ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ಆಸ್ಪತ್ರೆಗಳಿಗೆ ಬೇಕಿದೆ ಸೂಕ್ತ ಚಿಕಿತ್ಸೆ

ಪಶು ಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
Last Updated 26 ಮೇ 2022, 3:45 IST
ಅಕ್ಷರ ಗಾತ್ರ

ಶಿರಹಟ್ಟಿ: ಪಶುಸಂಗೋಪನೆ ಮತ್ತು ಹೈನುಗಾರಿಕೆ ಚಟುವಟಿಕೆಗಳಿಗೆ ಆಧಾರವಾಗಿ ಕೆಲಸ ಮಾಡಬೇಕಿರುವ ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ ಇಲಾಖೆಯು ಸಿಬ್ಬಂದಿ ಕೊರತೆಯಿಂದಾಗಿ ನಲುಗುತ್ತಿದೆ.

ತಾಲ್ಲೂಕಿನ ಪಶು ಸಂಗೋಪನೆ ಇಲಾಖೆಗೆ ಮಂಜೂರಾದ ಒಟ್ಟು ಹುದ್ದೆಗಳಲ್ಲಿ ಸರಿ ಸುಮಾರು ಅರ್ಧಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದಾಗಿ ಈ ಹುದ್ದೆಗಳು ಖಾಲಿ ಬಿದ್ದಿದ್ದು, ಹೀಗೆ ತಾಲ್ಲೂಕಿನ ಸಮಗ್ರ ಅಭಿವೃದ್ಧಿಯನ್ನು ಅಧೋಗತಿಯೆಡೆಗೆ ಕೊಂಡ್ಯೊಯುತ್ತಿರುವುದು ತಾಲ್ಲೂಕಿನ ದೌರ್ಭಾಗ್ಯವೇ ಸರಿ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಹುದ್ದೆಗಳು ಖಾಲಿ ಖಾಲಿ:ಶಿರಹಟ್ಟಿ ಪಟ್ಟಣ ಹಾಗೂ ತಾಲ್ಲೂಕಿನ ಬೆಳ್ಳಟ್ಟಿ, ಮಾಗಡಿ, ಹೊಳೆಇಟಗಿ, ಬನ್ನಿಕೊಪ್ಪ ಕಡಕೋಳ, ಹೆಬ್ಬಾಳ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿರುವ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಹೆಚ್ಚುತ್ತಲೇ ಇದೆ. ತಾಲ್ಲೂಕಿನ ಪಶು ಇಲಾಖೆಗೆ ಒಟ್ಟು 38 ಮಂಜುರಾದ ಹುದ್ದೆಗಳಿದ್ದು, ಅದರಲ್ಲಿ 32 ಹುದ್ದೆಗಳು ಖಾಲಿ ಇವೆ.

ಕೇವಲ 7 ಹುದ್ದೆಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಇಡೀ ತಾಲ್ಲೂಕನ್ನೆ ನೋಡಿಕೊಳ್ಳುತ್ತಿದ್ದಾರೆ. ಮುಖ್ಯ ಪಶುವೈದ್ಯಾಧಿಕಾರಿ, ಹಿರಿಯ ಪಶುವೈದ್ಯಾಧಿಕಾರಿ, ಜಾನುವಾರು ಅಭಿವೃದ್ಧಿ ಅಧಿಕಾರಿ, ಹಿರಿಯ ಪಶುವೈದ್ಯಕೀಯ ಪರಿವೀಕ್ಷಕರು ಮತ್ತು ಪಶುವೈದ್ಯಕೀಯ ಸಹಾಯಕರ ಕೊರತೆಯು ನೇರವಾಗಿ ಪಶುಸಂಗೋಪನೆ ಹಾಗೂ ಹೈನುಗಾರಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ತಾಲ್ಲೂಕಿನಲ್ಲಿ 2012ರ ಜಾನುವಾರು ಗಣತಿ ಪ್ರಕಾರ ಸುಮಾರು 2 ಲಕ್ಷ ಜಾನುವಾರುಗಳಿವೆ. ಇದರಲ್ಲಿ ದನ-30,240, ಎಮ್ಮೆ-11,084, ಕುರಿ-74,344, ಮೇಕೆ-25,490, ಹಂದಿ-2 ಇವೆ. ಇವುಗಳಿಗೆ ಹರಡುವ ರೋಗಕ್ಕೆ ಚಿಕಿತ್ಸೆ ಪಡೆಯಬೇಕೆಂದರೆ, ವೈದ್ಯರನ್ನು ಹುಡುಕುತ್ತ ಸಾಗಬೇಕಿದೆ.

ಲಾಕ್‌ಡೌನ್‌ ಕಾರಣದಿಂದ ಹೈನುಗಾರಿಕೆಗೆ ಒತ್ತು: ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡು ಹೊರ ದೇಶ, ರಾಜ್ಯ ಹಾಗೂ ಜಿಲ್ಲೆಗಳಿಂದ ತವರಿಗೆ ಮರಳಿದ ಹಳ್ಳಿಗರು ಹೈನುಗಾರಿಕೆಯನ್ನು ಪ್ರಾರಂಭಿಸಿದ್ದರು.

‘ಹಳ್ಳಿಗಳಲ್ಲಿ ಪಶುಪಾಲಕರ ಬದುಕು ಡೇರಿಯಲ್ಲಿ ಹಾಲು ಅಳೆಯುವವರ ಮರ್ಜಿಯನ್ನು ಅವಲಂಬಿಸಿದ್ದು, ಹಾಲಿನಲ್ಲಿ ಕೊಬ್ಬಿನ ಅಂಶ ನಿಗದಿಯಾಗಿ ಅದಕ್ಕೆ ಹೆಚ್ಚಿನ ದರ ಸಿಗಬೇಕಿದ್ದರೂ ನಾವು ಒಂಟಿ ಕಾಲಿನಲ್ಲಿ ನಿಲ್ಲಬೇಕು. ಬೆಳಿಗ್ಗೆ ಹಾಗೂ ಸಂಜೆ ಹಾಲು ಹಾಕುತ್ತೇವೆ. ಅದೇ ಹಾಲಿಗೆ ಮುಂಜಾನೆ ಒಂದು ದರ; ಸಂಜೆಗೆ ಮತ್ತೊಂದು ದರ ನಿಗದಿಯಾಗುತ್ತಿರುವುದು ಸೋಜಿಗದ ಸಂಗತಿ’ ಎನ್ನುತ್ತಾರೆ ಪಶುಪಾಲಕರು.

ಪಶು ಸಂಗೋಪನೆ‌ ಇಲಾಖೆಯು ಮೂಲಸೌಲಭ್ಯ ಹಾಗೂ ಯೋಜನೆಗಳ ನಿರ್ವಹಣೆಗೆ ಜಿಲ್ಲಾ ಪಂಚಾಯ್ತಿಯನ್ನೇ ಅವಲಂಬಿಸಿದೆ. ಇಲಾಖೆ ಬಾಯಲ್ಲಿ ಮಾತ್ರ ಹೈಟೆಕ್‌ ಮಂತ್ರ ಜಪಿಸುತ್ತಿದ್ದು, ಭೌತಿಕವಾಗಿ ಇನ್ನೂ ಹಳೆಯ ಸ್ಥಿತಿಯಲ್ಲಿದೆ. ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆಯ ಮೂಟೆ ಹೊತ್ತಿದ್ದು, ಇನ್ನುಂದೆಯಾದರೂ ಎಚ್ಚೆತ್ತುಕೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಲಾಷೆಯಾಗಿದೆ.

ರಾಜಕೀಯ ಲಾಬಿ?

ಪಶು ಸಾಕಣೆ, ಹೈನುಗಾರಿಕೆ ಉತ್ತೇಜನಕ್ಕಾಗಿ ಸರ್ಕಾರ ಪಶುಪಾಲನಾ ಇಲಾಖೆ ಮೂಲಕ ಪಶು ಭಾಗ್ಯ ಯೋಜನೆ ಜಾರಿ ಮಾಡಿದೆ. ಆದರೆ ಇದು ಪ್ರಭಾವಿಗಳ ಹಿಡಿತಕ್ಕೆ ಒಳಗಾಗಿ ಶಾಸಕರು ತೋರಿದ ಫಲಾನುಭವಿಗಳಿಗೆ ಮಾತ್ರ ದೊರೆಯುತ್ತಿದೆ ಎಂಬುದು ನಿಜವಾದ ಫಲಾನುಭವಿಗಳ ಅಳಲು. ಪ್ರಸ್ತುತ ಯೋಜನೆ ಅಡಿಯಲ್ಲಿ ಕುರಿ, ಆಕಳು, ಎಮ್ಮೆ ಖರೀದಿಗೆ ಧನಸಹಾಯವಿದ್ದು, ಹೆಚ್ಚಿನ ಬೇಡಿಕೆ ಇದ್ದರೂ ಫಲಾನುಭವಿಗಳ ಆಯ್ಕೆ ಮಾತ್ರ ಬೆರಳೆಣಿಕೆಯಷ್ಟು ಮಾಡಲಾಗುತ್ತಿದೆ. ಹೀಗೆ ಈ ಇಲಾಖೆಯಲ್ಲೀ ರಾಜಕೀಯ ಪಾರಮ್ಯ ಮುಂದುವರಿದಿದೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT