ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ: ತುಂಗೆಯ ಒಡಲು ತುಂಬಿದ ಮಲೆನಾಡ ಮಳೆ

ಗದಗ–ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯ ಕುಡಿಯುವ ನೀರಿನ ಬವಣೆಗೆ ಪರಿಹಾರ
Last Updated 22 ಜೂನ್ 2020, 19:30 IST
ಅಕ್ಷರ ಗಾತ್ರ

ಮುಂಡರಗಿ: ಕಳೆದೊಂದು ವಾರದಿಂದ ಮಲೆನಾಡು ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು, ತಾಲ್ಲೂಕಿನ ಹಮ್ಮಿಗೆಯಲ್ಲಿರುವ ತುಂಗಭದ್ರಾ ನದಿಯ ಸಿಂಗಟಾಲೂರು ಏತನೀರಾವರಿ ಯೋಜನೆಯ ಬ್ಯಾರೇಜ್‌ಗೆ ಸಾಕಷ್ಟು ನೀರು ಹರಿದುಬಂದಿದೆ.

ನದಿಪಾತ್ರದಲ್ಲಿ ಸಾಕಷ್ಟು ನೀರು ಇರುವುದರಿಂದ ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಕುಡಿಯುವ ನೀರಿನ ಬವಣೆಗೆ ಪರಿಹಾರ ಲಭಿಸಿದೆ. ವರ್ಷದುದ್ದಕ್ಕೂ ಹಮ್ಮಿಗೆ ಬ್ಯಾರೇಜ್‌ನಿಂದಲೇ ಇಡೀ ಜಿಲ್ಲೆಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಸದ್ಯ ಬ್ಯಾರೇಜಿನಲ್ಲಿ 1.83ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ. ಮಳೆ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಬ್ಯಾರೇಜ್‌ಗೆ ಒಳಹರಿವು ಹೆಚ್ಚಲಿದೆ ಎನ್ನುತ್ತಾರೆ ಅಧಿಕಾರಿಗಳು.

ಸದ್ಯ ಬ್ಯಾರೇಜಿನ ಕೆಲವು ಗೇಟುಗಳನ್ನು ತೆರೆದು, ಹಚ್ಚುವರಿ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಜೂ.20ರಂದು 5,000 ಕ್ಯುಸೆಕ್ ಹಾಗೂ ಜೂ.21ರಂದು 5,500ಕ್ಯುಸೆಕ್ ನೀರನ್ನು ಬ್ಯಾರೇಜಿನಿಂದ ಹೊರಗೆ ಹರಿಸಲಾಗಿದೆ. ಬ್ಯಾರೇಜಿನಿಂದ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟಿರುವುದರಿಂದ ತಾಲ್ಲೂಕಿನ ನದಿ ದಂಡೆಯ ಗ್ರಾಮಗಳಾದ ಶಿಂಗಟಾಲೂರು, ಶೀರನಹಳ್ಳಿ, ಗಂಗಾಪೂರ, ಕೊರ್ಲಹಳ್ಳಿ, ಕಕ್ಕೂರು, ಹೆಸರೂರು ನಿವಾಸಿಗಳಿಗೆ ಎಚ್ಚರಿಕೆ ವಹಿಸಲು ತಾಲ್ಲೂಕು ಆಡಳಿತ ಸೂಚಿಸಿದೆ. ಸದ್ಯ ಇಲ್ಲಿ ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರು ಹರಿಯುತ್ತಲಿದೆ.

ಜಿಲ್ಲೆಯಲ್ಲಿ ಮುಂಗಾರು ಮಳೆ ಕ್ಷೀಣವಾಗಿದ್ದು, ನದಿಯಲ್ಲಿ ನೀರು ಹರಿಯುತ್ತಿರುವುದನ್ನು ಕಂಡು ನದಿದಂಡೆಯ ಗ್ರಾಮಗಳ ರೈತರು ಸಂತಸ ಪಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಮತ್ತು ಮತ್ತಿತರ ಗ್ರಾಮಗಳು, ಗದಗ ಜಿಲ್ಲೆಯ ಮುಂಡರಗಿ, ಲಕ್ಷ್ಮೇಶ್ವರ, ಶಿರಹಟ್ಟಿ, ಮುಳಗುಂದ ಮೊದಲಾದ ಪಟ್ಟಣಗಳಿಗೆ ಹಾಗೂ ಗದಗ ಜಿಲ್ಲೆಯ ಹಲವಾರು ಗ್ರಾಮಗಳು ಕುಡಿಯುವ ನೀರಿಗಾಗಿ ತುಂಗಭದ್ರಾ ನದಿಯನ್ನೇ ಅವಲಂಬಿಸಿವೆ.

'ಮಳೆಗಾಲದಲ್ಲಿ ಮಲೆನಾಡಿನಲ್ಲಿ ಬೀಳುವ ಮಳೆಯಿಂದಾಗಿ ಬ್ಯಾರೇಜಿನಲ್ಲೆ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗುತ್ತದೆ. ಬ್ಯಾರೇಜಿನಲ್ಲಿ ಸಂಗ್ರಹ ಸಾಮರ್ಥ್ಯವನ್ನು ಮೀರಿ ವ್ಯರ್ಥವಾಗಿ ಹರಿದು ಹೋಗುತ್ತಿರುವ ನೀರಿನಿಂದ ತಾಲ್ಲೂಕು ಹಾಗೂ ಜಿಲ್ಲೆಯ ವಿವಿಧ ಕೆರೆ ಹಾಗೂ ಚೆಕ್‌ಡ್ಯಾಂಗಳನ್ನು ತುಂಬಿಸಬೇಕು. ಆ ಮೂಲಕ ನೀರು ವ್ಯರ್ಥವಾಗುವುದನ್ನು ತಡೆಗಟ್ಟಬೇಕು' ಎನ್ನುತ್ತಾರೆ ತಾಲ್ಲೂಕು ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT