ಸೋಮವಾರ, ಆಗಸ್ಟ್ 2, 2021
20 °C
ಹೋಟೆಲ್‌, ರೆಸ್ಟೊರೆಂಟ್‌ಗೆ ಅವಕಾಶ

ಗದಗ: ಹಗಲು ಪೂರ್ಣ ಲಾಕ್‌ಡೌನ್ ಸಡಿಲಿಕೆ; ಸಾರಿಗೆ ಬಸ್‌ ಸಂಚಾರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಹೊಸ ಕೋವಿಡ್ ಪ್ರಕರಣಗಳ ಸರಾಸರಿ ಸಂಖ್ಯೆ ಶೇ 5ಕ್ಕಿಂತ ಕಡಿಮೆ ಇರುವ ಕಾರಣ ಗದಗ ಜಿಲ್ಲೆಯಲ್ಲಿ ಹಗಲಿನ ವೇಳೆ ಪೂರ್ಣ ಲಾಕ್‌ಡೌನ್ ಸಡಿಲಿಕೆಗೆ ತೀರ್ಮಾನಿಸಲಾಗಿದೆ.

ಸೋಮವಾರದಿಂದ ಜಿಲ್ಲೆಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 5ರವರೆಗೆ ಎಲ್ಲ ಬಗೆಯ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಜುಲೈ 7ರ ಬೆಳಿಗ್ಗೆ 5 ಗಂಟೆವರೆಗೆ ಈ ನಿಯಮ ಜಾರಿಯಲ್ಲಿ ಇರಲಿದೆ.

ಸರ್ಕಾರ ಜಾರಿಗೊಳಿಸಿರುವ ಪರಿಷ್ಕೃತ ಮಾರ್ಗಸೂಚಿ ಅನುಸಾರ ಹೋಟೆಲ್‌ಗಳಲ್ಲಿ ಕುಳಿತು ತಿನ್ನಲು ಅವಕಾಶವಿದೆ. ಆದರೆ, ಶೇ. 50ರಷ್ಟು ಗ್ರಾಹಕರಿಗೆ ಮಾತ್ರ ಅನುಮತಿ ನೀಡಲಾಗಿದೆ. ಬಾರ್‌ನಲ್ಲಿ ಕುಳಿತು ಊಟ ಮಾಡಲು ಅವಕಾಶವಿದ್ದು, ಮದ್ಯ ಪೂರೈಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ.

ಕೋವಿಡ್ ಕರ್ಫ್ಯೂ ವೇಳೆ ಸ್ಥಗಿತಗೊಂಡಿದ್ದ ಸಾರಿಗೆ ವಾಹನಗಳಿಗೂ ಅವಕಾಶ ನೀಡಲಾಗಿದ್ದು, ಶೇ 50ರಷ್ಟು ಪ್ರಯಾಣಿಕರ ಮಿತಿಯೊಂದಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

‘ಗದಗ ಜಿಲ್ಲೆಯಲ್ಲಿ ಮೊದಲ ದಿನ 140 ಬಸ್‌ಗಳು ಸಂಚಾರ ಆರಂಭಿಸಲಿದ್ದು, ಪ್ರಯಾಣಿಕರ ಸಂಖ್ಯೆ ಆಧರಿಸಿ ಬಸ್‌ ಸಂಖ್ಯೆ ಹೆಚ್ಚಿಸಲಾಗುವುದು. ಮೊದಲ ದಿನ ಜಿಲ್ಲಾ ಕೇಂದ್ರದಿಂದ ತಾಲ್ಲೂಕು, ಪ್ರಮುಖ ನಗರಗಳಿಗೆ ಮಾತ್ರ ಬಸ್‌ಗಳು ಸಂಚರಿಸಲಿದ್ದು,  ಗ್ರಾಮೀಣ ಪ್ರದೇಶಕ್ಕೆ ಸಂಚಾರ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸದ್ಯಕ್ಕೆ ಚಿಂತಿಸಿಲ್ಲ. ಬಾಗಲಕೋಟೆ, ಧಾರವಾಡ, ಬೆಂಗಳೂರು ಮೊದಲಾದ ಜಿಲ್ಲೆಗಳಿಗೂ ಬಸ್‌ಗಳು ಸಂಚರಿಸಲಿವೆ’ ಎಂದು ಗದಗ ವಿಭಾಗದ ಸಂಚಾರ ನಿಯಂತ್ರಣ ಅಧಿಕಾರಿ ಜಿ.ಐ.ಬಸವಂತಪುರ ತಿಳಿಸಿದರು.

‘ಕೋವಿಡ್‌ ಲಸಿಕೆಯ ಎರಡೂ ಡೋಸ್‌ ಪಡೆದ ಚಾಲಕ, ನಿರ್ವಾಹಕರಿಗೆ ಮೊದಲ ಆದ್ಯತೆ ನೀಡಲಾಗಿದೆ. ಮೊದಲ ಲಸಿಕೆ ಪಡೆದ ಸಿಬ್ಬಂದಿ ಕೋವಿಡ್ ನೆಗೆಟಿವ್ ವರದಿ ತರುವುದನ್ನು ಕಡ್ಡಾಯಗೊಳಿಸಲಾಗಿದೆ. ಭಾನುವಾರ ಎಲ್ಲ ಬಸ್‌ಗಳಿಗೆ ಸ್ಯಾನಿಟೈಸ್‌ ಮಾಡಿಸಲಾಗಿದೆ’ ಎಂದು ಅವರು ತಿಳಿಸಿದರು.

ಪ್ರತಿನಿತ್ಯ ಸಂಜೆ 7ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರಲಿದ್ದು, ವಾರಾಂತ್ಯ ಕರ್ಫ್ಯೂ ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. 

***

ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು. ಹೊರಗೆ ಬಂದ ಸಂದರ್ಭದಲ್ಲಿ ಕೋವಿಡ್‌ ನಿಯಮಗಳನ್ನು ಪಾಲಿಸಬೇಕು.

- ಎಂ.ಸುಂದರೇಶ್‌ ಬಾಬು, ಗದಗ ಜಿಲ್ಲಾಧಿಕಾರಿ

***
ಬಿಂಕದಕಟ್ಟಿಯ ಕಿರು ಮೃಗಾಲಯ, ಸಾಲುಮರದ ತಿಮ್ಮಕ್ಕ ಉದ್ಯಾನ ಇಂದಿನಿಂದ ಸಾರ್ವಜನಿಕರಿಗೆ ಮುಕ್ತವಾಗಲಿದ್ದು, ಕೋವಿಡ್‌ ನಿಯಮ ಪಾಲಿಸಬೇಕು.

- ಎ.ವಿ.ಸೂರ್ಯಸೇನ್‌, ಡಿಸಿಎಫ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು