ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ| ರಾಜ್ಯದಲ್ಲಿರುವುದು ನಿರ್ಲಜ್ಜ, ಮಾನಗೆಟ್ಟ ಸರ್ಕಾರ: ಸಿದ್ದರಾಮಯ್ಯ

‘ಪ್ರಜಾಧ್ವನಿ’ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ಧಾಳಿ
Last Updated 18 ಫೆಬ್ರುವರಿ 2023, 6:02 IST
ಅಕ್ಷರ ಗಾತ್ರ

ಗದಗ: ‘ಕರ್ನಾಟದ ಇತಿಹಾಸದಲ್ಲಿ ಬಿಜೆಪಿಯಷ್ಟು ಭ್ರಷ್ಟ ಸರ್ಕಾರವನ್ನು ನಾನೆಂದೂ ನೋಡಿರಲಿಲ್ಲ. ಇನ್ನು ಎರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿ ಸರ್ಕಾರ ಮನೆಗೆ ಹೋಗಲಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಶಿರಹಟ್ಟಿ ಪಟ್ಟಣದಲ್ಲಿ ಗುರುವಾರ ನಡೆದ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ‘ರಾಜ್ಯದಲ್ಲಿ ಅತ್ಯಂತ ಕೆಟ್ಟ, ಭ್ರಷ್ಟ, ಕೋಮುವಾದಿ ಸರ್ಕಾರವಿದೆ. ಬಡವರು, ರೈತರು, ಮಹಿಳೆಯರು ಹಾಗೂ ಹಿಂದುಳಿದ ಮತ್ತು ತಳಸಮುದಾಯದ ಜನರಿಗೆ ಒಳ್ಳೆಯದಾಗಬೇಕು ಎನ್ನುವ ಉದ್ದೇಶದಿಂದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಪ್ರತಿಯೊಬ್ಬರೂ ಒಂದಾಗಬೇಕು’ ಎಂದು ಹೇಳಿದರು.

‘ಪ್ರಜಾಧ್ವನಿ ಯಾತ್ರೆ ಏಳು ಕೋಟಿ ಕನ್ನಡಿಗರ ಧ್ವನಿ. ಈ ಯಾತ್ರೆಯ ಮೂಲಕ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಪರಿಹಾರ– ಸಲಹೆಗಳನ್ನು ಪಡೆದುಕೊಂಡು ಮುಂದೆ ಉತ್ತಮ ಆಡಳಿತ ನೀಡುವ ಉದ್ದೇಶವನ್ನು ಕಾಂಗ್ರೆಸ್‌ ಹೊಂದಿದೆ’ ಎಂದರು.

‘ಕಳೆದ ಚುನಾವಣೆಯಲ್ಲಿ ಬಿಜೆಗೆ ಜನರು ಆಶೀರ್ವಾದ ಮಾಡಿರಲಿಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಶಾಸಕರನ್ನು ಖರೀದಿಸಿ ರೂಪುಗೊಂಡ ಅನೈತಿಕ ಬಿಜೆಪಿ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷೆ ಮಾಡುವುದು ಸಾಧ್ಯವೇ? ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಶಿರಹಟ್ಟಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಏನು ಕೆಲಸ ಮಾಡಿದ್ದಾರೆ? ನಾನು ಸಿಎಂ ಇದ್ದಾಗ ಹಿಂದಿನ ಶಾಸಕ ರಾಮಕೃಷ್ಣ ದೊಡ್ಡಮನಿ ಅವರು ಕೇಳಿದ್ದನ್ನೆಲ್ಲಾ ಕ್ಷೇತ್ರಕ್ಕೆ ಕೊಟ್ಟಿರುವೆ. ಇದೊಂದೇ ಕ್ಷೇತ್ರಕ್ಕೆ 18 ಸಾವಿರ ಮನೆಗಳನ್ನು ಕೊಟ್ಟಿರುವೆ’ ಎಂದು ಹೇಳಿದರು.

‘ಬಿಜೆಪಿ ಅಕ್ರಮವಾಗಿ ಅಧಿಕಾರ ಹಿಡಿದು ನಾಲ್ಕು ವರ್ಷಗಳಾದವು. ಒಂದು ಮನೆಯನ್ನೂ ಕೊಟ್ಟಿಲ್ಲ. ಇವರ ಮನೆ ಹಾಳಾಗ... ಬರೀ ಲೂಟಿ ಮಾಡುವುದೇ ಆಗಿದೆ. ಇಂತಹ ಸರ್ಕಾರಕ್ಕೆ ಮತ್ತೇ ವೋಟು ಕೊಡುತ್ತೀರಾ? ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಲ್ಲ ಕಚೇರಿಗಳಲ್ಲೂ ಲಂಚದ ಹಾವಳಿ ತುಂಬಿದೆ. ಇಂತಹ ನಿರ್ಲಜ್ಜ, ಮಾನಗೆಟ್ಟ ಸರ್ಕಾರವನ್ನು ನಾನಂತೂ ಕಂಡಿಲ್ಲ’ ಎಂದು ಹರಿಹಾಯ್ದರು.

‘ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತರ ಸಾಲಮನ್ನಾ ಮಾಡಲಿಲ್ಲ. ಜನರು ಬದುಕು ನಡೆಸುವುದೇ ಕಷ್ಟವಾಗಿದೆ. ಶೇ 15ರಿಂದ 18ರಷ್ಟು ತೆರಿಗೆ ಕಟ್ಟಬೇಕು. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನರ ರಕ್ತ ಕುಡಿಯುವ ಸರ್ಕಾರ ಮತ್ತೇ ಬೇಕಾ? ಬೇಡ ಅಂತಾದರೆ ಕಾಯಾ ವಾಚಾ ಮನಸಾ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ’ ಎಂದು ಮನವಿ ಮಾಡಿದರು.

‘ರಾಜ್ಯ ಬಿಜೆಪಿ ನಾಯಕರದ್ದು ಕಳಾಹೀನ ಮುಖ. ತಮ್ಮ ಮುಖ ಇಟ್ಟುಕೊಂಡು ವೋಟು ಕೇಳಲಾಗದ ಕಾರಣ ಮೋದಿ ಅವರಿಗೆ ಬೆನ್ನುಬಿದ್ದಿದ್ದಾರೆ. ಬರಗಾಲ, ಅತಿವೃಷ್ಟಿ, ಕೊರೊನಾ ಸಂದರ್ಭದಲ್ಲಿ ರಾಜ್ಯಕ್ಕೆ ಕಾಲಿಡದ ಪ್ರಧಾನಿ ಈಗ ಮೇಲಿಂದ ಮೇಲೆ ರಾಜ್ಯಕ್ಕೆ ಬರುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರುದ್ಯೋಗ, ಬಡತನ ಹೆಚ್ಚಾದವು. ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡವು. ಭ್ರಷ್ಟಚಾರ ಮಿತಿಮೀರಿತು’ ಎಂದು ವಾಗ್ಧಾಳಿ ನಡೆಸಿದರು.

ಶಿರಹಟ್ಟಿ ಮತಕ್ಷೇತ್ರ ತನ್ನದೇ ಆದ ಇತಿಹಾಸ ಹೊಂದಿದೆ. 14 ಮಂದಿಯಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ನನಗೇ ಸಿಕ್ಕಿದೆ ಎನ್ನುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುವುದಾಗಿ ಹೊಳಲಮ್ಮದೇವಿ ದೇವಸ್ಥಾನದಲ್ಲಿ ಎಲ್ಲ ಆಕಾಂಕ್ಷಿಗಳು ಪ್ರತಿಜ್ಞೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಗಟ್ಟಿಯಾದ ಬಲ ಕೊಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಕಲಬುರಗಿಗೆ ಬಂದಿದ್ದ ವೇಳೆ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಹಕ್ಕುಪತ್ರಗಳನ್ನು ವಿತರಿಸಿದರು. ಆದರೆ, 2016ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕಂದಾಯ ಗ್ರಾಮಗಳನ್ನಾಗಿಸಲು ಅಧಿಸೂಚನೆ ಹೊರಡಿಸಿದ್ದರು’ ಎಂದು ತಿರುಗೇಟು ನೀಡಿದರು.

ಶಾಸಕ ಜಮೀರ್ ಅಹ್ಮದ್ ಮಾತನಾಡಿ, ‘ಮುಂದಿನ ಚುನಾವಣೆಯಲ್ಲಿ 150 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗುವ ಮೂಲಕ ಬಡವರ ಧ್ವನಿಯಾಗಲಿದ್ದಾರೆ’ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್. ಪಾಟೀಲ, ಮಾಜಿ ಸಚಿವರಾದ ಬಿ.ಆರ್.ಯಾವಗಲ್, ಎನ್.ಎಚ್. ಕೋನರಡ್ಡಿ, ಮುಖಂಡರಾದ ವಾಸಣ್ಣ ಕುರಡಗಿ, ಎಸ್.ಪಿ. ಬಳಿಗಾರ, ಎಂ.ಎಂ. ಹಿಂಡಸಗೇರಿ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಸುಜಾತಾ ದೊಡ್ಡಮನಿ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಎಚ್. ಪಾಟೀಲ ಇದ್ದರು.

ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಪ್ರಾಸ್ತಾವಿಕ ಮಾತನಾಡಿದರು. ಹುಮಾಯೂನ್ ಮಾಗಡಿ ಸ್ವಾಗತಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌, ಪ್ರತಿ ಗೃಹಿಣಿಗೆ ₹2 ಸಾವಿರ ಹಣ ಹಾಗೂ ಬಡವರಿಗೆ 10 ಕೆ.ಜಿ. ಅಕ್ಕಿ ನೀಡಲಾಗುವುದು. ಈ ಮಾತಿಗೆ ತಪ್ಪಿದರೆ ಒಂದು ಕ್ಷಣವೂ ಅಧಿಕಾರದಲ್ಲಿ ಇರುವುದಿಲ್ಲ
ಸಿದ್ದರಾಮಯ್ಯ, ಕಾಂಗ್ರೆಸ್‌ ನಾಯಕ

ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ಹೋದಲ್ಲೆಲ್ಲಾ ಕಾಂಗ್ರೆಸ್ ಪಕ್ಷದ ಪರ ಒಲವಿರುವುದನ್ನು ಗಮನಿಸಿದ್ದೇವೆ. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕೂ ಕ್ಷೇತ್ರ ಗೆಲ್ಲುತ್ತೇವೆ
ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯ

ಇಸ್ಲಾಂ ಧರ್ಮ ಜಾತೀಯತೆ ಹೇಳಿಕೊಟ್ಟಿಲ್ಲ. ಎಲ್ಲರೂ ಒಂದೇ ಎಂದು ಹೇಳಿದೆ. ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸದ ಬಿಜೆಪಿ ನಾಯಕರು ಹತಾಶ ಮನೋಭಾವದಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ
ಜಮೀರ್ ಅಹ್ಮದ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT