ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಸ್ವಾತಂತ್ರ್ಯ ಕ್ರಾಂತಿಗೆ ಮುನ್ನುಡಿ

ನರೇಗಲ್‌ ಸಮೀಪದ ಜಕ್ಕಲಿಗೆ 1934ರಲ್ಲಿ ಗಾಂಧೀಜಿ ಭೇಟಿ
ಅಕ್ಷರ ಗಾತ್ರ

ನರೇಗಲ್: ರೋಣ ತಾಲ್ಲೂಕಿನ ನರೇಗಲ್‌ ಸಮೀಪದ ಪುಟ್ಟ ಗ್ರಾಮ ಜಕ್ಕಲಿ ಎಂಬ ಊರಿಗೆ 1934ರ ಮಾರ್ಚ್ 3 ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಬಂದು ಹೋದ ನಂತರ ಜಿಲ್ಲೆಯ ಪ್ರತಿ ಗ್ರಾಮದಲ್ಲಿಯೂ ಸ್ವಾತಂತ್ರ್ಯ ಹೋರಾಟದ ಕಿಡಿ ಹೊತ್ತಿಕೊಂಡಿತು. ಅವರ ಮಾತುಗಳಿಂದ ಸ್ಫೂರ್ತಿ ಪಡೆದ ಹೋಬಳಿಯ ಹೋರಾಟಗಾರರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಅದರಲ್ಲಿಯೂ ಈ ಹೋಬಳಿಯ 192 ಹೋರಾಟಗಾರರು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಹಾಗೂ ಚಾಚೂ ತಪ್ಪದೇ ‘ಗಾಂಧಿ ಮಾರ್ಗ’ ಅನುಸರಿಸಿದ್ದರು ಎಂಬುದು ವಿಶೇಷವಾಗಿದೆ.

ಗಾಂಧೀಜಿಯವರು ಜಕ್ಕಲಿ ಗ್ರಾಮಕ್ಕೆ ಬಂದಾಗ ಹೊಸಳ್ಳಿಯ ನೀಲಗಂಗಯ್ಯ ಪೂಜಾರಗೆ ಕೇವಲ 12 ವರ್ಷ. ಗ್ರಾಮಕ್ಕೆ ತಕ್ಕ ಮಟ್ಟಿಗೆ ಶ್ರೀಮಂತರಾಗಿದ್ದ, ಯೋಗ್ಯ ಮನೆತನದವರಾಗಿದ್ದ ಹಾಗೂ ಒಬ್ಬನೇ ಮಗನಾಗಿದ್ದ ನೀಲಗಂಗಯ್ಯ ಆಗಲೇ ಗಾಂಧೀಜಿ ಪ್ರಭಾವಕ್ಕೆ ಒಳಗಾಗಿದ್ದರು.

ಹುಲಕೋಟಿ ರೈಲ್ವೆ ಸ್ಟೇಷನ್‌ನಲ್ಲಿ ಬ್ರಿಟಿಷರು ಇಟ್ಟಿದ್ದ ಶಸ್ತ್ರಾಸ್ತ್ರಗಳನ್ನು ರಾತ್ರೋರಾತ್ರಿ ಎತ್ತಿಕೊಂಡು ಎತ್ತಿನ ಬಂಡಿಯಲ್ಲಿ ಅವುಗಳನ್ನು ಹಾಕಿಕೊಂಡು ಬಂದು ದನಕಟ್ಟುವ ಜಾಗದಲ್ಲಿ ಹುಗಿದಿದ್ದರು. ಈ ಮಾಹಿತಿ ಪಡೆದ ಬ್ರಿಟಿಷರು ಗ್ರಾಮದ ಜನರ ಎದುರಿನಲ್ಲಿಯೇ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿರುವ ಮಾಹಿತಿ ನೀಡುವಂತೆ ಎಲ್ಲರಿಗೂ ಹೊಡೆದಿದ್ದರು. ಲಾಟಿ ಏಟಿಗೆ ಗ್ರಾಮದ ಜನರು ಕಣ್ಣೀರು ಹಾಕಿದರೆ ಆದರೆ ನೀಲಗಂಗಯ್ಯ ಮಾತ್ರ ಸುಳಿವು ನೀಡುವುದಿಲ್ಲ. ಇವರ ಮನೆಯ ಆಳುಮಗ ಬಸಪ್ಪನಿಗೆ ಬ್ರಿಟಿಷರು ಹೊಡೆಯಲು ಆರಂಭಿಸಿದಾಗ ಬಾಯಿಬಿಡುತ್ತಾರೆ.

ನಂತರ ಶಸ್ತ್ರಾಸ್ತ್ರ ಕದ್ದ ಪ್ರಕರಣದ ಮೇಲೆ ನೀಲಗಂಗಯ್ಯ ಅವರಿಗೆ ಮೂರುವರೆ ವರ್ಷ ಜೈಲುಶಿಕ್ಷೆ ಘೋಷಣೆಯಾಗುತ್ತದೆ. ಆದರೆ ಜೈಲಿಗೆ ಹೋಗುವಾಗ ಮಗ ಖಾದಿಬಟ್ಟೆ, ಗಾಂಧಿ ಟೋಪಿ ಹಾಕಿಕೊಂಡು ಹೋಗಲಿ ಎಂದು ನಿರ್ಧರಿಸಿದ ಅವರ ತಾಯಿ ಚನ್ನಬಸಮ್ಮ, ಮಗ ಜೈಲಿಗೆ ಹೋಗುವ ಒಂದುದಿನ ಮೊದಲು ಸಂಜೆ ಸಮಯ 12 ಕಿ.ಮೀ ದೂರದ ಬೂದಿಹಾಳ ಗ್ರಾಮಕ್ಕೆ ನಡೆದುಕೊಂಡು ಬಂದು ಖಾದಿಬಟ್ಟೆ ಹೊಲಿಸಿಕೊಂಡು, ಮರಳಿ ರಾತ್ರಿ ಹೊಸಳ್ಳಿಗೆ ಹೋಗಿ ಕೊಡುತ್ತಾಳೆ. ಬೆಳಿಗ್ಗೆ ಖಾದಿ ಧರಿಸಿದ ಮಗ ನೀಲಗಂಗಯ್ಯ ಜೈಲಿಗೆ ಹೋಗುತ್ತಾರೆ. ಕೆಲವೇ ವರ್ಷಗಳಲ್ಲಿ ಹೊಸಳ್ಳಿ ಗ್ರಾಮ ಪಂಚಾಯ್ತಿಯನ್ನು ಬ್ರಿಟಿಷರಿಂದ ಮುಕ್ತಗೊಳಿಸುತ್ತಾರೆ.

ಮತ್ತಷ್ಟು ಜನ ಜೈಲಿಗೆ: ‘ಗಾಂಧೀಜಿಯವರಿಂದ ಪ್ರೇರಣೆ ಪಡೆದವರು ಬಹಳಷ್ಟು ಜನ. ಅಸಹಕಾರ ಚಳುವಳಿ ಸಂದರ್ಭದಲ್ಲಿ ಅಂದಾನಪ್ಪ ದೊಡ್ಡಮೇಟಿಯವರಿಗೆ ಆರೂವರೆ ವರ್ಷ ಜೈಲು ಶಿಕ್ಷೆಯಾಗುತ್ತದೆ. ‘ದೊಡ್ಡಮೇಟಿಯವರು ಜೈಲಿಗೆ ಹೋಗ್ತಾರೆ ಅಂದರೆ ನಾನು ಜೈಲಿಗೆ ಹೋಗುತ್ತೇನೆ’ ಎಂದು ಹೇಳಿ, ಮದುವೆಯಾದ ದಿನವೇ ಊದಪ್ಪ(ಬಸಪ್ಪ) ಜಾಲಣ್ಣವರ ಎಂಬುವವರು ಜಕ್ಕಲಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಬಯಲಿನಲ್ಲಿ ಬ್ರಿಟಿಷರಿಗೆ ಶರಣಾಗಿ ಜೈಲು ಸೇರಿದರು’ ಎಂದು ದೊಡ್ಡಮೇಟಿ ಮನೆತನದ ಮೂರನೇ ತಲೆಮಾರಿನ ರವೀಂದ್ರನಾಥ ದೊಡ್ಡಮೇಟಿ ಅವರು ತಮ್ಮ ಅಜ್ಜ ತಮಗೆ ಹೇಳಿದ್ದನ್ನು ಸ್ಮರಿಸಿಕೊಂಡರು.

ಗಾಂಧೀಜಿಯವರು ಬಂದು ಹೋದ ಮೇಲೆ ಅಕ್ಟೋಬರ್ 2 ರಂದು ಜನಿಸಿದ ಗಂಡು ಮಕ್ಕಳಿಗೆ ಗಾಂಧೀಯಪ್ಪ, ಹೆಣ್ಣುಮಕ್ಕಳಿಗೆ ಕಸ್ತೂರಬಾ ಎಂದು ನಾಮಕರಣ ಮಾಡಿದ್ದಾರೆ. ಇಂದಿಗೂ ಜಕ್ಕಲಿಯಲ್ಲಿ ಹಿರಿಯರಾದ ಗಾಂಧೀಯಪ್ಪ ಕುರಿ ಎನ್ನುವರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT