ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ಪೀಡಿತನೊಂದಿಗೆ ಬಸ್‌ನಲ್ಲಿ ಪ್ರಯಾಣಿಸಿದ್ದ 13 ಮಂದಿ ಪತ್ತೆ

ಪಣಜಿ–ಗದಗ ಬಸ್‌ನಲ್ಲಿ ಪ್ರಯಾಣಿಸಿದ್ದ ಧಾರವಾಡದ ಮೂಲಕ ವ್ಯಕ್ತಿಗೆ ಸೋಂಖು ದೃಢ
Last Updated 22 ಮಾರ್ಚ್ 2020, 13:15 IST
ಅಕ್ಷರ ಗಾತ್ರ

ಗದಗ: ಮಾರ್ಚ್‌ 12ರಂದು ಪಣಜಿಯಿಂದ ಗದುಗಿಗೆ ಬಂದಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಚರಿಸಿದ್ದ ಧಾರವಾಡ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಅದೇ ಬಸ್‌ನಲ್ಲಿ ಅಂದು ಪ್ರಯಾಣ ಮಾಡಿದ್ದ ಜಿಲ್ಲೆಯ 13 ಪ್ರಯಾಣಿಕರನ್ನು ಜಿಲ್ಲಾಡಳಿತ ಪತ್ತೆ ಹಚ್ಚಿದ್ದು, ಅವರಿಗೆ ಮನೆಯಲ್ಲೇ ಪ್ರತ್ಯೇಕ ನಿಗಾ ( ಹೋಂ ಕ್ವಾರಂಟೈನ್‌) ವ್ಯವಸ್ಥೆಯಲ್ಲಿ ಇರಿಸಿದೆ.

ಜಿಲ್ಲೆಯ ಅಡವಿಸೋಮಾಪುರ ತಾಂಡಾ, ಪಾಪನಾಶಿ, ಸಿಂಗಟರಾಯನಕೇರಿ ತಾಂಡಾದ ಒಟ್ಟು 25 ಪ್ರಯಾಣಿಕರು ಅಂದು ಬಸ್‌ನಲ್ಲಿ ಗದುಗಿಗೆ ಬಂದು ಇಳಿದುಕೊಂಡಿದ್ದರು. ಇವರಲ್ಲಿಅಡವಿ ಸೋಮಾಪೂರ ತಾಂಡಾದಲ್ಲಿನ 9 ಜನರನ್ನು, ಪಾಪನಾಶಿಯ ಇಬ್ಬರು ಹಾಗೂ ಒಂದು ಮಗುವನ್ನು ಭಾನುವಾರ ಗದಗ ತಹಸೀಲ್ದಾರ್‌ ಶ್ರೀನಿವಾಸಮೂರ್ತಿ ಕುಲಕರ್ಣಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿದೆ. ಇವರಿಗೆ ಆರೋಗ್ಯ ಪರೀಕ್ಷೆ ನಡೆಸಲಾಗಿದ್ದು, ಮನೆಯಲ್ಲಿಯೇ ನಿಗದಿತ ಅವಧಿಯವರೆಗೆ ಪ್ರತ್ಯೇಕವಾಗಿ ಯಾರ ಸಂಪರ್ಕಕ್ಕೆ ಬರದಂತೆ ಇರಲು ಸೂಚಿಸಿ, ನಿಗಾವಹಿಸಲಾಗಿದೆ.

ಅಡವಿಸೋಮಾಪುರ ತಾಮಡಾದ ಇನ್ನಿಬ್ಬರು ವ್ಯಕ್ತಿಗಳ ಪತ್ತೆಗಾಗಿ ಆರೋಗ್ಯ ಇಲಾಖೆ ಪ್ರಯತ್ನ ಮುಂದುವರಿಸಿದೆ. ಸಿಂಗಟರಾಯನಕೇರಿ ತಾಂಡಾಕ್ಕೆ ಬಂದಿದ್ದ 7 ಪ್ರಯಾಣಿಕರಲ್ಲಿ, 6 ಜನರು ಮರಳಿ ಮತ್ತೆ ಗೋವಾಕ್ಕೆ ಹೋಗಿದ್ದಾರೆ. ಉಳಿದ ಒಬ್ಬರನ್ನು ಪತ್ತೆ ಹಚ್ಚಲಾಗಿದ್ದು, ಅವರ ಆರೋಗ್ಯ ತಪಾಸಣೆ ನಡೆಸಿ, ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಸೂಚಿಸಿ, ನಿಗಾವಹಿಸಲಾಗಿದೆ. ‘ಉಳಿದ ಪ್ರಾಯಾಣಿಕರ ಪತ್ತೆಗೆ ಕ್ರಮ ಜರುಗಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ.

ಪಣಜಿ ಬಸ್‌ನಲ್ಲಿ 27 ಜನ ಪ್ರಯಾಣಿಕರು

ಮಾರ್ಚ್‌ 12ರ ರಾತ್ರಿ 8.45ಕ್ಕೆ ಪಣಜಿಯಿಂದ ಗದಗ ನಗರಕ್ಕೆ ಹೊರಟಿದ್ದ ಕೆಎ 26 ಎಫ್‌-962 ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಒಟ್ಟು 30 ಪ್ರಯಾಣಿಕರು ಇದ್ದರು. ಈ ಬಸ್‌ನಲ್ಲಿ ಪ್ರಯಾಣಿಸಿ ಧಾರವಾಡದಲ್ಲಿ ಇಳಿದುಕೊಂಡಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಅದೇ ಬಸ್ಸಿನ ಮುಂದುವರಿದ ಪ್ರಯಾಣದಲ್ಲಿ ಮಾರ್ಚ್‌ 13ರಂದು ಬೆಳಿಗ್ಗೆ 3.15ಕ್ಕೆ ಗದಗ ನಗರದಲ್ಲಿ 6 ಮಂದಿ ಪ್ರಯಾಣಿಕರು, 3.30ಕ್ಕೆ ಅಡವಿಸೋಮಾಪುರ ತಾಂಡಾದಲ್ಲಿ 11 ಜನ, 3.45ಕ್ಕೆ ಪಾಪನಾಶಿ ತಾಂಡಾದಲ್ಲಿ ಇಬ್ಬರು ವ್ಯಕ್ತಿಗಳು ಹಾಗೂ ಒಂದು ಮಗು ಮತ್ತು 4.30ಕ್ಕೆ ಸಿಂಗಟರಾಯನಕೆರೆ ತಾಂಡಾದಲ್ಲಿ 7 ಪ್ರಯಾಣಿಕರು ಇಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT