ಗಜೇಂದ್ರಗಡ: ಪಟ್ಟಣದ ಹಿರೇಬಜಾರದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಸೋಮವಾರ ವಿರೂಪಾಕ್ಷೇಶ್ವರ ಉತ್ಸವ ಮೂರ್ತಿ ಮೆರವಣಿಗೆ ಸಕಲ ವಾದ್ಯಗಳೊಂದಿಗೆ ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಲಾಯಿತು. ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಸಂಜೆ ದೇವಸ್ಥಾನದಿಂದ ಸಕಲ ಸದ್ಭಕ್ತರೊಂದಿಗೆ ಆರಂಭವಾದ ಉತ್ಸವ ಮೂರ್ತಿ ಮೆರವಣಿಗೆ ಕಟ್ಟಿಬಸವೇಶ್ವರ ದೇವಸ್ಥಾನದವರೆಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ಮೆರವಣಿಗೆ ಭಕ್ತರು ಉತ್ತತ್ತಿ, ಬಾಳೆ ಹಣ್ಣು, ಎಸೆದು ಭಕ್ತಿ ಸಮರ್ಪಿಸಿದರು.
ನೂರಾರು ಮಹಿಳೆಯರು ಕಳಸ ಹಿಡಿದು ಸಾಗಿದರು. ಜಾಂಜ್‌ಮೇಳ, ಡೊಳ್ಳು ವಾದ್ಯಮೇಳಗಳು ನೆರೆದಿದ್ದ ಭಕ್ತ ಸಮೂಹದ ಆಕರ್ಷಣೆಯಾದವು. ಉತ್ಸವ ಮೂರ್ತಿ ಮೆರವಣಿಗೆ ಮರಳಿ ದೇವಸ್ಥಾನದ ಹತ್ತಿರ ಮರಳಿದಾಗ ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸಿದರು.