ಗುರುವಾರ , ನವೆಂಬರ್ 14, 2019
°C
ಲಕ್ಷ್ಮೇಶ್ವರದಲ್ಲಿ ನಾಳೆಯಿಂದ ಆರಂಭವಾಗಲಿದೆ ಸುಪ್ರಸಿದ್ಧ ಉರುಸ್

ಭಾವೈಕ್ಯದ ಹರಿಕಾರ ದೂದಪೀರಾಂ

Published:
Updated:
Prajavani

ಲಕ್ಷ್ಮೇಶ್ವರ: ಇತಿಹಾಸ ಪ್ರಸಿದ್ಧ ಲಕ್ಷ್ಮೇಶ್ವರ ಪಟ್ಟಣದಲ್ಲಿ ಅನೇಕ ಮಹಾಮಹಿಮರು ಆಗಿ ಹೋಗಿದ್ದಾರೆ. ಅವರ ಪೈಕಿ ಭಾವೈಕ್ಯದ ಹರಿಕಾರ ಎಂದೇ ಹೆಸರಾಗಿರುವ ಸಂತ ದೂದಪೀರಾಂ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.

18ನೇ ಶತಮಾನದಲ್ಲಿ ದೂರದ ಬಾಗ್ದಾದ್‍ನಿಂದ ದೆಹಲಿಗೆ ಭೇಟಿ ನೀಡಿದ ಸಂತ ದೂದಪೀರಾಂ ಅಲ್ಲಿಯೇ ಜ್ಞಾನಾರ್ಜನೆ ಮಾಡಿ, ಹುಬ್ಬಳ್ಳಿಗೆ ಬರುತ್ತಾರೆ. ಒಮ್ಮೆ ಲಕ್ಷ್ಮೇಶ್ವರದ ನಿವಾಸಿಯೊಬ್ಬರು ಹುಬ್ಬಳ್ಳಿಗೆ ಹೋದಾಗ ಇವರನ್ನು ಭೇಟಿ ಮಾಡಿ, ದರ್ಶನಾಶೀರ್ವಾದ ಪಡೆದು ಅವರ ಆಧ್ಯಾತ್ಮ ಶಕ್ತಿಗೆ ಮನಸೋತು ಲಕ್ಷ್ಮೇಶ್ವರಕ್ಕೆ ಬರುವಂತೆ ವಿನಂತಿಸಿಕೊಳ್ಳುತ್ತಾರೆ. ಭಕ್ತನ ಮನವಿಗೆ ಸ್ಪಂದಿಸಿ ದೂದಪೀರಾಂ ಪಟ್ಟಣಕ್ಕೆ ಬರುತ್ತಾರೆ.

ಲಕ್ಷ್ಮೇಶ್ವರಕ್ಕೆ ಬಂದ ನಂತರ ಅವರು ಇಲ್ಲಿನ ಜನರಲ್ಲಿ ಅಜ್ಞಾನ, ಅಂಧಕಾರಗಳನ್ನು ಹೊಡೆದೋಡಿಸುವ ಸಲುವಾಗಿ ಪ್ರತಿದಿನ ಉಪನ್ಯಾಸ ಹಮ್ಮಿಕೊಳ್ಳುತ್ತಾರೆ. ಜನರ ಮೈಮೇಲೆ ಬರುತ್ತಿದ್ದ ದೆವ್ವ, ಭೂತಗಳನ್ನು ತಮ್ಮ ತಪಸ್ಸಿನ ಶಕ್ತಿಯಿಂದ ದೂರ ಮಾಡಿ ಅವರನ್ನು ಉದ್ಧರಿಸುತ್ತಾರೆ. ಇವರ ಬೋಧನೆಗೆ ಮನಸೋತ ಸಾವಿರಾರು ಜನರು ಇವರ ಶಿಷ್ಯರಾಗುತ್ತಾರೆ. ಹಿಂದೂ, ಮುಸ್ಲಿಂ ಎನ್ನದೆ ಎಲ್ಲ ಜಾತಿ ಜನರು ದೂದಪೀರಾಂ ಅವರ ಹತ್ತಿರ ಬಂದು ಗುಣ ಕಂಡಿದ್ದಾರೆ. ಲಕ್ಷ್ಮೇಶ್ವರದಲ್ಲಿಯೇ ವಿಧಿವಶರಾದ ನಂತರ ಅವರ ಶಿಷ್ಯರು ಗದ್ದುಗೆ ನಿರ್ಮಿಸುತ್ತಾರೆ. ಅದೇ ಇಂದು ದೂದಪೀರಾಂ ದರ್ಗಾ ಎಂದು ಪ್ರಸಿದ್ಧಿ ಪಡೆದಿದೆ.

ಇಂಥ ಮಹಾಪುರುಷರ ಉರುಸ್ ಜೂನ್ 15ರಿಂದ 17ರವರೆಗೆ ನಡೆಯಲಿದೆ. ಉರುಸ್‌ಗೆ ಬರುವ ಜನರಿಗೆ ತೊಂದರೆಯಾಗದಂತೆ ದೂದಪೀರಾಂ ದರ್ಗಾ ಕಮಿಟಿ ಹಾಗೂ ಅಂಜುಮನ್ ಎಇಸ್ಲಾಂ ಕಮಿಟಿಯವರು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡುತ್ತಿದ್ದಾರೆ. ಭಕ್ತರಿಗಾಗಿ ಯಾತ್ರಿ ನಿವಾಸ ನಿರ್ಮಿಸಲಾಗಿದೆ. ಅಲ್ಲದೆ, ಜನರ ವಸತಿಗಾಗಿ ಶಾದಿಮಹಲ್‍ನಲ್ಲೂ ವ್ಯವಸ್ಥೆ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)