ಅಂಗನವಾಡಿ ಅವ್ಯವಸ್ಥೆ; ಅಧಿಕಾರಿಗಳಿಗೆ ತಾಕೀತು

7
ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ; ಕಾಮಗಾರಿ ಬಗ್ಗೆ ವರದಿ ಸಲ್ಲಿಸಲು ಸೂಚನೆ

ಅಂಗನವಾಡಿ ಅವ್ಯವಸ್ಥೆ; ಅಧಿಕಾರಿಗಳಿಗೆ ತಾಕೀತು

Published:
Updated:
Deccan Herald

ಗದಗ: ‘ಅಂಗನವಾಡಿಗಳಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ ಮತ್ತು ಸಿಇಒ ಮಂಜುನಾಥ ಚವ್ಹಾಣ ಅವರು ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

‘ಅಂಗನವಾಡಿ ಕಟ್ಟಡ ಕಟ್ಟಲು ಕೇವಲ ನಿರ್ಮಿತಿ ಕೇಂದ್ರಕ್ಕೆ ಹಣ ವರ್ಗಾಯಿಸಿ ಕೈತೊಳೆದುಕೊಂಡರೆ ಸಾಲದು, ಇಲಾಖೆಯ ಮುಖ್ಯಸ್ಥರು ಈ ಬಗ್ಗೆ ನಿರಂತರ ನಿಗಾ ವಹಿಸಬೇಕು’ ಎಂದು ಸಿಇಒ ತಾಕೀತು ಮಾಡಿದರು.

‘ಅಂಗನವಾಡಿಗಳ ಬಗ್ಗೆ ಪ್ರತಿ ಸಭೆಯಲ್ಲಿ ಚರ್ಚೆ ನಡೆಯುತ್ತದೆ. ಆದರೆ, ಒಂದಲ್ಲ ಒಂದು ಕಾರಣ ನೀಡಿ ಸಾಗ ಹಾಕಲಾಗುತ್ತದೆ. ಬರುವ ಸಾಮಾನ್ಯ ಸಭೆಯ ವೇಳೆಗೆ ಅಂಗನವಾಡಿಗಳಲ್ಲಿ ಶುದ್ಧ ನೀರು ಹಾಗೂ ಶೌಚಾಲಯ ವ್ಯವಸ್ಥೆ ಇರಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಅಧ್ಯಕ್ಷ ವಾಸಣ್ಣ ಕುರಡಗಿ ಎಚ್ಚರಿಕೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಡಗಣ್ಣವರ ಹಾಗೂ ಅಧಿಕಾರಿಗಳು ಎಲ್ಲೆಲ್ಲಿ ಅಂಗನವಾಡಿ ಕಟ್ಟಡ ಮತ್ತು ಶೌಚಾಲಯಗಳು ಇವೆ ಎಂಬುದರ ಮಾಹಿತಿ ನೀಡಿದರು.ಆದರೆ, ಈ ಉತ್ತರಿದಿಂದ ಸಮಾಧಾನಗೊಳ್ಳದ ಅಧ್ಯಕ್ಷ, ‘ಶುದ್ಧ ನೀರಿನ ಘಟಕ ಮತ್ತು ಶೌಚಾಲಯ ನಿರ್ಮಾಣದ ಬಗ್ಗೆ ಸಮಗ್ರ ವರದಿ ಸಲ್ಲಿಸಿ’ ಎಂದು ಸೂಚಿಸಿದರು.
ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆಯಿಂದ 13,840 ತಾಡಪತ್ರಿ ಹಂಚಿಕೆ ಗುರಿ ನಿಗದಿಪಡಿಸಲಾಗಿದ್ದು, ಅವುಗಳನ್ನು ಆಯಾ ಜಿಲ್ಲಾ ಪಂಚಾಯ್ತಿ ಸದಸ್ಯರ ಮೂಲಕ ಕ್ಷೇತ್ರವಾರು ಹಂಚಿಕೆ ಮಾಡುವಂತೆ ಸದಸ್ಯ ಈಶ್ವರಪ್ಪ ಹುಲ್ಲಲ್ಲಿ ಆಗ್ರಹಿಸಿದರು. ಇದಕ್ಕೆ ಇದಕ್ಕೆ ಬಹುತೇಕ ಸದಸ್ಯರು ಧ್ವನಿಗೂಡಿದರು.

‘ತಾಡಪತ್ರಿಗಳ ಬೇಡಿಕೆ ಹೆಚ್ಚಿದೆ. ಅರ್ಜಿ ಸಲ್ಲಿಸಿದ ರೈತರಿಗೆ ಹಂಚಿಕೆ ಮಾಡಲಾಗುತ್ತಿದೆ. ಜಿಲ್ಲಾ ಪಂಚಾಯ್ತಿ ಸದಸ್ಯರು ನೀಡಿದ ಪತ್ರದ ಆಧಾರದಲ್ಲೂ ವಿತರಿಸಲಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿ ಸಭೆಯ ಗಮನಕ್ಕೆ ತಂದರು. ಮಧ್ಯಪ್ರವೇಶಿಸಿದ ಅಧ್ಯಕ್ಷ ವಾಸಣ್ಣ ಕುರಡಗಿ‘, ತಾಡಪತ್ರಿ ಹಂಚಿಕೆಗೆ ಇರುವ ನಿಯಮಗಳು ಹಾಗೂ ಕಳೆದ ವರ್ಷ ಹಂಚಿಕೆ ಮಾಡಿದ ಫಲಾನುಭವಿಗಳ ಪಟ್ಟಿಯನ್ನು ತಮಗೆ ನೀಡುವಂತೆ’ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ರೂಪಾ ಅಂಗಡಿ, ಎಸ್.ಪಿ. ಬಳಿಗಾರ, ರಾಜೂಗೌಡ ಕೆಂಚನಗೌಡ್ರ, ಸಿದ್ದು ಪಾಟೀಲ, ಶಕುಂತಲಾ ಮೂಲಿಮನಿ, ಹನುಮಂತಪ್ಪ ಪೂಜಾರ, ಲಲಿತಾ ಹುಣಸಿಕಟ್ಟಿ, ಶಕುಂತಲಾ ಚವ್ಹಾಣ, ಶೋಭಾ ಮೇಟಿ, ಮಲ್ಲವ್ವ ಬಿಚ್ಚೂರ, ರೇಣುಕಾ ಅವರಾದಿ, ದೇವಕ್ಕ ಲಮಾಣಿ, ರೇಖಾ ಅಳವಂಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !