ನೀರಿಗಾಗಿ 4 ಗಂಟೆ ಹೆದ್ದಾರಿ ತಡೆದ ಮಹಿಳೆಯರು!

7
ಡಂಬಳ ಹೋಬಳಿ ಬರದೂರ ಗ್ರಾಮದಲ್ಲಿ ಪ್ರತಿಭಟನೆ;ಸಂಚಾರ ಸ್ಥಗಿತ; ಪ್ರಯಾಣಿಕರ ಪರದಾಟ

ನೀರಿಗಾಗಿ 4 ಗಂಟೆ ಹೆದ್ದಾರಿ ತಡೆದ ಮಹಿಳೆಯರು!

Published:
Updated:
Deccan Herald

ಡಂಬಳ: ಐದು ತಿಂಗಳಿಂದ ತುಂಗಭದ್ರಾ ನದಿಮೂಲದಿಂದ ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ರೊಚ್ಚಿಗೆದ್ದ ಬರದೂರ ಗ್ರಾಮದ ಮಹಿಳೆಯರು ಸೋಮವಾರ 4 ಗಂಟೆ ಚಳ್ಳಕೆರೆ–ಅರಬಾವಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಿಂದಾಗಿ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು. ಗದಗ, ಮುಂಡರಗಿ, ಹರಿಹರ, ಚಳ್ಳಕೆರೆ, ಭಾಗಗಳಿಗೆ ತೆರಳಬೇಕಿದ್ದ ಬಸ್‌ಗಳು ಸಾಲುಗಟ್ಟಿ ನಿಂತಿದ್ದವು. ಕೆಲವು ಬಸ್‌ಗಳು ಮಾರ್ಗ ಬದಲಿಸಿ ಡಂಬಳ, ಹಿರೇವಡ್ಡಟ್ಟಿ, ಹಾರೂಗೇರಿ,ಕಲಕೇರಿ ಮಾರ್ಗವಾಗಿ ಸಂಚರಿಸಿದವು.

ಸೋಮವಾರ ಬೆಳಿಗ್ಗೆ 8 ಗಂಟೆಗೆ ಖಾಲಿ ಕೊಡಗಳನ್ನು ಹಿಡಿದು ರಸ್ತೆಗಿಳಿದ ಮಹಿಳೆಯರು, ರಸ್ತೆಗೆ ಅಡ್ಡವಾಗಿ ಮುಳ್ಳುಗಳನ್ನು ಇರಿಸಿ, ವಾಹನ ಸಂಚಾರ ತಡೆದರು. ಗ್ರಾಮಸ್ಥರು ಚಕ್ಕಡಿಗಳನ್ನು ತಂದು ರಸ್ತೆಗೆ ಅಡ್ಡವಾಗಿ ನಿಲ್ಲಿಸಿದರು.

‘ಗದಗ–ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾದರೆ ಅಧಿಕಾರಿಗಳು ತಕ್ಷಣ ಸ್ಪಂದಿಸುತ್ತಾರೆ. ಆದರೆ, ಗ್ರಾಮೀಣ ಪ್ರದೇಶದದಲ್ಲಿ ಕಳೆದ ಐದು ತಿಂಗಳಿಂದ ಜನರು ನೀರಿಲ್ಲದೆ ಪರದಾಡುತ್ತಿದ್ದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯೆ ನಿವೇದಿತಾ ನಾಡಗೌಡ್ರ ಆರೋಪಿಸಿದರು.

‘ನೀರು ಸಿಗುವ ತನಕ ಪ್ರತಿಭಟನೆ ನಿಲ್ಲಿಸುವುದಿಲ್ಲ’ ಎಂದು ಎಚ್.ಬಿ ಕುರಿ, ಈಶ್ವರಗೌಡ ನಾಡಗೌಡ್ರ ಎಚ್ಚರಿಕೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್‌.ಮುಂಡರಗಿ ಅವರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸಿದರು. ಜಿಲ್ಲಾ ಪಂಚಾಯ್ತಿ ಸಿಇಒ ಮಂಜುನಾಥ ಚವ್ಹಾಣ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದರು. ಬಳಿಕ ಮಹಿಳೆಯರು ಪ್ರತಿಭಟನೆ ವಾಪಸ್‌ ಪಡೆದರು.

ರಮಜಾನಬೀ ಮಾಳೆಕೊಪ್ಪ, ಬೀಬಿಜಾನ್ ಹೊಸಮನಿ, ಗಿರಿಜಾ ಗೌರಿಪೂರ, ಸಾವಿತ್ರವ್ವ ಸಜ್ಜನರ, ಕಾಶಿಂಬೀ ಮಾಳೆಕೊಪ್ಪ, ಗೂಳಪ್ಪ ಕವಲೂರ, ಮಝಜಪ್ಪ ಕುರಿ, ಅನಸವ್ವ ಹಳ್ಳಿಕೇರಿ, ಈರಮ್ಮ ಸಜ್ಜನರ, ನಿರ್ಮಲಾ ಹಡಪದ, ಬಸವರಾಜ ಕುರಿ, ಮಾರುತಿ ಹೊಸಮನಿ, ವೀರೇಶ ಸಜ್ಜನರ, ಅಶೋಕ ಹೊಸಮನಿ, ಹೆಸ್ಕಾಂ ಅಧಿಕಾರಿ ಎಂ.ಬಿ ಗೌರೋಜಿ ಸಿಪಿಐ ಮಂಜುನಾಥ ನಡುವಿನಮನಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !