ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕಳ್ಳನೆಂದು ಯುವಕನ ಕೊಂದರು!

ರಾಜಧಾನಿಯಲ್ಲಿ ಅಮಾನವೀಯ ಘಟನೆ * ಮನುಷ್ಯತ್ವ ಮರೆತ ಜನ
Last Updated 23 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳ ಕಳ್ಳನೆಂದು ಭಾವಿಸಿ ಚಾಮರಾಜಪೇಟೆಯ ನಿವಾಸಿಗಳು, ಮನುಷ್ಯತ್ವವನ್ನೇ ಮರೆತು ಯುವಕನೊಬ್ಬನನ್ನು ಮನಬಂದಂತೆ ಥಳಿಸಿ ಕೊಂದಿದ್ದಾರೆ.

ಕಾಲುರಾಮ್‌ ಬಚ್ಚನ್‌ರಾಮ್ (26) ಕೊಲೆಯಾದ ಯುವಕ. ರಾಜಸ್ಥಾನದ ನಿವಾಸಿಯಾಗಿದ್ದ ಅವರು, ಉದ್ಯೋಗ ಹುಡುಕಿಕೊಂಡು ಕೆಲ ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅವರ ಸಂಬಂಧಿಕರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಗೊತ್ತಾಗಿಲ್ಲ.

ಉದ್ದವಾದ ಕೊದಲು ಹಾಗೂ ಗಡ್ಡ ಬಿಟ್ಟಿದ್ದ ಅವರು, ಪೆನ್‌ಷನ್ ಮೊಹಲ್ಲಾದ ರಸ್ತೆಯಲ್ಲಿ ಬುಧವಾರ ಸುತ್ತಾಡುತ್ತಿದ್ದರು. ಅವರನ್ನು ಕಂಡ ಸ್ಥಳೀಯರು, ಮಕ್ಕಳ ಕಳ್ಳನೆಂದು ಭಾವಿಸಿ ಬೆನ್ನಟ್ಟಿದ್ದರು. ರಂಗನಾಥ್ ಟಾಕೀಸ್‌ ಹತ್ತಿರ ಅವರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ಚಾಮರಾಜಪೇಟೆ ಠಾಣೆಯ ಪೊಲೀಸರು ತಿಳಿಸಿದರು.

ಕಾಲುರಾಮ್‌ ಅವರ ಕೈ ಹಾಗೂ ಕಾಲುಗಳನ್ನು ಹಗ್ಗದಿಂದ ಕಟ್ಟಿದ್ದ ನಿವಾಸಿಗಳು, ರಸ್ತೆಯಲ್ಲೆಲ್ಲ ಎಳೆದಾಡಿದ್ದಾರೆ. ಅವರನ್ನು ಸುತ್ತುವರಿದು ಕಾಲುಗಳಿಂದ ಒದ್ದಿದ್ದಾರೆ. ‘ಮಕ್ಕಳ ಕಳ್ಳ. ಮಕ್ಕಳ ಕಳ್ಳ’ ಎಂದು ಕೂಗಾಡುತ್ತ ಮರದ ದೊಣ್ಣೆ ಹಾಗೂ ಬ್ಯಾಟ್‌ಗಳಿಂದ ಹಲ್ಲೆ ಮಾಡಿದ್ದಾರೆ. ರಕ್ತ ಬರುವವರೆಗೂ ಥಳಿಸಿದ್ದಾರೆ. ಕೈ– ಕಾಲು ಮುಗಿದರೂ ಅವರನ್ನು ಬಿಟ್ಟಿರಲಿಲ್ಲ ಎಂದರು.

ಘಟನೆಯನ್ನು ಕಂಡ ವ್ಯಕ್ತಿಯೊಬ್ಬರು, ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದರು. ಹೊಯ್ಸಳ ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋದಾಗಲೂ ನಿವಾಸಿಗಳು ಗುಂಪು ಕಟ್ಟಿಕೊಂಡು ಥಳಿಸುತ್ತಿದ್ದರು. ಸಿಬ್ಬಂದಿಯನ್ನು ಕಂಡ ಬಳಿಕವೇ ಅವರೆಲ್ಲ ಸ್ಥಳದಿಂದ ಓಡಿಹೋದರು.

ರಸ್ತೆಯಲ್ಲೇ ನರಳುತ್ತ ಬಿದ್ದಿದ್ದ ಕಾಲುರಾಮ್‌ ಅವರನ್ನು ಸಿಬ್ಬಂದಿಯೇ ಹೊಯ್ಸಳ ವಾಹನದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮಾರ್ಗಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಪೊಲೀಸರು ಹೇಳಿದರು.

ಸಾರ್ವಜನಿಕರ ವಿರುದ್ಧ ಎಫ್‌ಐಆರ್‌: ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಪೊಲೀಸರು, ಸಾರ್ವಜನಿಕರನ್ನೇ ಆರೋಪಿಗಳನ್ನಾಗಿ ಮಾಡಿದ್ದಾರೆ.

‘ಕೆಲ ಸಾರ್ವಜನಿಕರಷ್ಟೇ ಕಾಲುರಾಮ್ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ಅವರು ಯಾರು ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ. ಹೆಸರು ಗೊತ್ತಾದ ನಂತರ, ಅವರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಗಾಳಿ ಸುದ್ದಿ; ಅಮಾಯಕರ ಮೇಲೆ ಹಲ್ಲೆ

‘ಕಳ್ಳರು ಬಂದಿದ್ದಾರೆ. ಮಕ್ಕಳನ್ನು ಕೊಂದು ಅಂಗಾಂಗ ಮಾರುತ್ತಾರೆ ಎಚ್ಚರಿಕೆ’ ಎಂಬ ಗಾಳಿ ಸುದ್ದಿ ರಾಜ್ಯದಾದ್ಯಂತ ಹರಡುತ್ತಿದೆ. ಇದರಿಂದಾಗಿ, ಅಮಾಯಕರ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಂದು ಪೊಲೀಸರು ಹೇಳಿದರು.

ವದಂತಿಗಳಿಂದ ಹೆದರಿರುವ ಜನ, ಉದ್ದವಾದ ಮೀಸೆ ಹಾಗೂ ಗಡ್ಡ ಬಿಟ್ಟ ಭಿಕ್ಷಕರು, ಮಾನಸಿಕ ಅಸ್ವಸ್ಥರು ಹಾಗೂ ಅಲೆಮಾರಿಗಳನ್ನು ಹಿಡಿದು ಥಳಿಸುತ್ತಿದ್ದಾರೆ. ಕಾಲುರಾಮ್‌ರನ್ನು ಕಳ್ಳನೆಂದು ಭಾವಿಸಿ ಥಳಿಸಿ ಕೊಲೆ ಮಾಡಿದ್ದಾರೆ.

’ಮಕ್ಕಳ ಕಳ್ಳರು ಯಾರೂ ಇಲ್ಲ. ಇದು ಕೇವಲ ವದಂತಿ’ ಎಂದು ಜಾಗೃತಿ ಮೂಡಿಸುತ್ತಲೇ ಇದ್ದೇವೆ. ಅಷ್ಟಾದರೂ ಜನರಲ್ಲಿ ಅರಿವು ಮೂಡುತ್ತಿಲ್ಲ. ಇನ್ನಾದರೂ ಜನ ಎಚ್ಚೆತ್ತುಕೊಳ್ಳಬೇಕು. ಸಾರ್ವಜನಿಕರು ಗುಂಪು ಕಟ್ಟಿಕೊಂಡು, ಯಾವುದೇ ವ್ಯಕ್ತಿಯ ಮೇಲೆ ಹಲ್ಲೆ ಮಾಡುತ್ತಿದ್ದದ್ದನ್ನು ಕಂಡರೆ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT