ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣ್ಯಾಶ್ರಮದ ರಥೋತ್ಸವಕ್ಕೆ ಭಕ್ತರ ದಂಡು

ಪಂಚಾಕ್ಷರ ಮತ್ತು ಪುಟ್ಟರಾಜ ಗವಾಯಿ ಅವರ ಪುಣ್ಯಸ್ಮರಣೆ; ಜಾತ್ರಾ ಮಹೋತ್ಸವಕ್ಕೆ ತೆರೆ
Last Updated 3 ಜುಲೈ 2018, 15:46 IST
ಅಕ್ಷರ ಗಾತ್ರ

ಗದಗ:ಪಂಚಾಕ್ಷರ ಗವಾಯಿ ಅವರ 74ನೇ ಮತ್ತು ಪುಟ್ಟರಾಜ ಕವಿ ಗವಾಯಿ ಅವರ 8ನೇ ಪುಣ್ಯಸ್ಮರಣೋತ್ಸವದ ಕೊನೆಯ ದಿನವಾದ ಮಂಗಳವಾರ ವೀರೇಶ್ವರ ಪುಣ್ಯಾಶ್ರಮದ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಪುಣ್ಯಾಶ್ರಮದ ಆವರಣದಲ್ಲಿ ಸಂಜೆ 6 ಗಂಟೆಗೆ ರಥೋತ್ಸವಕ್ಕೆ ಅಡ್ನೂರ ದಾಸೋಹ ಮಠದ ಶಿವಾಚಾರ್ಯ ಸ್ವಾಮೀಜಿ, ಹೊಸಳ್ಳಿ ಬೂದೀಶ್ವರ ಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಹಾಗೂ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜ ಚಾಲನೆ ನೀಡಿದರು.
ರಥದಲ್ಲಿ ಪಂಚಾಕ್ಷರ ಮತ್ತು ಪುಟ್ಟರಾಜ ಗವಾಯಿ ಅವರ ಭಾವಚಿತ್ರ ಇಡಲಾಗಿತ್ತು.ರಥ ಸಾಗುವ ರಸ್ತೆಯಲ್ಲಿ ಭಕ್ತರ ದಂಡೇ ನೆರದಿತ್ತು. ರಸ್ತೆಯ ಬದಿಯ ಕಟ್ಟಡಗಳ ಮೇಲೆ ಕಿಕ್ಕಿರಿದು ನಿಂತು ಜನರು ರಥೋತ್ಸವವನ್ನು ಕಣ್ತುಂಬಿಕೊಂಡರು. ರಥಕ್ಕೆ ಭಕ್ತರು ಉತ್ತತ್ತಿ, ಬಾಳೆ ಹಣ್ಣು, ನಿಂಬೆ ಹಣ್ಣು, ಪೇರಲ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ರಥೋತ್ಸವ ವೀಕ್ಷಿಸಲು ಗದಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲದೆ, ಸುತ್ತಮುತ್ತಲ ಜಿಲ್ಲೆಗಳಾದ ಕೊಪ್ಪಳ, ಹಾವೇರಿ, ದಾವಣಗೆರೆ, ವಿಜಾಪುರ, ಧಾರವಾಡ, ಬಾಗಲಕೋಟೆ, ಬಳ್ಳಾರಿ ಜಿಲ್ಲೆಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.
ರಥದ ಬಳಿ ನೂಕುನುಗ್ಗಲು ಉಂಟಾಗದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಉಭಯ ಗವಾಯಿಗಳ ಜಾತ್ರೆಗೆ ಬಂದ ಭಕ್ತರಿಗೆ ಪ್ರಸಾದ ನೀಡಲು ಪಿ.ಬಿ ರಸ್ತೆ, ಎಪಿಎಂಸಿ ಆವರಣ ಸೇರಿದಂತೆ ನಗರದ ಹಲವೆಡೆ ಸಂಘ ಸಂಸ್ಥೆಗಳು, ಜನರು ಸ್ವಯಂಪ್ರೇರಿತವಾಗಿ ‘ಪ್ರಸಾದ ಕೇಂದ್ರ’ಗಳನ್ನು ತೆರೆದಿದ್ದರು. ಕುಡಿಯಲು ನೀರಿನ ವ್ಯವಸ್ಥೆ ಮಾಡಿದ್ದರು. ‘ಪ್ರಸಾದ’ ವಿತರಿಸುವ ಉದ್ದೇಶದಿಂದ ಗ್ರಾಮಾಂತರ ಪ್ರದೇಶಗಳಿಂದ ಅನೇಕರು ಟ್ರ್ಯಾಕ್ಟರ್‌ಗಳಲ್ಲಿ ರೊಟ್ಟಿ ತುಂಬಿಕೊಂಡು ಜಾತ್ರೆಗೆ ಬಂದಿದ್ದರು.

ವಿವಿಧೆಡೆಯಿಂದ ಬಂದಿದ್ದ ಭಕ್ತರು ಬೆಳಿಗ್ಗೆ ನಗರದಲ್ಲಿ ರಥದಲ್ಲಿ ಪಂಚಾಕ್ಷರ ಮತ್ತು ಪುಟ್ಟರಾಜರ ಭಾವಚಿತ್ರ ಇಟ್ಟುಕೊಂಡು, ತಮಟೆ ಮತ್ತು ವಾದ್ಯದೊಂದಿಗೆ ಮೆರವಣಿಗೆ ನಡೆಸಿದರು. ರಥ ಸಾಗುವ ರಸ್ತೆಯಲ್ಲಿ ಭಕ್ತರು ರಸ್ತೆಗೆ ನೀರು ಹಾಕುವ ಮೂಲಕ ಭಕ್ತಿ ಮೆರೆದರು.

ಕಳೆದ ಐದು ದಿನಗಳಿಂದ ನಡೆದ ಪುಣ್ಯಾಶ್ರಮದ ಉಭಯ ಗವಾಯಿಗಳ ಪುಣ್ಯಸ್ಮರಣೆಗೆ ಮಂಗಳವಾರ ರಥೋತ್ಸವದೊಂದಿಗೆ ತೆರೆಬಿತ್ತು. ಸಂಗೀತ, ಸಾಹಿತ್ಯ, ಪುಸ್ತಕ ಬಿಡುಗಡೆ, ನಾಟಕ ಪ್ರದರ್ಶನ, ಅಂಧರ ಗೋಷ್ಠಿ, ನಾಟ್ಯ ಸಂಘದ ವಜ್ರ ಮಹೋತ್ಸವ ಯಶಸ್ವಿಯಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT