ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಶ್ಟಟ ನಿವಾರಣೆಗೆ ಸರ್ಕಾರ ಶ್ರಮಿಸಲಿ: ಡಾ. ತೋಂಟದ ಸಿದ್ಧರಾಮ ಶ್ರೀ

2,643ನೇ ಶಿವಾನುಭವ ಕಾರ್ಯಕ್ರಮದಲ್ಲಿ ಡಾ. ತೋಂಟದ ಸಿದ್ಧರಾಮ ಶ್ರೀ ಆಗ್ರಹ
Published 2 ಜೂನ್ 2023, 13:02 IST
Last Updated 2 ಜೂನ್ 2023, 13:02 IST
ಅಕ್ಷರ ಗಾತ್ರ

ಗದಗ: ‘ಯುವಕರು ದುಶ್ಚಟಗಳಿಗೆ ದಾಸರಾಗಿದ್ದಾರೆ. ಇದರಿಂದಾಗಿ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ’ ಎಂದು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ಸಿದ್ಧರಾಮ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ 2,643ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮದ್ಯಪಾನದಿಂದ ಸಾಕಷ್ಟು ಕುಟುಂಬಗಳು ಬೀದಿಪಾಲಾಗುತ್ತಿವೆ. ದುಶ್ಚಟಗಳ ನಿರ್ಮೂಲನೆಗೆ ಸರ್ಕಾರ ಬದ್ಧವಾಗಿರಬೇಕು. ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿ, ಕಾಯ್ದೆಗಳನ್ನು ಇನ್ನಷ್ಟು ಬಲಪಡಿಸಬೇಕು’ ಎಂದು ಹೇಳಿದರು. 

‘ವ್ಯಸನಮುಕ್ತ ಸಮಾಜ ನಿರ್ಮಿಸಲು ಸರ್ಕಾರಕ್ಕೆ ಪತ್ರದ ಮೂಲಕ ಸಾಕಷ್ಟು ಸಲ ಒತ್ತಾಯಿಸಲಾಗಿದೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಇಳಕಲ್ ಮಹಾಂತಪ್ಪಗಳು ತಮ್ಮ ಜಂಗಮ ಜೋಳಿಗೆಯಲ್ಲಿ ದುಶ್ಟಟಗಳನ್ನು ಹಾಕಿಸಿಕೊಳ್ಳುವ ಮೂಲಕ ಜನರನ್ನು ರಕ್ಷಿಸುವ ಕಾಯಕ ಮಾಡಿದ್ದಾರೆ’ ಎಂದು ಸ್ಮರಿಸಿದರು.

ಪ್ರೊ. ಸಿದ್ಧು ಯಾಪಲಪರವಿ ಮಾತನಾಡಿ, ‘ತೋಂಟದಾರ್ಯ ಮಠದ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಶಿವಾನುಭವ ವೇದಿಕೆ ಮೂಲಕ ಕಲಾವಿದರು, ಸಾಹಿತಿಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ. ಶ್ರೀಮಠದಲ್ಲಿ ನಡೆಯುತ್ತಿರುವ ಶಿವಾನುಭವ ಕಾರ್ಯಕ್ರಮ ವಿಶ್ವದಾಖಲೆ ನಿರ್ಮಿಸಲಿದೆ’ ಎಂದು ಹೇಳಿದರು.

‘12ನೇ ಶತಮಾನದಲ್ಲಿ ಶಿವಶರಣರು, ಜನರಲ್ಲಿರುವ ಅಜ್ಞಾನ, ಮೂಢನಂಬಿಕೆ, ದುಶ್ಚಟಗಳನ್ನು ದೂರಮಾಡಲು ಹೋರಾಟ ಮಾಡಿದ್ದರು. ಜನರ ಆರೋಗ್ಯದ ದೃಷ್ಟಿಯಿಂದ, ಸರಳ, ಸುಂದರ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ದುಶ್ಚಟಗಳ ಮೇಲೆ ಕಡಿವಾಣ ಹಾಕಲು ಸರ್ಕಾರ ಸೂಕ್ತ ಕ್ರಮ ವಹಿಸಬೇಕು. ಒಂದು ಕಡೆ ದುಶ್ಚಟಗಳ ನಿವಾರಣೆಗಾಗಿ ಯೋಜನೆಗಳನ್ನು ರೂಪಿಸಿ, ಮತ್ತೊಂದು ಕಡೆ ಮದ್ಯ, ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸರ್ಕಾರ ಪರವಾನಗಿ ನೀಡಿ ಪ್ರೋತ್ಸಾಹಿಸುತ್ತಿರುವುದು ಶೋಚನೀಯ ಸಂಗತಿ. ಆದಾಯದ ಸಲುವಾಗಿ ದುಶ್ಚಟಗಳಿಗೆ ಉತ್ತೇಜನ ನೀಡುವುದನ್ನು ನಿಲ್ಲಿಸಬೇಕು’ ಎಂದು ಸಲಹೆ ನೀಡಿದರು.

‘ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಹೆಸರಾಂತ ನಟರು ಮತ್ತು ಮಹನೀಯರು ದುಶ್ಚಟಗಳ ಪ್ರಮಾಣ ಹೆಚ್ಚಲು ಕಾರಣಕರ್ತರಾಗಿದ್ದಾರೆ’ ಎಂದು ಆರೋಪಿಸಿದರು.

ಮಠದ ಕಲಾವಿದರಾದ ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರ ವಚನ ಸಂಗೀತದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅಮೃತಾ ಜಗದೀಶ ಅಂಗಡಿ ಧರ್ಮಗ್ರಂಥ ಪಠಿಸಿದರು. ಪವನ ಸಿದ್ಧಲಿಂಗಪ್ಪ ಬನ್ನಿಗೊಣ್ಣವರ ವಚನ ಚಿಂತನ ನಡೆಸಿಕೊಟ್ಟರು. ಶಿವಾನುಭವ ಭಕ್ತಿಸೇವೆ ವಹಿಸಿದ್ದ ಚನ್ನಮ್ಮ ವಿಶ್ವನಾಥ ಕೌದಿ ಅವರನ್ನು ಶ್ರೀಗಳು ಸನ್ಮಾನಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT