7
ಕೈಬೀಸಿ ಕರೆಯುತ್ತಿದೆ ಬಿಂಕದಕಟ್ಟಿ ಮೃಗಾಲಯ;ಆವರಣದಲ್ಲಿ ಹಸಿರಿನ ಸೊಬಗು

ಹುಲಿ ನೋಡಲು ಪ್ರವಾಸಿಗರ ದಂಡು..!

Published:
Updated:
ಗದುಗಿನ ಬಿಂಕದಕಟ್ಟಿ ಮೃಗಾಲಯದಲ್ಲಿನ ಹುಲಿ

ಗದಗ: ಉತ್ತರ ಕರ್ನಾಟಕದ ಪ್ರಮುಖ ಪ್ರಾಣಿ ಸಂಗ್ರಹಾಲಯವಾಗಿರುವ, ಇಲ್ಲಿನ ಬಿಂಕದಕಟ್ಟಿ ಮೃಗಾಲಯಕ್ಕೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಿಂದ ಎರಡು ಹುಲಿಗಳನ್ನು ತಂದು, ಪ್ರವಾಸಿಗರ ದರ್ಶನಕ್ಕೆ ಮುಕ್ತಗೊಳಿಸಿ ಈಗ 6 ತಿಂಗಳು ಕಳೆದಿದೆ.

ಹುಲಿ ದರ್ಶನ ಭಾಗ್ಯ ಲಭಿಸಿದ ಬೆನ್ನಲ್ಲೇ, ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಮುಖ್ಯವಾಗಿ ಕುಟುಂಬ ಸಮೇತ ಇಲ್ಲಿಗೆ ಬರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸಾಮಾನ್ಯ ದಿನಗಳಲ್ಲಿ ಸರಾಸರಿ 450ರಿಂದ 500 ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಶನಿವಾರ, ಭಾನುವಾರ ಈಗ ಸಂಖ್ಯೆ 700 ದಾಟುತ್ತಿದೆ.

‘ಅನಸೂಯಾ’ ಹಾಗೂ ‘ಲಕ್ಷ್ಮಣ್‌’ ಹೆಸರಿನ ಈ ಹುಲಿಗಳನ್ನು ಕಳೆದ ಡಿಸೆಂಬರ್‌ನಲ್ಲಿ ಇಲ್ಲಿಗೆ ತರಲಾಗಿತ್ತು. ಅವುಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ನಂತರ, ಜನವರಿಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇವುಗಳ ಆವಾಸಕ್ಕೆ ಮೃಗಾಲಯದಲ್ಲಿ ಕಾಡಿನ ಸಹಜ ಪರಿಸರ ಹೋಲುವ ‘ಟೈಗರ್ ಡೇಕ್ರಾಲ್’ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.

‘ಗಂಡು ಮತ್ತು ಹೆಣ್ಣು ಹುಲಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಸ್ವಲ್ಪ ದಿನಗಳು ಕಳೆದು, ಪರಸ್ಪರ ಹೊಂದಾಣಿಕೆ ಆದ ನಂತರ ಜತೆಯಾಗಿ ಬಿಡಲಾಗುವುದು’ ಎಂದು ಮೃಗಾಲಯ ಆರ್‌ಎಫ್‌ಒ ಮಹಾಂತೇಶ ಪೆಟ್ಲೂರ ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಮೃಗಾಲಯದ ವರಮಾನ ಹೆಚ್ಚಳಕ್ಕೂ ಕ್ರಮ ವಹಿಸಲಾಗಿದೆ. ಇದರ ಭಾಗವಾಗಿ ಮೈಸೂರು ಮೃಗಾಲಯಲ್ಲಿ ಅಳವಡಿಸಿಕೊಂಡಿರುವ ಹಲವು ಕ್ರಮಗಳನ್ನು ಇಲ್ಲೂ ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ.

40 ಎಕರೆ ವಿಸ್ತಾರದಲ್ಲಿ ಹರಡಿಕೊಂಡಿರುವ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ‘ಕಿರು’ ಮೃಗಾಲಯದಿಂದ ‘ಸಣ್ಣ’ ಮೃಗಾಲಯಕ್ಕೆ ಬಡ್ತಿ ಲಭಿಸಿದ ನಂತರ ಅಭಿವೃದ್ಧಿ ಕಾಮಗಾರಿಗಳು ಚುರುಕು ಪಡೆದಿವೆ. ಮೃಗಾಲಯದ ಆವರಣದಲ್ಲಿ 2.5 ಕಿ.ಮೀ ಉದ್ದದ ನಡಿಗೆ ಪಥ ಅಭಿವೃದ್ಧಿಪಡಿಸಲಾಗಿದೆ. ಈ ಮಾರ್ಗದಲ್ಲಿ ಇಂಟರ್‌ಲಾಕ್‌ ಹಾಕಲಾಗಿದ್ದು, ಪ್ರವಾಸಿಗರು ಆರಾಮವಾಗಿ ನಡೆದುಕೊಂಡು, ಪ್ರಾಣಿಗಳನ್ನು ವೀಕ್ಷಿಸಬಹುದು.

ಈ ಮುಂಗಾರಿನ ಆರಂಭದಲ್ಲಿ ಧಾರಾಕಾರ ಮಳೆಯಾಗಿರುವುದರಿಂದ ಮೃಗಾಲಯದ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ. ಅಷ್ಟೇ ಅಲ್ಲ, ಅಂತರ್ಜಲ ಮಟ್ಟವೂ ಹೆಚ್ಚಾಗಿದ್ದು, ಮೃಗಾಲಯದ ಆವರಣದಲ್ಲಿದ್ದ 5 ಕೊಳವೆಬಾವಿಗಳಲ್ಲಿ ಸಮೃದ್ಧ ನೀರು ಲಭಿಸುತ್ತಿದೆ. ಇದರ ಜತೆಗೆ ಮಳೆ ನೀರು ಸಂಗ್ರಹಕ್ಕಾಗಿ ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ಎರಡು ಬೃಹತ್‌ ಕೆರೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೂ ಚಾಲನೆ ನೀಡಲಾಗಿದೆ.

ಮೃಗಾಲಯದಲ್ಲಿ ನೀರಿನ ಕೊರತೆ ನೀಗಿಸಲು ಈಗಾಗಲೇ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನದಿ ಮೂಲದ ಮೇಲ್ಮೈ ನೀರು ಪೂರೈಕೆ ಯೋಜನೆಯಡಿ 50 ಸಾವಿರ ಲೀಟರ್‌ ಸಾಮರ್ಥ್ಯದ ನೆಲಮಟ್ಟದ ಜಲಸಂಗ್ರಹಗಾರ ನಿರ್ಮಿಸಲಾಗಿದೆ. ಇದರ ಸಂಗ್ರಹ ಸಾಮರ್ಥ್ಯ ಒಂದು ಲಕ್ಷ ಲೀಟರ್‌. ತುಂಗಭದ್ರಾ ನದಿ ಪಾತ್ರದಿಂದ ಪೂರೈಕೆಯಾಗುವ ನೀರು ಇಲ್ಲಿ ಸಂಗ್ರಹವಾಗುತ್ತದೆ.

ಹುಲಿ ಬಂದ ನಂತರ ಅಂದರೆ ಕಳೆದ 6 ತಿಂಗಳಲ್ಲಿ 69,765 ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ಇದರಿಂದ ₹14.76 ಲಕ್ಷ ವರಮಾನ ಸಂಗ್ರಹವಾಗಿದೆ
- ಮಹಾಂತೇಶ ಪೆಟ್ಲೂರ, ಮೃಗಾಲಯ ಆರ್‌ಎಫ್‌ಒ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !