ಮಳೆನೀರು ಸಂಗ್ರಹ ಮೂಲಕ ಜಲಸ್ವಾವಲಂಬನೆ; ತಿಪ್ಪಾಪುರದ ಪುಟ್ಟ ಶಾಲೆಯ ದಿಟ್ಟ ಹೆಜ್ಜೆ!

7
ಸರ್ಕಾರಿ ಶಾಲೆ ಸಾಧನೆ

ಮಳೆನೀರು ಸಂಗ್ರಹ ಮೂಲಕ ಜಲಸ್ವಾವಲಂಬನೆ; ತಿಪ್ಪಾಪುರದ ಪುಟ್ಟ ಶಾಲೆಯ ದಿಟ್ಟ ಹೆಜ್ಜೆ!

Published:
Updated:
Deccan Herald

ಮುಂಡರಗಿ: ತಾಲ್ಲೂಕಿನಲ್ಲೇ ಅತಿ ಚಿಕ್ಕ ಗ್ರಾಮ ತಿಪ್ಪಾಪುರ. ಈ ಗ್ರಾಮದ ಜನಸಂಖ್ಯೆ 215. ಇಲ್ಲಿರುವುದು ಸಹ ಪುಟ್ಟ ಶಾಲೆ. 1ರಿಂದ 5ನೇ ತರಗತಿವರೆಗಿನ ಈ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 25. ಇವರಲ್ಲಿ 12 ಬಾಲಕರು 13 ಬಾಲಕಿಯರು ಇದ್ದಾರೆ. ಇಲ್ಲಿ ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಚಿಕ್ಕ ಊರಿನ ಈ ಚಿಕ್ಕ ಶಾಲೆಯ ವಿಶೇಷ ಇಲ್ಲಿಗೇ ನಿಂತಿಲ್ಲ. ತರಗತಿಯಲ್ಲಿ ಮಕ್ಕಳಿಗೆ ಪಾಠ ಕಲಿಸುವುದರ ಜತೆಗೆ ಪರಿಸರ ಸ್ನೇಹಿ ಕ್ರಮಗಳನ್ನು ಪರಿಣಾಮಕಾರಿ ಅಳವಡಿಸಿಕೊಳ್ಳುವ ಮೂಲಕವೂ ಈ ಶಾಲೆ ದಿಟ್ಟ ಹೆಜ್ಜೆ ಇಟ್ಟಿದೆ. ಆ ಮೂಲಕ ತಾಲ್ಲೂಕಿನ ಇತರೆ ದೊಡ್ಡ ಶಾಲೆಗಳಿಗೂ ಮಾದರಿಯಾಗಿದೆ.

ಗ್ರಾಮದ ಹೊರವಲಯದಲ್ಲಿ ಕೇವಲ 814 ಚದರ ಅಡಿ ವಿಸ್ತೀರ್ಣದಲ್ಲಿ ಈ ಶಾಲೆಯನ್ನು ನಿರ್ಮಿಸಲಾಗಿದ್ದು, ಶಾಲೆಯು ಸಂಪೂರ್ಣವಾಗಿ ಜಲಸ್ವಾವಲಂಬನೆ ಸಾಧಿಸಿದೆ. ದಶಕದ ಹಿಂದೆ ಶಾಲಾ ಆವರಣದಲ್ಲಿ 9,500 ಲೀಟರ್ ಸಾಮರ್ಥ್ಯದ ಮಳೆ ನೀರು ಕೊಯ್ಲು ಘಟಕ ಸ್ಥಾಪಿಸಲಾಗಿದೆ. ಮಳೆಗಾಲದಲ್ಲಿ ಈ ಘಟಕ ಭರ್ತಿಯಾಗುತ್ತದೆ. ವರ್ಷದ ಉದ್ದಕ್ಕೂ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದೇ ನೀರನ್ನು ಕುಡಿಯಲು ಬಳಸುತ್ತಿದ್ದಾರೆ. ಬೇಸಿಗೆಯಲ್ಲಿ ತಾಲ್ಲೂಕಿನಾದ್ಯಂತ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಇರುವಾಗ, ಈ ಶಾಲೆಯಲ್ಲಿ ನೀರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ.

ಶಾಲಾ ಆವರಣದಲ್ಲಿ ಬೀಳುವ ಒಂದು ಹನಿ ಮಳೆ ನೀರೂ ವ್ಯರ್ಥವಾಗಬಾರದು ಎಂದು ಯೋಜನೆ ರೂಪಿಸಿ, ಈ ಮಳೆನೀರು ಕೊಯ್ಲು ಘಟಕ ಸ್ಥಾಪಿಸಲಾಗಿದೆ. ಇದಕ್ಕೆ ‘ಇಂಜಕ್ಷನ್ ವೆಲ್‌ ಅಥವಾ ವಿ–ವಯರ್‌ ಇಂಜಕ್ಷನ್‌’ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದರಿಂದ ಮಳೆನೀರು ಸಂಪೂರ್ಣವಾಗಿ ಹರಿದುಬಂದು ಈ ಘಟಕ ಸೇರುತ್ತದೆ. ಹನಿ ಹನಿ ಸೇರಿ ಹಳ್ಳ ಎನ್ನುವಂತೆ, ಶಾಲೆಯಲ್ಲಿರುವ ಕೊಳವೆ ಬಾವಿಯ ಅಂತರ್ಜಲ ಮಟ್ಟವೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ.

ಕಳೆದ ಎರಡು ದಶಕಗಳಿಂದ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಎಸ್.ಕೆ.ರಾಜೂರ ಹಾಗೂ ಜೆ.ಎನ್.ಬಸವರಾಜ ಹಾಗೂ ಗ್ರಾಮಸ್ಥರ ಕಾಳಜಿ ಹಾಗೂ ಸಹಭಾಗಿತ್ವದ ಫಲವಾಗಿ ಈ ಶಾಲೆ ನಂದನವನವಾಗಿ ಮಾರ್ಪಟ್ಟಿದೆ. ಶಾಲೆಯ ಪರಿಸರ ಕಾಳಜಿಯನ್ನು ಮನಗಂಡಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕಳೆದ ಆರು ವರ್ಷಗಳಿಂದ ಸತತವಾಗಿ ತಿಪ್ಪಾಪೂರ ಶಾಲೆಗೆ ‘ಹಸಿರು ಮಿತ್ರ ಶಾಲೆ’ ಪ್ರಶಸ್ತಿ ನೀಡುತ್ತಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !