ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ಜತೆಗೆ ಸ್ವ ಉದ್ಯೋಗ ಪಾಠ

ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್‌ ವಿವಿಯಲ್ಲಿ ಸಸ್ಯಪಾಲನಾ ಕೇಂದ್ರ
Last Updated 26 ಫೆಬ್ರುವರಿ 2021, 2:24 IST
ಅಕ್ಷರ ಗಾತ್ರ

ಗದಗ: ಇಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ವಿಶ್ವವಿದ್ಯಾಲಯದಲ್ಲಿ ದೇಸಿ ಚಟುವಟಿಕೆಯ ಭಾಗವಾಗಿ ನರ್ಸರಿಯನ್ನು ಅಭಿವೃದ್ಧಿಪಡಿಸಲಾಗಿದ್ದು ಹಣ್ಣು, ಆಲಂ ಕಾರಿಕ, ಔಷಧೀಯ ಸಸ್ಯಗಳು ಸೇರಿದಂತೆ 500ಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಲಾಗಿದೆ. ಇಲ್ಲಿ ಗಿಡಗಳನ್ನು ಪೋಷಿಸುವುದರ ಜತೆಗೆ ಸಂಶೋಧನೆ, ಪ್ರಯೋಗಗಳು ಕೂಡ ನಡೆಯುತ್ತಿರುವುದು ವಿಶೇಷ.

‘ಗದಗ ಜಿಲ್ಲೆಯ ಮಣ್ಣಿಗೆ ಸರ್ವ ಋತುವಿನಲ್ಲೂ ರೈತರಿಗೆ ಆದಾಯ ತಂದು ಕೊಡುವ ಫಲವತ್ತತೆ ಇದೆ. ಈ ನಿಟ್ಟಿನಲ್ಲಿ ಪ್ರಯೋಗಗಳನ್ನು ಮುಂದುವರಿಸಿದ್ದು, ಮಿಶ್ರಬೆಳೆಗಳ ಮೂಲಕ ವಿವಿಧ ಹಣ್ಣು,
ತರಕಾರಿಗಳನ್ನು ಬೆಳೆಯುವಂತೆ
ರೈತರಿಗೆ ತರಬೇತಿ ನೀಡುವ ಯೋಜನೆಯನ್ನು ಶೀಘ್ರವೇ ಪ್ರಾರಂಭಿಸುವ ಉದ್ದೇಶವನ್ನು ವಿಶ್ವವಿದ್ಯಾಲಯ ಹೊಂದಿದೆ’ ಎಂದು ಸಸ್ಯಪಾಲನಾ ಕೇಂದ್ರದ ಸಂಯೋಜಕಿ ಡಾ. ನೀಲಮ್ಮ ಹೇಳಿದರು.

15ಕ್ಕೂ ಹೆಚ್ಚು ಬಗೆಯ ಔಷಧೀಯ ಸಸ್ಯಗಳು, 20ಕ್ಕೂ ಹೆಚ್ಚಿನ ಬಗೆಯ ಹಣ್ಣಿನ ಗಿಡಗಳು, ಹತ್ತಾರು ಬಗೆಯ ಆಲಂಕಾರಿಕ ಗಿಡಗಳನ್ನು ಈ ನರ್ಸರಿಯಲ್ಲಿ ಬೆಳೆಸಲಾಗಿದೆ. ಏಳು ಎಂಟು ತಿಂಗಳು ಪೂರೈಸಿರುವ ಇಲ್ಲಿನ ಪಪ್ಪಾಯ ಗಿಡಗಳಲ್ಲಿ ಕಾಯಿಗಳು ತೊನೆದಾಡುತ್ತಿವೆ. ಇದನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಲಕ್ಷಗಟ್ಟಲೆ ಸಸಿಗಳನ್ನು ಬೆಳೆಸುವ ಉದ್ದೇಶವನ್ನು ವಿಶ್ವವಿದ್ಯಾಲಯ ಹೊಂದಿದೆ.

ಶಿಕ್ಷಕರು– ವಿದ್ಯಾರ್ಥಿಗಳ ಸಹಭಾಗಿತ್ವ: ಇಲ್ಲಿರುವ ನರ್ಸರಿಯು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಹಭಾಗಿತ್ವದೊಂದಿಗೆ ರೂಪುಗೊಂಡಿದೆ. ವಿಶ್ವವಿದ್ಯಾಲಯದಲ್ಲಿರುವ 10 ವಿಭಾಗಗಳ ವಿದ್ಯಾರ್ಥಿಗಳು ಪ್ರತಿ ಶನಿವಾರ ನಡೆಯುವ ದೇಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಿಡಗಳಿಗೆ ನೀರುಣಿಸುವುದು, ಮಡಿ ಮಾಡುವುದು, ಕಳೆ ತೆಗೆಯುವುದು, ನಾಟಿ ಮಾಡುವುದು, ಪಾಲಿ ಬ್ಯಾಗ್‌ಗೆ ಮಣ್ಣು ತುಂಬಿಸುವುದು ಇನ್ನಿತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.

‘ವಿಶ್ವವಿದ್ಯಾಲಯದ ನೂತನ ಆವರಣದಲ್ಲಿ 1.20 ಎಕರೆಯಲ್ಲಿ ನರ್ಸರಿ ಮಾಡಲಾಗಿದೆ. ಇಲ್ಲಿ ಬೆಳೆದಿರುವ ಸಸಿಗಳನ್ನು ದೇಸಿ ಮಳಿಗೆಯಲ್ಲಿ ಮಾರಾಟ ಮಾಡುವ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಗ್ರಾಹಕರು ಒಂದು ತಿಂಗಳು ಮುಂಚಿತವಾಗಿ ಬೇಡಿಕೆ ಇಟ್ಟರೆ ಅವರ ಇಷ್ಟದ ಸಸಿಗಳನ್ನು ಬೆಳೆಸಿ ಕೊಡಲಾಗುವುದು’ ಎನ್ನುತ್ತಾರೆ ಡಾ. ನೀಲಮ್ಮ.

‘ನಿಸರ್ಗದೊಂದಿಗೆ ಶಿಕ್ಷಣ ಎಂಬ ತತ್ವದ ಅಡಿಯಲ್ಲಿ ನಡೆಯುತ್ತಿರುವ ನರ್ಸರಿಯಲ್ಲಿ ಕಡಿಮೆ ಜಾಗದಲ್ಲಿ ಹೆಚ್ಚಿನ ಗಿಡಗಳನ್ನು ಬೆಳೆಸಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಪಾಲಿಹೌಸ್‌, ಶೇಡ್‌ ನೆಟ್‌ ನಿರ್ಮಾಣಗೊಳ್ಳಲಿದ್ದು, ಆಗ ಇನ್ನೂ ಹೆಚ್ಚಿನ ಗಿಡಗಳನ್ನು ಬೆಳೆಸಲಾಗುವುದು. ಗಿಡಗಳಿಗೆ ಎರೆಹುಳು ಗೊಬ್ಬರ, ಸಾವಯವ ಗೊಬ್ಬರವನ್ನೇ ಉಪಯೋಗಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ಪ್ರಾಯೋಗಿಕ ಪಾಠಕ್ಕೆ ಒತ್ತು

ಪದವಿ, ಸ್ನಾತಕೋತ್ತರ ಪದವಿ ಓದಿದ ಎಲ್ಲರಿಗೂ ಕೆಲಸ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ, ಇಲ್ಲಿ ಓದಿದವರು ಸ್ವ ಉದ್ಯೋಗ ಕಂಡುಕೊಳ್ಳಲು ಅನುಕೂಲವಾಗುವಂತೆ ಶಿಕ್ಷಣ ನೀಡಲಾಗುತ್ತಿದೆ.

‘ಗ್ರಾಮೀಣಾಭಿವೃದ್ಧಿ ವಿವಿಯ ಉದ್ದೇಶದಂತೆ ಇಲ್ಲಿನ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಂಶೋಧನೆಗಳು ನಡೆಯುತ್ತಿದ್ದು, ಅದನ್ನು ಇಲ್ಲೇ ಪ್ರಯೋಗ ಮಾಡಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ ವೃದ್ಧಿಸಿ, ಅವರು ಸ್ವ ಉದ್ಯೋಗ ಕೈಗೊಳ್ಳಲು ವೇದಿಕೆ ಒದಗಿಸಲಾಗುವುದು’ ಎಂದು ಡಾ. ನೀಲಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT