ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ‘ಆತ್ಮಬಂಧುವಿಗೆ ‘ಅರಿವಿನ ಮನೆ’ ಅರ್ಪಣೆ

ತೋಂಟದ ಸಿದ್ಧಲಿಂಗ ಶ್ರೀಗಳ ದ್ವಿತೀಯ ಪುಣ್ಯಸ್ಮರಣೆಯಂದು ಲೋಕಾರ್ಪಣೆ
Last Updated 21 ಅಕ್ಟೋಬರ್ 2020, 3:44 IST
ಅಕ್ಷರ ಗಾತ್ರ

ಗದಗ: ‘ತೋಂಟದಾರ್ಯ ಮಠದ ಸಿದ್ಧಲಿಂಗ ಶ್ರೀಗಳ ದ್ವಿತೀಯ ಪುಣ್ಯಸ್ಮರಣೆ ಸಂದರ್ಭದಲ್ಲಿ ಅವರ ಕನಸಿನ ಯೋಜನೆಯಾದ ‘ಅರಿವಿನ ಮನೆ’ ಗ್ರಂಥಾಲಯ ತೆರೆಯುವ ಮೂಲಕ ಪ್ರೊ. ಚಂದ್ರಶೇಖರ ವಸ್ತ್ರದ ಶ್ರೇಷ್ಠ ಕಾರ್ಯ ಮಾಡಿದ್ದಾರೆ’ ಎಂದು ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಹಾತಲಗೇರಿ ನಾಕಾ ಸಮೀಪದಲ್ಲಿರುವ ಚಂದ್ರಶೇಖರ ವಸ್ತ್ರದ ಅವರ ನಿವಾಸದಲ್ಲಿ ಮಂಗಳವಾರ ನಡೆದ ‘ಅರಿವಿನ ಮನೆ’ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಪುಸ್ತಕಕ್ಕೂ ಗುರುಗಳಿಗೂ ಅವಿನಾಭಾವ ಸಂಬಂಧವಿತ್ತು. ಸಿದ್ಧಲಿಂಗ ಸ್ವಾಮೀಜಿ ಪುಸ್ತಕದ ಸ್ವಾಮೀಜಿ ಎಂದೇ ಖ್ಯಾತರಾಗಿದ್ದರು. ಎಲ್ಲರಲ್ಲೂ ಓದಿನ ಅಭಿರುಚಿ ಬೆಳೆಸಿದ ಸ್ವಾಮೀಜಿ ಪ್ರತಿಭಾವಂತರನ್ನು ಗುರುತಿಸಿ, ಅವರಿಗೆ ಅವಕಾಶ ಕಲ್ಪಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದರು. ಪೂಜ್ಯರ ಸ್ಮರಣೆಯಲ್ಲಿ ಜನೋಪಯೋಗಿ ಕಾರ್ಯಗಳನ್ನು ಮಾಡಿದಾಗ ಅವರ ಆತ್ಮಕ್ಕೆ ಸಂತೃಪ್ತಿ ಲಭಿಸುತ್ತದೆ’ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ಅರಿವಿನ ಮನೆ’ ಸಂಸ್ಥಾಪಕ ಪ್ರೊ.ಚಂದ್ರಶೇಖರ ವಸ್ತ್ರದ ಮಾತನಾಡಿ, ‘ಹಗಲಿನಲ್ಲಿಯೇ ಸಂಜೆಯಾಯಿತು; ತಮವು ಕಳೆಯಿತು ಒಮ್ಮೆಲೇ’ ಎಂಬ ತಮ್ಮ ಕವಿತೆಯ ವಸ್ತು ತಾವೇ ಆದ ಸ್ವಾಮೀಜಿ, ಲಿಂಗೈಕ್ಯರಾಗಿ ಇಂದಿಗೆ ಎರಡು ವರ್ಷಗಳು ಕಳೆದವು. ಅವರು ಸದಾ ನನ್ನೊಂದಿಗೆ ಇದ್ದಾರೆ ಎಂಬ ಭಾವ ಇದೆ; ಮುಂದೆಯೂ ಇರಲಿದೆ. ಶ್ರೀಗಳಿಗೆ ಪುಸ್ತಕ ಓದುವುದು ಮತ್ತು ಓದಿಸುವುದು ಅಂದರೆ ತುಂಬ ಪ್ರೀತಿ. ಹಾಗಾಗಿ, ಸಿದ್ಧಲಿಂಗ ಸ್ವಾಮೀಜಿ ಸ್ಮರಣಾರ್ಥ ಏನಾದರೂ ವಿಶೇಷವಾಗಿ ಮಾಡಬೇಕು ಎಂಬುದು ಕನಸಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಪ್ರೇರಣೆಯಂತೆ ಅರಿವಿನ ಮನೆ ತೆರೆದಿದ್ದೇನೆ’ ಎಂದು ಹೇಳಿದರು.

ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ‘ಸಿದ್ಧಲಿಂಗ ಅರಿವಿನ ಮನೆಗೆ ಸುಂದರ ರೂಪ ಕೊಟ್ಟು, ಚಿಕ್ಕದಾದರೂ ಚೊಕ್ಕವಾಗಿ ಪುಸ್ತಕ ಸಂಗ್ರಹಾಲಯ ಮಾಡಿರುವ ವಸ್ತ್ರದ ಅವರ ಕೆಲಸ ಶ್ಲಾಘನೀಯ. ಓದಿನ ಬಲ ವ್ಯಕ್ತಿಯನ್ನು ಮೇಲ್ಮಟ್ಟಕ್ಕೆ ಏರಿಸುತ್ತದೆ ಎಂಬುದಕ್ಕೆ ಅವರೇ ಸಾಕ್ಷಿ. ನಾವು ಕೂಡ ಅರಿವಿನ ಮನೆಗೆ ಪುಸ್ತಕಗಳನ್ನು ಒದಗಿಸುವ ಮೂಲಕ ಅವರ ಕಾರ್ಯಕ್ಕೆ ಕೈಜೋಡಿಸುತ್ತೇವೆ’ ಎಂದು ಹೇಳಿದರು.

ಶರಣೆ ಗೌರಕ್ಕ ಬಡಿಗಣ್ಣನವರ ‘ಅರಿವಿನ ಮನೆ’ಯಲ್ಲಿ ಪ್ರಥಮ ಓದು ಪ್ರಸ್ತುತಪಡಿಸಿದರು. ಶಿವಾನುಭವ ಸಮಿತಿ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಶಶಿಕಲಾ ವಸ್ತ್ರದ, ಕ್ಷಮಾ ಹಾಗೂ ಶರಣ, ಶರಣೆಯರು ಇದ್ದರು.

15 ದಿನಕ್ಕೊಮ್ಮೆ ಕಥೆ ಓದುವ ಕಾರ್ಯಕ್ರಮ

‘ಅರಿವಿನ ಮನೆ ಪ್ರತಿದಿನ ಬೆಳಿಗ್ಗೆ 9ರಿಂದ 12, ಸಂಜೆ 4ರಿಂದ ರಾತ್ರಿ 8ರವರೆಗೆ ಎಲ್ಲರಿಗೂ ಮುಕ್ತವಾಗಿರುತ್ತದೆ. ಮಕ್ಕಳಲ್ಲಿ ಓದಿನ ಆಸಕ್ತಿ ಹೆಚ್ಚಿಸುವ ಸಲುವಾಗಿ ಹದಿನೈದು ದಿನಕ್ಕೊಮ್ಮೆ ಕಥೆ ಓದುವ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಪ್ರೊ. ಚಂದ್ರಶೇಖರ ವಸ್ತ್ರದ ತಿಳಿಸಿದರು.

‘ಸಂಗ್ರಹದಲ್ಲಿದ್ದ ಹದಿನೈದು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ವಿಷಯವಾರು ವಿಂಗಡಿಸಿ, ಅದಕ್ಕೊಂದು ಹೊಸ ಕಟ್ಟಡ ಕಟ್ಟಿಸಿ ಅವರ ಕನಸನ್ನು ‘ಅರಿವಿನ ಮನೆ’ಯ ಮೂಲಕ ನನಸಾಗಿಸಿದ ಸಾರ್ಥಕಭಾವ ಈಗ ಆವರಿಸಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT