ಭಾನುವಾರ, ನವೆಂಬರ್ 29, 2020
20 °C
ಪಶು ಸಂಗೋಪನಾ ಇಲಾಖೆ ಪ್ರಗತಿ ಪರಿಶೀಲನಾ ಸಭೆ; ಸಚಿವ ಪ್ರಭು ಚವ್ಹಾಣ್‌ ಭಾಗಿ

ಪಶುವೈದ್ಯರು ರೈತರ ಕರೆಗೆ ತಕ್ಷಣ ಸ್ಪಂದಿಸಬೇಕು: ಸಚಿವ ಪ್ರಭು ಚವ್ಹಾಣ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಪಶುವೈದ್ಯರು ಹಳ್ಳಿಗಳಿಗೆ ತೆರಳಿ ಪಶು ಸಾಕಣೆದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು. ರೈತರ ಕರೆಗಳಿಗೆ ತಕ್ಷಣ ಪ್ರತಿಕ್ರಿಯಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಪಶು ಸಂಗೋಪನಾ ಹಾಗೂ ವಕ್ಫ್ ಸಚಿವ ಪ್ರಭು ಚವ್ಹಾಣ್‌ ಪಶುವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.‌

ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಪಶು ಸಂಗೋಪನಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

‘ಪಶುವೈದ್ಯರು ಮತ್ತು ಸಿಬ್ಬಂದಿ ಸಮಸ್ಯೆಯನ್ನು ಆಲಿಸಲು ಸದಾ ಸಿದ್ಧನಿದ್ದೇನೆ. ಯಾವುದೇ ಸಮಸ್ಯೆ ಬಗ್ಗೆ ನನ್ನ ಬಳಿ ಚರ್ಚಿಸಿ. ಅದೇರೀತಿ, ರೈತರ ಕಷ್ಟಗಳಿಗೆ ನೀವು ತಕ್ಷಣವೇ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಪ್ರತಿನಿತ್ಯ ವಾಟ್ಸ್‌ಆ್ಯಪ್‌ ಮೂಲಕ ಮಾಹಿತಿ ನೀಡಬೇಕು’ ಎಂದು ಅವರು ಹೇಳಿದರು.

‘ಜಾನುವಾರುಗಳನ್ನು ಚಿಕಿತ್ಸೆಗೆ ಕರೆ ತಂದಾಗ ಪಶುವೈದ್ಯರು ಚೀಟಿ ಬರೆದು ಹೊರಗಿನಿಂದ ಔಷಧಗಳನ್ನು ತರಿಸುತ್ತಿರುವುದರ ಬಗ್ಗೆ ರೈತರು ದೂರವಾಣಿ ಕರೆಮಾಡಿ ಅಳಲು ತೋಡಿಕೊಂಡಿದ್ದಾರೆ. ಈ ತರಹದ ಸಮಸ್ಯೆಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು. ಇಲ್ಲವೇ, ತಪ್ಪು ಮಾಡುವ ವೈದ್ಯರಿಗೆ ಅಮಾನತು ಚೀಟಿ ಕೊಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಕೋವಿಡ್ ಸಮಯದಲ್ಲಿ ಎಲ್ಲರೂ ಉತ್ತಮ ಕೆಲಸ ಮಾಡಿದ್ದೀರಿ’ ಎಂದು ಅಧಿಕಾರಿಗಳ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ‘ಜಾನುವಾರುಗಳು ರೈತರ ಸಂಪತ್ತು. ಅವುಗಳ ಚಿಕಿತ್ಸೆ, ಸಂರಕ್ಷಣೆಗೆ ಪಶುವೈದ್ಯರು ಸದಾ ಸಿದ್ಧವಿರುವ ಮೂಲಕ ವೃತ್ತಿಬದ್ಧತೆ ಮೆರೆಯಬೇಕು’ ಎಂದು ಹೇಳಿದರು.

ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಗುರುರಾಜ ಮನಗುಳಿ ಮಾತನಾಡಿ, ‘ಗದಗ ಜಿಲ್ಲೆಯಲ್ಲಿ 2019–20ರ ಜಾನುವಾರು ಗಣತಿ ಪ್ರಕಾರ 1,36,311 ದನಗಳು, 55,798 ಎಮ್ಮೆ, 3,95,899 ಕುರಿ, 1,91,656 ಮೇಕೆ, 14,258 ಹಂದಿ, 3,762 ಇತರೆ ಪ್ರಾಣಿಗಳಿವೆ’ ಎಂದು ಹೇಳಿದರು.

‘ರಾಷ್ಟ್ರೀಯ ಕಾಲುಬಾಯಿ ರೋಗ ಲಸಿಕೆಗೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಂದನೇ ಸುತ್ತಿನ ಲಸಿಕಾ ಕಾರ್ಯಕ್ರಮ ಅ. 2ರಿಂದ ಆರಂಭವಾಗಿದ್ದು, 1,95,109 ಗುರಿ ಹೊಂದಲಾಗಿದೆ. ಈವರೆಗೆ 1,17,488 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದ್ದು, ನಿಗದಿಪಡಿಸಿದ ಗುರಿಯನ್ನು ಈ ತಿಂಗಳಾಂತ್ಯದಲ್ಲಿ ಸಾಧಿಸಲಾಗುವುದು. ಜಿಲ್ಲೆಯಲ್ಲಿ ಈವರೆಗೆ ಶೇ 61ರಷ್ಟು ಪ್ರಗತಿಯಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಒಟ್ಟು 1,341 ವಕ್ಫ್‌ಗೆ ಸಂಬಂಧಿಸಿದ ಆಸ್ತಿಗಳಿವೆ. ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಈಗಾಗಲೇ ಎರಡನೇ ಸುತ್ತಿನ ಸರ್ವೇ ಕಾರ್ಯ ಪೂರ್ಣಗೊಂಡಿದೆ’ ಎಂದು ಜಿಲ್ಲಾ ವಕ್ಫ್‌ ಅಧಿಕಾರಿ ಮಾಹಿತಿ ಒದಗಿಸಿದರು.

ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಆರ್. ನಾಗರಾಜ್ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

250 ಹುದ್ದೆಗಳು ಖಾಲಿ

‘ಜಿಲ್ಲೆಯಲ್ಲಿ ಒಂದು ಪಾಲಿ ಕ್ಲಿನಿಕ್, ಜಿಲ್ಲಾ ಪಶು ಆಸ್ಪತ್ರೆ ಸೇರಿದಂತೆ 11 ಪಶು ಆಸ್ಪತ್ರೆಗಳು, 62 ಪಶು ಚಿಕಿತ್ಸಾಲಯಗಳು, 8 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು, 5 ಸಂಚಾರ ಪಶುಚಿಕಿತ್ಸಾಲಯಗಳು ಇವೆ’ ಎಂದು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಗುರುರಾಜ ಮನಗುಳಿ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 87 ಪಶು ಚಿಕಿತ್ಸಾಲಯಗಳಿವೆ. ಜಿಲ್ಲೆಗೆ ಒಟ್ಟು ಮಂಜೂರಾದ ವಿವಿಧ ವೃಂದಗಳ ಹುದ್ದೆಗಳ ಸಂಖ್ಯೆ 384, ಇದರಲ್ಲಿ 134 ಭರ್ತಿಯಾಗಿದ್ದು, 250 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದರು.

ಕಟ್ಟಡ ಕಳಪೆ ಗುಣಮಟ್ಟ: ಅಸಮಾಧಾನ

ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ಸಚಿವ ಪ್ರಭು ಚವ್ಹಾಣ, ಕಟ್ಟಡದ ಗುಣಮಟ್ಟ ಕಂಡು ಬೇಸರ ವ್ಯಕ್ತಪಡಿಸಿದರು.

‘ಮೂರನೇ ದರ್ಜೆ ಕಟ್ಟಡ ಇದು. ಇಂಥ ಕಳಪೆ ಮಟ್ಟದ ಕಟ್ಟಡ ರಾಜ್ಯದಲ್ಲಿ ಎಲ್ಲಿಯೂ ಇಲ್ಲ’ ಎಂದು ಗರಂ ಆದರು.

‘ಲೋಕೋಪಯೋಗಿ ಇಲಾಖೆ ಕಟ್ಟಡ ನಿರ್ಮಾಣ ಮಾಡಿದ್ದು, ಈ ಕುರಿತು ವರದಿ ತರಿಸಿಕೊಂಡು ತನಿಖೆಗೆ ಆದೇಶಿಸಲಾಗುವುದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು