ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಕಾಪುರ ಹಳ್ಳಕ್ಕೆ ನಿರ್ಮಾಣವಾಗದ ಸೇತುವೆ

ಪ್ರತಿವರ್ಷ ಮಳೆಗಾಲದಲ್ಲಿ ಗ್ರಾಮೀಣ ಜನರ ಪರದಾಟ
Published 2 ಜುಲೈ 2023, 14:08 IST
Last Updated 2 ಜುಲೈ 2023, 14:08 IST
ಅಕ್ಷರ ಗಾತ್ರ

ನರೇಗಲ್: ಹೋಬಳಿಯ ಕಳಕಾಪುರ-ಮಾರನಬಸರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿದ್ದು, ಅದರಲ್ಲಿ ಮಳೆನೀರು ಸಮರ್ಪಕವಾಗಿ ಹರಿದು ಹೋಗುತ್ತಿಲ್ಲ. ಹೀಗಾಗಿ ಪ್ರತಿವರ್ಷ ಮಳೆಗಾಲದಲ್ಲಿ ಗ್ರಾಮೀಣ ಜನರು ಪರದಾಡುವುದು ಕೊನೆಯಾಗುತ್ತಿಲ್ಲ.

‘ಹಳ್ಳ ತುಂಬಿ ಹರಿದರೆ ಈ ಗ್ರಾಮಗಳಿಗೆ ಪ್ರವೇಶ ಮಾಡುವುದು ಹಾಗೂ ಗ್ರಾಮದಿಂದ ಹೊರ ಹೋಗುವುದು ಅಸಾಧ್ಯದ ಮಾತಾಗಿದೆ. ಕೂಡಲೇ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು‘ ಎಂದು ಪರಸಪ್ಪ ತಳವಾರ, ಹುಚ್ಚಪ್ಪ ಗಡೇದ ಆಗ್ರಹಿಸಿದರು.

ನರೇಗಲ್, ಜಕ್ಕಲಿ, ಮಾರನಬಸರಿ ಗ್ರಾಮಗಳ ಜನರು ಇದೆ ಮಾರ್ಗದ ಮೂಲಕ ಕಳಕಾಪುರ, ಸೂಡಿ ಹಾಗೂ ಇತರೆ ಗ್ರಾಮಗಳಿಗೆ ಪ್ರಯಾಣ ಮಾಡುತ್ತಾರೆ. ಸೂಡಿ, ಇಟಗಿ ಗ್ರಾಮಗಳಿಗೆ ಹೋಗಲು ಅತ್ಯಂತ ಸಮೀಪದ ಮಾರ್ಗ ಇದಾಗಿದೆ. ನೀರು ಹರಿಯುವ ಹಳ್ಳವನ್ನು ದಾಟಿಕೊಂಡೆ ಸಂಚರಿಸುವ ಅನಿವಾರ್ಯತೆ ಎದುರಾಗುತ್ತದೆ.

ಭಾರಿ ಪ್ರಮಾಣದಲ್ಲಿ ಮಳೆನೀರು ಹರಿದು ಬಂದರೆ ಈ ಗ್ರಾಮಗಳ ಮಧ್ಯೆ ಸಂಪರ್ಕ ಕಡಿತವಾಗುತ್ತದೆ.  ಮಾರನಬಸರಿ, ಕೊಪ್ಪದ ಕ್ರಾಸ್‌, ನಿಡಗುಂದಿ, ಕಳಕಾಪುರ ಮಾರ್ಗದ ಮೂಲಕ ಸುಮಾರು 20 ಕಿಮೀ ಸುತ್ತವರೆದು ಸಂಚರಿಸಬೇಕಾಗಿದೆ.

‘ಕಳಕಾಪುರ, ಮಾರನಬಸರಿ, ಜಕ್ಕಲಿ ಗ್ರಾಮಗಳ ರೈತರ ಜಮೀನುಗಳಿದ್ದು, ರೈತರು, ಕೃಷಿ ಕಾರ್ಮಿಕರು ನಿತ್ಯ ಕೃಷಿ ಚಟುವಟಿಕೆಗಳಿಗೆ ಹೋಗಿ ಬರುವುದು ಸ್ಥಗಿತವಾಗುತ್ತದೆ. ಆದ್ದರಿಂದ ಜನರ ಅನಕೂಲಕ್ಕಾಗಿ ಹಳ್ಳಕ್ಕೆ ಸೇತುವೆ ನಿರ್ಮಿಸುವ ಅನಿವಾರ್ಯತೆ ತುರ್ತು ಇದೆ‘ ಎಂದು ಶರಣಪ್ಪ ಕಟ್ಟಿಮನಿ, ಶಂಕ್ರಪ್ಪ ಮೆಣಸಗಿ ತಿಳಿಸಿದರು.

ಹದಗಟ್ಟೆ ರಸ್ತೆ

ಮಾರನಬಸರಿ-ಕಳಕಾಪುರ ಮಾರ್ಗದ ರಸ್ತೆಯು ಕಿತ್ತು ಹೋಗಿದ್ದು, ಆಳವಾದ ತಗ್ಗುಗಳು ನಿರ್ಮಾಣವಾಗಿವೆ. ಕಿರು ಹಳ್ಳಗಳಿರುವ ಕಡೆಗಳಲ್ಲಿ ಹಾಕಿರುವ ಸಿಮೆಂಟ್‌ ಬಿರುಕು ಬಿಟ್ಟಿದ್ದು, ಅದು ಕೂಡಾ ಕಿತ್ತು ಹೋಗಿದೆ. ಸಿಮೆಂಟ್‌ ಹಾಗೂ ಡಾಂಬರು ರಸ್ತೆ ಜೋಡಣೆ ಮಾಡುವಾಗ ಎತ್ತರ ಅಸಮರ್ಪಕವಾಗಿದೆ. ಈ ಕಾರಣ ಬೈಕ್‌ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಬೈಕ್‌ ಚಕ್ರಗಳು ಜಾರಿ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ.

‘ಹಳ್ಳಗಳಿರುವ ಕಡೆಗಳಲ್ಲಿ ವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಬೇಕು. ಮೇಲಿಂದ ಮೇಲೆ ಸಂಭವಿಸುತ್ತಿರುವ ಅಪಘಾತಗಳನ್ನು ತಪ್ಪಿಸಬೇಕು. ಇಲ್ಲವಾದರೆ ಹೋರಾಟಕ್ಕೆ ಮುಂದಾಗುತ್ತೇವೆ‘ ಎಂದು ಕರ್ನಾಟಕ ಅಭಿವೃದ್ದಿ ವೇದಿಕೆಯ ಅಧ್ಯಕ್ಷ ವಿನಾಯಕ ಜರತಾರಿ ತಿಳಿಸಿದರು.

ನರೇಗಲ್ ಸಮೀಪದ ಮಾರನಬಸರಿ-ಕಳಕಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹಳ್ಳದ ಮೂಲಕ ಹಾಯ್ದು ಹೋಗಿರುವುದು
ನರೇಗಲ್ ಸಮೀಪದ ಮಾರನಬಸರಿ-ಕಳಕಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹಳ್ಳದ ಮೂಲಕ ಹಾಯ್ದು ಹೋಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT