗದಗ: ‘ಚಳವಳಿಗಳು ಸರ್ಕಾರವನ್ನೇ ಬದಲಾಯಿಸಿದ ಉದಾಹರಣೆಗಳಿವೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ರೈತ ಚಳವಳಿ ನಡೆಯುತ್ತಿದ್ದು ಅದಕ್ಕೆ ಎಲ್ಲರೂ ಬೆಂಬಲ ಸೂಚಿಸಬೇಕು’ ಎಂದು ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ ಹೇಳಿದರು.

ನಗರದ ಹಾತಲಗೇರಿ ರಸ್ತೆಯ ನಿಸರ್ಗ ಬಡಾವಣೆಯ ಬಸವ ಭವನದಲ್ಲಿ ಖಾಸಗೀಕರಣ ವಿರೋಧಿ ಹೋರಾಟ ವೇದಿಕೆ ವತಿಯಿಂದ ಭಾನುವಾರ ನಡೆದ ವಿಚಾರ ಸಂಕಿರಣದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆ ಬಗ್ಗೆ ಕೇಂದ್ರದ ಕೃಷಿ ಮಂತ್ರಿಗೂ ತಿಳಿದಿಲ್ಲ. ಈ ಕಾನೂನುಗಳ ಬಗ್ಗೆ ಬಿಜೆಪಿಗರಿಗೆ ಅಷ್ಟೇ ಅಲ್ಲ, ಕೆಲ ಕಾಂಗ್ರೆಸ್ ನಾಯಕರಿಗೂ ಮಾಹಿತಿ ಇಲ್ಲ. ಹೀಗಾಗಿ ಈ ಬಗ್ಗೆ ಜನರಿಗೆ ಏನೂ ತಿಳಿಯುತ್ತಿಲ್ಲ.ಇದು ಮೂವರು ಸೇರಿ ಮಾಡಿದ ಕಾನೂನು. ಈ ಕಾನೂನುಗಳಿಂದ ರೈತರು ಕಾರ್ಪೋರೇಟ್ ಕಂಪನಿಗಳ ಕಪಿಮುಷ್ಠಿಯಲ್ಲಿ ಸಿಕ್ಕು ಪರದಾಡಬೇಕಾಗುತ್ತದೆ. ಹಾಗಾಗಿ, ಇದರ ವಿರುದ್ಧ ಗದುಗಿನಲ್ಲಿ ಬೀದಿಗಿಳಿದು ಹೋರಾಟ ಮಾಡಿದರೆ ಅದರಲ್ಲಿ ಭಾಗವಹಿಸುತ್ತೇನೆ’ ಎಂದು ಅವರು ಹೇಳಿದರು.

‘ಕೃಷಿ ಕಾಯ್ದೆ ವಿರೋಧಿಸಿ ಹಾಗೂ ಎಂಎಸ್‍ಪಿ ದಿಖಾವೋಗೆ ಒತ್ತಾಯಿಸಿ ಮಾರ್ಚ್‌ 22ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ರಾಕೇಶ ಟಿಕಾಯತ್ ಭಾಗವಹಿಸುತ್ತಿದ್ದು, ರೈತ ಸಂಘಟನೆಗಳ ಎಲ್ಲರೂ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಮೂರು ಕೃಷಿ ಕಾಯ್ದೆಗಳು ಮತ್ತು ರೈತ ಚಳವಳಿ ಕುರಿತು ಮಾತನಾಡಿದ ಡಾ.ಸಿದ್ದನಗೌಡ ಪಾಟೀಲ, ‘ದೇಶದ ಆಡಳಿತದಲ್ಲಿ ಅರ್ಥ, ಅಹಂಕಾರ ಹಾಗೂ ಕುಲ ಮದ ಸೇರಿದೆ. ಈ ಮೂರು ಕಾಯ್ದೆಗಳ ಹಿಂದೆ ಅಂತರರಾಷ್ಟ್ರಿಯ ಕೈವಾಡವಿದೆ’ ಎಂದು ಅವರು ಆರೋಪಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಶೋಕ ಬರಗುಂಡಿ, ಶರಣರ ದಾಸೋಹಕ್ಕೂ, ರೈತರಿಗೂ ಅವಿನಾಭಾವ ನಂಟಿದೆ. ರೈತರು, ಸೈನಿಕರು ಹಾಗೂ ಶ್ರಮಿಕರು ಮಾತ್ರ ನಿಜವಾದ ದೇಶಭಕ್ತರು ಎಂದರು.

ರಾಮಕೃಷ್ಣ ಗೊರವಾರ ನಿರೂಪಿಸಿದರು.

ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಸಾಹಿತಿ ಬಸವರಾಜ ಸೂಳಿಭಾವಿ, ಶೇಖಣ್ಣ ಕವಳಿಕಾಯಿ, ಹೋರಾಟಗಾರ ರವೀಂದ್ರ ಹೊನವಾಡ, ಡಾ.ಎನ್.ಬಿ.ಪಾಟೀಲ, ಜೆ.ಕೆ.ಜಮಾದಾರ, ನಿವೃತ್ತ ನ್ಯಾಯಾಧೀಶ ಎಸ್.ಜಿ.ಪಲ್ಲೇದ, ಕೆ.ಎಚ್.ಬೇಲೂರ, ಕೆ.ಬಿ. ಭಜಂತ್ರಿ, ಮುತ್ತು ಬಿಳೆಯಲಿ, ರಮೇಶ ಕೋಳೂರ ಇದ್ದರು.

‘ಸಣ್ಣ ಹಿಡುವಳಿದಾರರ ನಿರ್ನಾಮ’

‘ನಾವು ಈಗ ಹೋರಾಡದಿದ್ದರೆ ಅಂಬಾನಿಯ ಜಿಯೋ ಕಂಪನಿಯಿಂದ ಬಿಎಸ್‍ಎನ್‌ಎಲ್‌ಗೆ ಆದ ಸ್ಥಿತಿ ರೈತರು ಹಾಗೂ ಎಪಿಎಂಸಿಗೆ ಆಗಲಿದೆ’ ಎಂದುಡಾ.ಸಿದ್ದನಗೌಡ ಪಾಟೀಲ ಹೇಳಿದರು.

‘2016ರಲ್ಲಿ ಬಿಹಾರದಲ್ಲಿ ಎಪಿಎಂಸಿ ಖಾಸಗೀಕರಣ ಮಾಡಿದ ಪರಿಣಾಮ ಅಲ್ಲಿನ ರೈತರ ಮಕ್ಕಳು ಇಂದು ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿದ್ದಾರೆ. ಅವಶ್ಯಕ ವಸ್ತುಗಳ ತಿದ್ದುಪಡಿ ಕಾನೂನಿನಿಂದ ಆಹಾರ ಅಭದ್ರತೆ ಕಾಡಲಿದೆ. ಸಣ್ಣ ಹಿಡುವಳಿದಾರರ ನಿರ್ನಾಮ ಮಾಡುವುದೇ ಈ ಕಾಯ್ದೆಗಳ ಉದ್ದೇಶವಾಗಿದೆ’ ಎಂದು ಆತಂಕ ಅವರು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT