ತೋಂಟದಾರ್ಯ ಮಠ ಬ್ರಾಹ್ಮಣ ವಿರೋಧಿಯಲ್ಲ; ಸ್ಪಷ್ಟನೆ

7

ತೋಂಟದಾರ್ಯ ಮಠ ಬ್ರಾಹ್ಮಣ ವಿರೋಧಿಯಲ್ಲ; ಸ್ಪಷ್ಟನೆ

Published:
Updated:
Deccan Herald

ಗದಗ: ‘ತೋಂಟದಾರ್ಯ ಮಠ ಬ್ರಾಹ್ಮಣ ವಿರೋಧಿಯಲ್ಲ. ಮಠಕ್ಕೆ ಸಾಕಷ್ಟು ಬ್ರಾಹ್ಮಣ ಸಮಾಜದ ಭಕ್ತರೂ ನಡೆದುಕೊಳ್ಳುತ್ತಿದ್ದಾರೆ. ಶಿಕ್ಷಕರ ದಿನಾಚರಣೆ ದಿನದಂದು ತೋಂಟದ ಶ್ರೀ ಅವರು ಆಡಿದ ಮಾತಿನ ಸತ್ಯಾಸತ್ಯತೆ ತಿಳಿಯದೆ, ಆ ಸಮಾಜದ ಕೆಲವರು ಸ್ವಾಮೀಜಿ ವಿರುದ್ಧ ಜಿಲ್ಲಾಧಿಕಾರಿಗೆ ಸುಳ್ಳು ದೂರು ಸಲ್ಲಿಸಿರುವುದನ್ನು ವಿರೋಧಿಸುತ್ತೇವೆ’ಎಂದು ಮಠದ ಭಕ್ತರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರಾಧಾಕೃಷ್ಣನ್‌ ಅವರು ಬ್ರಾಹ್ಮಣರಾಗಿದ್ದರು. ಹೀಗಾಗಿ ಹೆಚ್ಚಿನ ಪ್ರಾಧಾನ್ಯತೆ ಲಭಿಸಿದೆ. ಅವರ ಜನ್ಮದಿನದ ಬದಲು ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾ ಫುಲೆ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ನಡೆಯಬೇಕು’ ಎಂದು ಸ್ವಾಮೀಜಿ ಹೇಳಿದ್ದರು.

‘ಇದರ ಅರ್ಥ ರಾಧಾಕೃಷ್ಣನ್ ಅವರ ಬಗೆಗೆ ಸ್ವಾಮೀಜಿ ಅವರಿಗೆ ಗೌರವ ಇಲ್ಲವೆಂದಲ್ಲ. ಅವರು ಅಸಾಧಾರಣ ವಿದ್ವಾಂಸರಾಗಿದ್ದರು, ಅವರ ಬಗೆಗೆ ಅಗೌರವ ಪ್ರಶ್ನೆಯೇ ಉದ್ಭವಿಸುವುದಿಲ್ಲ.ಸಾವಿತ್ರಿ ಬಾ ಫುಲೆ ಎಂಬ ಧೀರ ಮಹಿಳೆ ಕಾಲಗರ್ಭದಲ್ಲಿ ಕಣ್ಮರೆಯಾದುದು ಸತ್ಯಕ್ಕೆ ಬಗೆದ ಘೋರ ಅಪಚಾರ. ಅವಳೇ ದೇಶದ ಪ್ರಥಮ ಶಿಕ್ಷಕಿ ಎಂದರೆ ಸತ್ಯವನ್ನು ಹೇಳಿದಂತೆ. ಪ್ರಜಾಪ್ರಭುತ್ವದಲ್ಲಿ ಆದ ಈ ತಪ್ಪನ್ನು ಸರಿಪಡಿಸುವುದಕ್ಕೆ ಸಾಕಷ್ಟು ಅವಕಾಶ ಇದೆ ಎಂದು ಸ್ವಾಮೀಜಿ ಹೇಳಿದ್ದರು. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನಬಸಪ್ಪ ಕಂಠಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕವಳಿಕಾಯಿ, ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಜಿ.ಬಿ.ಪಾಟೀಲ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಕೋರ್ಲಹಳ್ಳಿ, ಬಣಗಾರ ಸಮಾಜದ ಅಧ್ಯಕ್ಷ ದಾನಪ್ಪ ತಡಸದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮಹೇಶ್‌ ಅವರು ಮಠಕ್ಕೆ ಭೇಟಿ ನೀಡಿದಾಗಲೂ, ‘ಬ್ರಾಹ್ಮಣರಲ್ಲಿ ದೇಶಾಭಿಮಾನಿಗಳು ಮತ್ತು ಒಳ್ಳೆಯವರು ಇದ್ದರು, ಬಸವಣ್ಣನನ್ನು ಮರೆತ ಕೆಲ ಲಿಂಗಾಯತರು ಸಹ ಬ್ರಾಹ್ಮಣರಂತೆ ದಲಿತರೊಂದಿಗೆ ಕೆಟ್ಟದಾಗಿ ನಡೆದುಕೊಂಡರು’ ಎಂದು ಶ್ರೀಗಳು ಸ್ವಾತಂತ್ರ್ಯ ಪೂರ್ವದ ಸಾಮಾಜಿಕ ಸ್ಥಿತಿಗತಿಗಳನ್ನು ವಿವರಿಸಿದರೇ ಹೊರತು, ಧರ್ಮ, ಜಾತಿಯ ಕುರಿತು ಚರ್ಚೆ ನಡೆಸಿಲ್ಲ’ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !