ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಸಮಾಜದ ಏಳ್ಗೆಗೆ ಶ್ರಮಿಸಿದ ಶ್ರೀ ಅಭಿನವ ಅನ್ನದಾನ ಸ್ವಾಮೀಜಿ

ದಣಿವರಿಯದೇ ದುಡಿದು ಲೀನರಾದ ಅಭಿನವ ಅನ್ನದಾನ ಸ್ವಾಮೀಜಿ
Last Updated 23 ನವೆಂಬರ್ 2021, 6:20 IST
ಅಕ್ಷರ ಗಾತ್ರ

ನರೇಗಲ್: ಉತ್ತರ ಕರ್ನಾಟಕದ ಭಾಗದಲ್ಲಿ ಮಠದ ಪರಂಪರೆಯ ಕಾರ್ಯಕ್ಷೇತ್ರದ ಮೂಲಕ ಅನೇಕ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಧಾರ್ಮಿಕ ಕಾರ್ಯಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದವರು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಪೀಠಾಧಿಪತಿ ಡಾ. ಅಭಿನವ ಅನ್ನದಾನ ಸ್ವಾಮೀಜಿ. ಇವರು ನಾಡು, ನುಡಿ ಮತ್ತು ಸಮಾಜದ ಸರ್ವತೋಮುಖ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿದ್ದರು.

ಹಾಲಕೆರೆಯ ಶ್ರೀಮಠಕ್ಕೆ ಮುಸ್ಲಿಂ ಧರ್ಮದವರು ಕೂಡ ನಡೆದುಕೊಳ್ಳುತ್ತಾರೆ. ಹಲವು ಬಾರಿ ಅಭಿನವ ಅನ್ನದಾನ ಶ್ರೀಗಳ ತುಲಾಭಾರವನ್ನು ನೆರವೇರಿಸಿದ್ದಾರೆ ಹಾಗೂ ಮಠದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಇಂದಿಗೂ ಕೂಡ ಪಾಲ್ಗೊಳ್ಳುತ್ತಾರೆ.

ದಣಿವರಿಯದೇ ಅನ್ನ, ಅಕ್ಷರ, ಧರ್ಮದ ಸೇವೆ ಮಾಡಿರುವ ಇವರಿಗೆ ಭಕ್ತರೆಂದರೆ ಬಹಳ ಪ್ರೀತಿ. ಭಕ್ತರ ಹೃದಯದಲ್ಲಿ ದಾನ-ಧರ್ಮಗಳ ಬೀಜವನ್ನು ಬಿತ್ತಿ ಸಮಾಜ ಸೇವೆಗೆ ಕಾರ್ಯತತ್ಪರರನ್ನಾಗಿ ಮಾಡುವಲ್ಲಿ ಶ್ರೀಗಳು ಎತ್ತಿದ ಕೈ. ಮಠ, ಮಕ್ಕಳು, ಭಕ್ತರಿಗಾಗಿ ಸದಾ ಮಿಡಿಯುತ್ತಿದ್ದರು.

ಡಾ. ಅಭಿನವ ಅನ್ನದಾನ ಸ್ವಾಮೀಜಿಯವರಿಗೆ ಬಸವಣ್ಣನವರು ಹಾಗೂ ಬಸವ ಪುರಾಣವೆಂದರೆ ಪಂಚಪ್ರಾಣ. ವಚನದ ಮೇಲೆ ಎಲ್ಲಿಲ್ಲದ ಆಸಕ್ತಿ. ಅದಕ್ಕಾಗಿ ಹಳ್ಳಿ-ಹಳ್ಳಿಗೆ ಬಸವ ಪುರಾಣ ಹೇಳಿಸಿದ ಕೀರ್ತಿ ಇವರದ್ದು.

ಹಾಲಕೆರೆಯ ಅನ್ನದಾನೇಶ್ವರ ಮಠಕ್ಕೆ ಯಾರೇ ಭಕ್ತರೂ ಬಂದರು ಆಶೀರ್ವಾದ ಮಾಡಿದ ತಕ್ಷಣ ಹೇಳುವ ಮೊದಲ ಪದವೆಂದರೆ ಪ್ರಸಾದ ಮಾಡಿ ಎಂದು. ಅದಕ್ಕಾಗಿ ಅನ್ನದಾನೇಶ್ವರ ಮಠಕ್ಕೆ ಬರುವವರಿಗೆ ಅನ್ನದ ಕೊರತೆ ಇರುವುದಿಲ್ಲ ಎನ್ನುವ ನುಡಿ ಮಠದ ಪರಂಪರೆಯೂ ಆಗಿದೆ.

ಶಿಕ್ಷಣದಿಂದಲೇ ಸಮಗ್ರ ಅಭಿವೃದ್ಧಿ ಎಂಬ ಮಂತ್ರವನ್ನು ನಂಬಿದ್ದ ಡಾ. ಅಭಿನವ ಅನ್ನದಾನ ಸ್ವಾಮೀಜಿ ಧಾರ್ಮಿಕ, ಅಧಾತ್ಮಿಕ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಪರಿಸರವನ್ನು ನಿರಂತರವಾಗಿ ಕ್ರಿಯಾಶೀಲಗೊಳಿಸುವಲ್ಲಿ ಹಾಗೂ ಸಮಾಜದ ಹಿತವನ್ನು ಕಾಪಾಡುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ನರೇಗಲ್‌ ಪಟ್ಟಣದಲ್ಲಿರುವ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ವಿವಿಧ ಅಂಗ ಸಂಸ್ಥೆಗಳ ಅಧ್ಯಕ್ಷರಾಗಿ ಆಧುನಿಕ ಶಿಕ್ಷಣದ ಸೌಲಭ್ಯವನ್ನು ನೀಡುವುದರ ಜೊತೆಗೆ ಕಾಲಾನುಗುಣಕ್ಕೆ ತಕ್ಕಂತೆ ಪ್ರಾಥಮಿಕ, ಪ್ರೌಢ, ಪಿಯುಸಿ, ಪದವಿ ಹಾಗೂ ಉನ್ನತ ಶಿಕ್ಷಣದ ವಿಭಾಗಗಳನ್ನು ಸ್ಥಾಪಿಸಿ, ಬಾಲಕ, ಬಾಲಕಿಯರ ಪ್ರತ್ಯೇಕ ವಸತಿ ನಿಲಯಗಳನ್ನು ನಿರ್ಮಿಸಿ ಶ್ರೀಮಠದಿಂದ ಅಕ್ಷರ ದಾಸೋಹ ಮಾಡಿದ್ದಾರೆ. ಅದರಲ್ಲೂ ಬಡ ಹಾಗೂ ರೈತರ ಮಕ್ಕಳಿಗೆ ಯಾವಾಗಲೂ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಡಾ. ಅಭಿನವ ಅನ್ನದಾನ ಶ್ರೀಗಳ ಕೊಡುಗೆ

ಸರ್ವಧರ್ಮ ಸಾಮೂಹಿಕ ವಿವಾಹ, ಹರಿಜನ-ಗಿರಿಜ ಓಣಿಗಳಲ್ಲಿ ಪಾದಯಾತ್ರೆ, ಮನೆ, ಮನೆಗೆ ಭೇಟಿ, ಪ್ರಸಾದ ವಿತರಣೆ, ತಮ್ಮ ಅಧಿಕಾರ ವ್ಯಾಪ್ತಿಯ 9 ಮಠಗಳಲ್ಲಿ ನಿರಂತರ ಮಾಸಿಕ ಶಿವಾನುಭವ, ನೆಲ್ಲೂರ, ನಿಡಶೇಸಿ, ನರೇಗಲ್‌ ಕೆರೆಗಳಿಗೆ ಪುನರುಜ್ಜೀವನ, 20 ವರ್ಷಗಳ ಹಿಂದೆಯೇ ಸಾವಯವ ಕೃಷಿ ಜಾಗೃತಿ ಅಭಿಯಾನ 2004 ರಲ್ಲಿ ರಾಜ್ಯ ಮಟ್ಟದ ಕೃಷಿ ಸಮಾವೇಶ, ಮಹಿಳೆಯರಿಗಾಗಿ, ಮಹಿಳೆಯರಿಂದ ಎಳೆಯುಡುವ ಬೆಳ್ಳಿ ತೇರು ನಿರ್ಮಾಣ, ಶಿವಯೋಗ ಮಂದಿರದಲ್ಲಿ 300ಕ್ಕೂ ಹೆಚ್ಚು ಗೋವುಗಳ ಸೇವೆ ಹಾಗೂ ದೇಶಿ ಗೋಮೂತ್ರ ಬ್ಯಾಂಕ್‌ ಸ್ಥಾಪನೆ, ಮಹಿಳಾ ಸಬಲಿಕರಣಕ್ಕಾಗಿ 5001 ಮುತ್ತೈದೆಯರ ಉಡಿ ತುಂಬುವ ಹಾಗೂ 5001 ಕೃಷಿ ತಾಯಂದಿರ ಸನ್ಮಾನ. ರಕ್ತ ತುಲಾಭಾರಕ್ಕೆ ಒಪ್ಪಿ 100 ಕೆ.ಜಿ. ರಕ್ತವನ್ನು ರಕ್ತ ಭಂಡಾರಕ್ಕೆ ದಾನ, ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ ವಿವಿಧ ಅಂಗಸಂಸ್ಥೆಗಳ ರಜತ, ಅಮೃತ, ಬೆಳ್ಳಿ ಮಹೋತ್ಸವ, ನಕಲುರಹಿತಾ ಪರೀಕ್ಷಾ ವಿಧಾನಕ್ಕೆ ಮುನ್ನುಡಿ ಬರೆದಿದ್ದರು. ಶಿವಯೋಗ ಮಂದಿರದಲ್ಲಿ 65 ಅಡಿ ಎತ್ತರದ ತೇರು ಏಷ್ಯಾದ 2ನೇ ಅತಿದೊಡ್ಡ ತೇರಾಗಿದೆ.

ಅಂಗವಿಕಲರ ಮೇಲೆ ಕೇವಲ ಕರುಣೆ ಬೇಡ, ಪ್ರೀತಿಯೊಂದಿಗೆ ಅವರನ್ನು ಸಾಕುವುದೇ ಮೇಲೆಂದ ಶ್ರೀಗಳು ವಸತಿ ಸಹಿತ ಕಿವುಡ ಮೂಕರ ಶಾಲೆಯನ್ನು ತೆರೆಯುವ ಮೂಲಕ ಮೂಕರಿಗೆ ಬಾಯಿಯಾಗಿ, ಕಿವುಡರಿಗೆ ಕಿವಿಯಾಗಿ ಆಶ್ರಯ ನೀಡಿದ್ದಾರೆ, ಹಾಲಕೆರೆ ಮಠದ ಶತಮಾನೋತ್ಸವ, ಶಿವಯೋಗ ಮಂದಿರದ ಶತಮಾನೋತ್ಸವ ಸೇರಿದಂತೆ ಅನೇಕ ಸಾಧನೆಗಳನ್ನು ಮಾಡಿದ್ದಾರೆ.

ಮುಪ್ಪಿನ ಬಸವಲಿಂಗ ಸ್ವಾಮೀಜಿ ಮೇಲೆ ಜವಾಬ್ದಾರಿ

ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅಭಿನವ ಅನ್ನದಾನ ಸ್ವಾಮೀಜಿ ಶ್ರೀಮಠದ ಶತಮಾನೋತ್ಸವದಲ್ಲೇ ನಿಯೋಜಿತವಾಗಿದ್ದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅವರನ್ನು ಅನ್ನದಾನೇಶ್ವರ ಸಂಸ್ಥಾನ ಮಠ ಹಾಲಕೆರೆ-ಗಂಜಿಹಾಳಕ್ಕೆ 13ನೇ ಪೀಠಾಧಿಪತಿಯಾಗಿ ನ. 10ರಂದು ಭಕ್ತರ ಆಶಯದಂತೆ ನೇಮಕ ಮಾಡಿದ್ದರು. ಮುಪ್ಪಿನ ಬಸವಲಿಂಗ ಸ್ವಾಮೀಜಿ ಅಭಿನವ ಅನ್ನದಾನ ಸ್ವಾಮಿಗಳ ಶಿಷ್ಯರು ಹಾಗೂ ಶಿವಯೋಗ ಮಂದಿರದ ವಟು ಸಾಧಕರು ಎನ್ನುವುದು ವಿಶೇಷ. 2006ರಲ್ಲಿ ಶಿವಯೋಗ ಮಂದಿರದ ಸಂಸ್ಥೆಯಲ್ಲಿ 8ನೇ ತರಗತಿಗೆ ಪ್ರವೇಶ ಬಯಸಿ ಪಡೆದರು. ಇವರ ಧರ್ಮನಿಷ್ಠೆ, ತೇಜಸ್ಸು ನೋಡಿ ಮುಂದೆ ಈ ಮಗು ಸಮಾಜಕ್ಕೆ ಒಬ್ಬ ಉತ್ತಮ ಸ್ವಾಮಿಯಾಗುತ್ತಾನೆ ಎಂದು ಅಭಿನವ ಅನ್ನದಾನ ಸ್ವಾಮಿಗಳು ಭವಿಷ್ಯ ನುಡಿದಿದ್ದರು. ಈಗ ಅದೇ ಶ್ರೀಗಳ ಮಠಕ್ಕೆ ಉತ್ತರಾಧಿಕಾರಿಯಾದರು. ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿರುವ ನಾಡಿನ ಹೆಸರಾಂತ ಮಠದ ಜವಾಬ್ದಾರಿ ಈಗ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT