ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾನ ಸ್ವಾಮೀಜಿ: ಹಾಲಕೆರೆ ಬೆಳದಿಂಗಳು ಅಸ್ತಂಗತ

ವೀರಶೈವ – ಲಿಂಗಾಯತ ಧರ್ಮದ ಅಖಂಡತೆಗೆ ಶ್ರಮಿಸಿದ ಅನ್ನದಾನ ಸ್ವಾಮೀಜಿ
ಅಕ್ಷರ ಗಾತ್ರ

ನರೇಗಲ್:‌ ಹಾಲಕೆರೆ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಅಭಿನವ ಅನ್ನದಾನ ಸ್ವಾಮೀಜಿ ಸೋಮವಾರ ಲಿಂಗೈಕ್ಯರಾದರು. ಭಕ್ತ ಸಮೂಹದಲ್ಲಿ ದಣಿವರಿಯದ ಧಾರ್ಮಿಕ ಸಾಧಕ,ಸಮಾಜವಾದದ ಸ್ವಾಮೀಜಿ ಎಂದೇ ಕರೆಯಿಸಿಕೊಳ್ಳುತ್ತಿದ್ದ ‘ಹಾಲಕೆರೆಯ ಬೆಳದಿಂಗಳು’ ಪ್ರಕೃತಿಯಲ್ಲಿ ಲೀನಗೊಂಡಿತು.

ವೀರಶೈವ- ಲಿಂಗಾಯತವನ್ನು ಸ್ವತಂತ್ರ ಧರ್ಮವನ್ನಾಗಿ ಪರಿಗಣಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವಲ್ಲಿ ಹಾಗೂ ವೀರಶೈವ–ಲಿಂಗಾಯತ ಎನ್ನುವುದು ಒಂದೇ ಎಂದು ಹೋರಾಟ ಮಾಡುವ ಸ್ವಾಮೀಜಿಗಳ ಬಣದ ಮುಂಚೂಣಿಯಲ್ಲಿ ಹಾಲಕೆರೆ ಸಂಸ್ಥಾನ ಮಠದ ಡಾ. ಅಭಿನವ ಅನ್ನದಾನ ಸ್ವಾಮೀಜಿ ಇದ್ದರು.

ವೀರಶೈವ-ಲಿಂಗಾಯತ ಒಂದೇ ಧರ್ಮವಾಗಿ ಉಳಿಯಬೇಕೆ ವಿನಹ ವೀರಶೈವರು ಬೇರೆ, ಲಿಂಗಾಯತರು ಬೇರೆ ಆಗಬಾರದು ಎನ್ನುವ ಉದ್ದೇಶದಿಂದ ವಿವಿಧ ಮಠಾಧೀಶರ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಶಿವಯೋಗ ಮಂದಿರದಲ್ಲಿ ಬೃಹತ್‌ ಸಮಾವೇಶವನ್ನು 2017ರಲ್ಲಿ ಆಯೋಜಿಸಿದ್ದರು. ಇದರಲ್ಲಿ ಸಾವಿರಾರು ವೀರಶೈವ ಲಿಂಗಾಯತ ಅನುಯಾಯಿಗಳು, ಗಣ್ಯರು ಪಾಲ್ಗೊಂಡಿದ್ದರು. ಧರ್ಮದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಸ್ವಾಮೀಜಿಗಳಾದವರು ಗ್ರಾಮೀಣರ ಮನೆಗೆ ಹೋಗಿ ಭಕ್ತರಿಗೆ ಲಿಂಗ ಕಟ್ಟಿ ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದು ಅಭಿನವ ಅನ್ನದಾನ ಶ್ರೀಗಳು ಕರೆಕೊಟ್ಟಿದ್ದರು.

ವೀರಶೈವ ಲಿಂಗಾಯತ ಪುರಾತನ ಧರ್ಮ, ವೀರಶೈವ ಎಂಬ ಪದದ ಉಲ್ಲೇಖ ವಚನಗಳಲ್ಲಿಯೂ ಇದೆ. ಪ್ರತ್ಯೇಕ ಲಿಂಗಾಯತ ಧರ್ಮದ ಹೆಸರಲ್ಲಿ ವೀರಶೈವ ಲಿಂಗಾಯತ ಧರ್ಮ ಒಡೆಯುವ ಕೆಲಸವನ್ನು ಕೆಲವರು ಮಾಡುತ್ತಿದ್ದು ಇದಕ್ಕೆ ಯಾರೂ ಕಿವಿಗೊಡಬಾರದು ಎಂದು ಭಕ್ತರಿಗೆ ತಿಳಿಸಿದ್ದರು.

ವೀರಶೈವ ಒಳಪಂಗಡಗಳನ್ನು ಒಗ್ಗೂಡಿಸುವ ಕಾರ್ಯ ಮಾಡಿದಾಗ ಮಾತ್ರ ಸಮಾಜದ ಅಸ್ತಿತ್ವ ಉಳಿಯಲು ಸಾಧ್ಯ. ವೀರಶೈವ-ಲಿಂಗಾಯತ ಧರ್ಮ ವ್ಯಕ್ತಿ ಹಿತಕ್ಕೆ ಮಹತ್ವ ಕೊಡದೆ ಸಮಷ್ಠಿ ಹಿತಕ್ಕೆ ಮಹತ್ವ ಕೊಡುವುದು. ಇಂತಹ ಅಂಶ ಜಗತ್ತಿನ ಯಾವುದೇ ಧರ್ಮದಲ್ಲಿಯೂ ಇಲ್ಲ ಎಂದು ಸಂದೇಶ ನೀಡಿದ್ದರು.

ವಿರಕ್ತ ಪರಂಪರೆ ಹೊಂದಿದ್ದರೂ ಗುರು ಪರಂಪರೆಯನ್ನು ಪ್ರೀತಿ ವಿಶ್ವಾಸ ಹಾಗೂ ಗೌರವದಿಂದ ಕಾಣುವ ಗುಣ ಹೊಂದಿದ್ದರು. ರೇಣುಕಾಚಾರ್ಯರು, ಬಸವಣ್ಣನವರು ಮೊದಲಾದವರು ಗುರು, ಲಿಂಗ, ಜಂಗಮ ಪರಿಕಲ್ಪನೆಯನ್ನೇ ಒತ್ತಿ ಹೇಳಿದ್ದಾರೆ. ಅದಕ್ಕಾಗಿ ಗುರು – ವಿರಕ್ತರು ಒಂದಾಗಬೇಕು ಎನ್ನುತ್ತಿದ್ದರು. ಶಿವಯೋಗ ಮಂದಿರಲ್ಲಿ, ಹೊಸಪೇಟೆಯಲ್ಲಿ ಹಾಗೂ ಹಾಲಕೆರೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ಪಂಚಪೀಠದ ಗುರುಗಳನ್ನು ಆಹ್ವಾನಿಸುವ ಮೂಲಕ ಭಕ್ತರಲ್ಲಿ ಸಾಮರಸ್ಯ ಮೂಡಿಸುತ್ತಿದ್ದರು. ಮುಂದೆ ಇವರೇ ಗುರು ವಿರಕ್ತರ ಕೊಂಡಿಯಾಗಿ ವೀರಶೈವ – ಲಿಂಗಾಯತ ಧರ್ಮದ ಹೋರಾಟದ ಬಲ
ಹೆಚ್ಚಿಸಿದ್ದರು.

ವೀರಶೈವ ಪಂಚಪೀಠಗಳ ಗುರುಗಳ ಜತೆಗೆ ಸದ್ಭಾವನೆ, ಉತ್ತಮ ಸಾಮರಸ್ಯ ಹೊಂದಿದ್ದ ಅಭಿನವ ಅನ್ನದಾನ ಶ್ರೀಗಳಿಗೆ ಮೇ 1, 2018ಕ್ಕೆ ರಂಭಾಪುರಿ, ಉಜ್ಜಿಯಿನಿ, ಶ್ರೀಶೈಲ, ಶ್ರೀಕಾಶಿ, ಹುಬ್ಬಳ್ಳಿ ಮೂರು ಸಾವಿರಮಠದ ಶ್ರೀಗಳ ಸಮ್ಮುಖದಲ್ಲಿ ರಂಭಾಪುರಿ ಪೀಠದ ವತಿಯಿಂದ ರೇಣುಕಾಚಾರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ವಟು ಸಾಧಕರನ್ನು ನೀಡಿದ ಶ್ರೀಗಳು

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಮಲಪ್ರಭಾ ನದಿಯ ದಂಡೆಯಮೇಲೆ ಲಿಂಗೈಕ್ಯ ಹಾನಗಲ್ಲ ಕುಮಾರಸ್ವಾಮಿಗಳಿಂದ ಸ್ಥಾಪನೆಯಾದ ಶಿವಯೋಗ ಮಂದಿರದ ಅಧ್ಯಕ್ಷರಾಗಿ 1993ರಿಂದ 1996ರವರೆಗೆ, 1996ರಿಂದ 2000ವರೆಗೆ ನಂತರ 3ನೇ ಅವಧಿಗೆ 2004ರಿಂದ ಇಲ್ಲಿಯವರೆಗೆ ಸೇವೆ ಸಲ್ಲಿಸಿದ್ದಾರೆ.

ನೂರಾರು ವಟು ಸಾಧಕರನ್ನು ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ವಿವಿಧ ಮಠಗಳಿಗೆ ಕೊಡುಗೆಯಾಗಿ ನೀಡದ್ದಾರೆ.

ಯಾವ ಪಾಲಕರಿಗೆ ತಮ್ಮ ಮಗ ಯೋಗ್ಯ ಮಠಾಧಿಪತಿ, ಸಮಾಜದ ಆಸ್ತಿಯಾಗಬೇಕು ಎನ್ನುವ ತುಡಿತವಿರುತ್ತದೆಯೋ ಅಂತವರು 6 ವರ್ಷದೊಳಗಿನ ಮಗುವನ್ನು ಮಠದ ಸುಪರ್ದಿಗೆ ಒಪ್ಪಿಸುವ ಅವಕಾಶವನ್ನು ಅಭಿನವ ಅನ್ನದಾನ ಶ್ರಿಗಳು ಕಲ್ಪಿಸಿಕೊಟ್ಟಿದ್ದಾರೆ. ಮೊದಲಿಗೆ ಜಂಗಮ ಕುಟುಂಬದವರಿಗೆ ಮಾತ್ರ ಅವಕಾಶವಿತ್ತು. ಈಗ ಯಾವುದೇ ಜಾತಿ ಭೇದವಿರುವುದಿಲ್ಲ.

ಮುಂದೆ ಆ ಮಗು ತಂದೆ-ತಾಯಿಯಗಳೊಡನೆ ಭಾವನಾತ್ಮಕ ಸಂಬಂಧ ಕಳೆದುಕೊಂಡು ಮಠದ ಆವರಣವೇ ಸರ್ವಸ್ವ ಎನ್ನುತ್ತದೆ. ಆಚಾರ-ವಿಚಾರ, ಲಿಂಗಪೂಜೆ, ಆತ್ಮಬಲ ಸಂವರ್ಧನೆ, ವೀರಶೈವ-ಲಿಂಗಾಯತ ತತ್ವದರ್ಶನ, ವಚನ ಸಾಹಿತ್ಯ, ಸಂಸ್ಕೃತ, ಸಂಗೀತ, ಯೋಗಾಭ್ಯಾಸ, ಮುಂತಾದವುಗಳ ಪಕ್ವತೆಯನ್ನು ಸಾಧಿಸಿ, ಸಮಾಜ ಸೇವೆಗೆ ಸಿದ್ಧಗೊಳ್ಳುತ್ತದೆ. ಸದ್ಯ 40 ವಟುಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಪ್ರತಿ ವಟುವಿನ ಕುರಿತು ಶ್ರೀಗಳು ವಿಶೇಷ ಕಾಳಜಿ ವಹಿಸುತ್ತಿದ್ದರು. ಧರ್ಮ ಬೋಧನೆ, ಸಮಾಜದ ಕುರಿತು ತಿಳಿವಳಿಕೆ ನೀಡುತ್ತಿದ್ದರು. ಅನ್ನಪ್ರಸಾದ, ಆರೋಗ್ಯ, ಆರೈಕೆ, ಎಲ್ಲದರ ಕುರಿತು ವಿಚಾರಿಸುತ್ತಿದ್ದರು.

ಇಲ್ಲಿನ ವಟುಗಳಾದ ಭಾಲ್ಕಿ ಪಟ್ಟದೇವರ ಮಠದ ಬಸವಲಿಂಗ ಸ್ವಾಮೀಜಿ, ನಿಡಗುಂದಿಕೊಪ್ಪ ಮಠದ ಚನ್ನಬಸವ ಸ್ವಾಮೀಜಿ, ನಾಗನೂರ ರುದ್ರಾಕ್ಷಿ ಮಠದ ಅಭಿನವ ಅಲ್ಲಮಪ್ರಭು ಸ್ವಾಮೀಜಿ, ಹಾವೇರಿ ಮಠದ ಸದಾಶಿವ ಸ್ವಾಮೀಜಿ, ಘಟಪ್ರಭದ ಮಲ್ಲಿಕಾರ್ಜುನ ಸ್ವಾಮೀಜಿ, ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಮುಪ್ಪಿನ ಬಸಲಿಂಗ ಸ್ವಾಮೀಜಿಯೂ ಶಿವಯೋಗ ಮಂದಿರದ ಸಾಧಕರು ಹಾಗೂ ಅಭಿನವ ಅನ್ನದಾನ ಶ್ರೀಗಳ ಶಿಷ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT