ಸೋಮವಾರ, ಜೂನ್ 27, 2022
28 °C
ತೋಂಟದಾರ್ಯ ಮಠದ ದೂರದೃಷ್ಟ

ಲಿಂಗೈಕ್ಯ ಶ್ರೀಗಳ ಪರಿಸರ ಪ್ರೀತಿ: ನೆರಳು, ಹಣ್ಣು ನೀಡುತ್ತಿರುವ ಗಿಡಗಳು

ಲಕ್ಷ್ಮಣ ಎಚ್ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಡಂಬಳ: ದುಡ್ಡಿಗೆ ಬೆಲೆ ಕಟ್ಟಬಹುದು; ಗಿಡಗಳಿಂದ ಸಿಗುವ ಆಮ್ಲಜನಕಕ್ಕೆ ಬೆಲೆ ಕಟ್ಟಲಾಗದು. ಪ್ರಕೃತಿ ಶುದ್ಧವಾಗಿದ್ದರೆ ಮನುಷ್ಯ ಭೂಮಿಯ ಮೇಲೆ ಆರೋಗ್ಯಯುತವಾಗಿ ಬದುಕಲು ಸಾಧ್ಯ...

– ಹೀಗೆ ಪರಿಸರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಪರಿಸರ ಪ್ರೀತಿ ಮೆರೆದ ಹಾಗೂ ಕಪ್ಪತಗುಡ್ಡದ ರಕ್ಷಣೆಗೆ ಹೋರಾಟ ಮಾಡಿದ್ದ ಲಿಂ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಡಂಬಳ ಗ್ರಾಮದ ತೋಂಟದಾರ್ಯ ವಿದ್ಯಾಪೀಠದಲ್ಲಿ ನೆಟ್ಟಿರುವ ನೂರಾರು ಗಿಡಗಳು ಇಂದು ಹೆಮ್ಮರವಾಗಿ ಬೆಳೆದಿವೆ. ಸ್ವಾಮೀಜಿಯ ಪರಿಸರ ಪ್ರೀತಿಗೆ ಹೆಗ್ಗುರುತಾಗಿವೆ.

ಲಿಂ.ತೋಂಟದ ಸಿದ್ಧಲಿಂಗ ಸ್ವಾಮೀಜಿ 2008-09ರಲ್ಲಿ ಇಲ್ಲಿನ ತೋಂಟದಾರ್ಯ ವಿದ್ಯಾಪೀಠದ ಆವರಣದಲ್ಲಿ ತಮ್ಮ ಕೈಯಾರೆ 1,050ಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದಾರೆ. ಬೇವಿನಮರ, ನೀರಲ, ಅರಳಿಮರ, ತೆಂಗು, ಹುಣಸೆಮರ, ಬೆಟ್ಟದ ನೆಲ್ಲಿಕಾಯಿ, ಪತ್ರಿ ಗಿಡ, ಚಿಕ್ಕು, ಗುಲ್ ಮೊಹರ್‌ ಮುಂತಾದ ಗಿಡಗಳನ್ನು ನೆಟ್ಟಿದ್ದು ಶ್ರೀಗಳ ಸಲಹೆಯಂತೆ ಇಲ್ಲಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಅವುಗಳನ್ನು ವಿಶೇಷ ಕಾಳಜಿಯಿಂದ ಪೋಷಿಸಿದ್ದರು. ಆ ಗಿಡಗಳು ಇಂದು ಹೆಮ್ಮರವಾಗಿ ಬೆಳೆದು ನಿಂತಿವೆ.

ತೋಂಟದಾರ್ಯ ಬಾಲಕರ ಪ್ರೌಢಶಾಲೆ, ಬಾಲಕಿಯರ ಪ್ರೌಢಶಾಲೆ, ತೋಂಟದಾರ್ಯ ಕೈಗಾರಿಕಾ ತರಬೇತಿ ಕೇಂದ್ರ, ಆಂಗ್ಲ ಮಾಧ್ಯಮ ಶಾಲೆಗಳು ಈ ಆವರಣದಲ್ಲಿವೆ. ನೂರಾರು ವಿದ್ಯಾರ್ಥಿಗಳು ಮಧ್ಯಾಹ್ನ, ಸಂಜೆ ವೇಳೆ ಗಿಡಗಳ ಕೆಳಗೆ ಕುಳಿತು ಅಭ್ಯಾಸ ಮಾಡುತ್ತಾರೆ. ಬೇಸಿಗೆ ಸಮಯದದಲ್ಲಿ ವಿದ್ಯಾರ್ಥಿಗಳು ಗಿಡದ ನೆರಳಿನಲ್ಲಿ ಕುಳಿತು ಅಭ್ಯಾಸ ಮಾಡುತ್ತಾರೆ. ಗಿಡದ ನೆರಳಲ್ಲಿ ಮಧ್ಯಾಹ್ನದ ಬಿಸಿಯೂಟ ಮಾಡುತ್ತಾರೆ. ಕೆಲವೊಮ್ಮೆ ಶಿಕ್ಷಕರು ವಿದ್ಯಾರ್ಥಿಗಳನ್ನು ಮರದ ಕೆಳಗೆ ಕೂರಿಸಿ ಪಾಠ ಹೇಳಿಕೊಡುತ್ತಾರೆ. ಶಾಲೆಯ ಆವರಣ ಹಸಿರಿನಿಂದ ಕಂಗೊಳಿಸುತ್ತಿರುವುದರಿಂದ ಸ್ಥಳೀಯರು ವಿಶ್ರಾಂತಿ ಪಡೆಯಲು ಇಲ್ಲಿಗೆ ಬರುತ್ತಾರೆ.

‘ಪ್ರತಿ ಅಮಾವಾಸ್ಯೆಗೊಮ್ಮೆ ಲಿಂ.ಶ್ರೀಗಳು ಶಾಲೆಗೆ ಭೇಟಿ ನೀಡಿ ಗಿಡಗಳ ಪೋಷಣೆ ಮಾಡುವ ಕುರಿತು ತಿಳಿ ಹೇಳುತ್ತಿದ್ದರು. ಮಕ್ಕಳು ಹಾಗೂ ಶಿಕ್ಷಕರ ಯೋಗಕ್ಷೇಮ ವಿಚಾರ ಮಾಡುತ್ತಿದ್ದರು’ ಎಂದು ಪರಿಸರದ ಬಗ್ಗೆ ಶ್ರೀಗಳಿಗೆ ಇರುವ ಪ್ರೀತಿಯನ್ನು ಹೆಮ್ಮೆಯಿಂದ ಹೇಳುತ್ತಾರೆ ಇಲ್ಲಿನ ಬಾಲಕರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಬಿ.ಹೂಗಾರ.

ಸ್ವಾಮೀಜಿ ಎಲ್ಲರಿಗೂ ಸ್ಫೂರ್ತಿ
ಡಂಬಳದಲ್ಲಿ ಅತಿ ಹೆಚ್ಚು ಮಂಗಗಳು ಇರುವುದರಿಂದ ಆಹಾರಕ್ಕೆ ಪರದಾಡುತ್ತವೆ. ಪ್ರಾಣಿ ಪಕ್ಷಿಗಳ ರಕ್ಷಣೆ ಮಾಡಲು ಲಿಂ.ಸ್ವಾಮೀಜಿ ₹10 ಸಾವಿರ ವೆಚ್ಚ ಮಾಡಿ ಬೆಟ್ಟದ ನೆಲ್ಲಿಕಾಯಿ, ಸಪೋಟಾ ಗಿಡಗಳನ್ನು ನೆಟ್ಟಿದ್ದು, ಅವುಗಳು ಈಗ ಫಲಕೊಡುತ್ತಿವೆ. ಆ ಹಣ್ಣುಗಳನ್ನು ಮಂಗಗಳು, ವಿವಿಧ ಪಕ್ಷಿಗಳು ತಿನ್ನುತ್ತಿವೆ. ಸ್ವಾಮೀಜಿ ದೂರದೃಷ್ಟಿ ಹೊಂದಿದ್ದರು. ಅವರು ಮಾಡಿದ ನೂರಾರು ಸಮಾಜಿಕ ಸೇವೆಗಳು ಶಾಶ್ವತವಾಗಿವೆ. ಇತರರಿಗೆ ಸ್ಫೂರ್ತಿಯಾಗಿತವೆ ಎಂದು ನೆನೆಯುತ್ತಾರೆ ಸಾಮಾಜಿಕ ಕಾರ್ಯಕರ್ತ ಈರಣ್ಣ ನಂಜಪ್ಪನವರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು