ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತಾಳ ಕಂಡ ಅಂತರ್ಜಲ: ಬೆಳೆ ಉಳಿಸಿಕೊಳ್ಳಲು ರೈತನ ಪರದಾಟ, ಟ್ಯಾಂಕರ್‌ ನೀರು ಪೂರೈಕೆ

Last Updated 3 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಬಿಸಿಲಿನ ತಾಪ ದಿನೇ ದಿನೇ ಏರುತ್ತಿದ್ದು, ಕೊಳವೆ ಬಾವಿ ಬತ್ತಿದ ಕಾರಣ ಸಮೀಪದ ದೊಡ್ಡೂರು ಗ್ರಾಮದ ರೈತ ದೇವಣ್ಣ ತೋಟದ ಅವರು ಕಬ್ಬಿನ ಬೆಳೆಯನ್ನು ಉಳಿಸಿಕೊಳ್ಳಲು ಟ್ಯಾಂಕರ್‌ ಮೂಲಕ ನೀರು ಹಾಯಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ಕೊಳವೆ ಬಾವಿ ನೆಚ್ಚಿಕೊಂಡ ನೂರಾರು ರೈತರು ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ, ಅಂತರ್ಜಲ ಪಾತಾಳ ಕಂಡಿರುವುದರಿಂದ ನೀರಿಗೆ ತೀವ್ರ ಸಮಸ್ಯೆ ಎದುರಾಗಿದೆ.ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿರುವ ರೈತರು ಬೆಳೆ ಉಸಿಕೊಳ್ಳಲು ಪರದಾಡುತ್ತಿದ್ದಾರೆ.

ದೇವಣ್ಣ ಅವರು 22 ಎಕರೆ ಜಮೀನಿನಲ್ಲಿ ಮೂರು ತಿಂಗಳ ಹಿಂದೆ ₹6 ಲಕ್ಷ ಖರ್ಚು ಮಾಡಿ ಕಬ್ಬು ನಾಟಿ ಮಾಡಿದ್ದಾರೆ. ಗ್ರಾಮದ ಹತ್ತಿರದ ಕೊಳವೆ ಬಾವಿಯಲ್ಲಿ ಅಲ್ಪಮಟ್ಟಿಗೆ ನೀರು ಇದೆ. ಹೀಗಾಗಿ ಅಲ್ಲಿನ 8 ಎಕರೆ ಕಬ್ಬು ಚೆನ್ನಾಗಿದೆ. ಆದರೆ, ಲಕ್ಷ್ಮೇಶ್ವರ ರಸ್ತೆಯಲ್ಲಿನ 14 ಎಕರೆಯಲ್ಲಿ ಬೆಳೆದಿರುವ ಕಬ್ಬಿಗೆ ನೀರಿನ ಕೊರತೆ ಎದುರಾಗಿದೆ. ಅಲ್ಲಿನ ಕೊಳವೆ ಬಾವಿಗಳು ಬತ್ತಿದೆ. ಬತ್ತಿದ ಕೊಳವೆ ಬಾವಿಯ ಪಕ್ಕದಲ್ಲೇ ಮತ್ತೆರಡು ಕೊಳವೆ ಬಾವಿ ಕೊರೆಸಿದರೂ ನೀರು ಲಭಿಸಿಲ್ಲ.ಹೀಗಾಗಿ ಕಬ್ಬಿನ ಬೆಳೆ ಉಳಿಸಿಕೊಳ್ಳುವುದು ಅವರಿಗೆ ಸವಾಲಾಗಿ ಪರಿಣಮಿಸಿದೆ.

ದೇವಣ್ಣ ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳುವ ಸಾಹಸಕ್ಕೆ ಮುಂದಾಗಿದ್ದಾರೆ. ಕಳೆದ 8 ದಿನಗಳಿಂದ ಟ್ಯಾಂಕರ್‌ ಮೂಲಕ ನಿತ್ಯ ಕಬ್ಬಿಗೆ ನೀರುಣಿಸುತ್ತಿದ್ದಾರೆ.

‘ಈಗ ಅಲ್ಲಲ್ಲಿ ಮಳೆ ಸುರಿಯುತ್ತಿದೆ. ನಮ್ಮ ಭಾಗಕ್ಕೂ ಒಂದೆಡರು ದೊಡ್ಡ ಮಳೆ ಆಗಿ, ಕೆರೆ, ಹಳ್ಳ, ಚೆಕ್‌ಡ್ಯಾಂಗಳು ತುಂಬಿದರೆ ಮಾತ್ರ ನೀರಿನ ಸಮಸ್ಯೆ ಬಗೆಹರಿಯಲಿದೆ.ಆದರೆ, ಮಳೆ ಆಗುವವರೆಗೆ ಟ್ಯಾಂಕರ್ ನೀರೇ ಗತಿ’ ಎನ್ನುತ್ತಾರೆ ದೇವಣ್ಣ ತೋಟದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT