ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್ ಕಾಂಟಿನೆಂಟಲ್ ಕಪ್‌ ಫುಟ್‌ಬಾಲ್: ಕಿವೀಸ್‌ಗೆ ಶರಣಾದ ಭಾರತ

ಕೊನೆಯಲ್ಲಿ ಆಘಾತ ನೀಡಿದ ಪ್ರವಾಸಿ ತಂಡ
Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ಮುಂಬೈ: ಭಾರತ ಫುಟ್‌ಬಾಲ್ ತಂಡವು ಇಂಟರ್ ಕಾಂಟಿನೆಂಟಲ್ ಫುಟ್‌ಬಾಲ್‌ ಟೂರ್ನಿಯಲ್ಲಿ ಗುರುವಾರ ನಿರಾಸೆ ಅನುಭವಿಸಿತು. ಕಿಕ್ಕಿರಿದು ತುಂಬಿದ್ದ ಮುಂಬೈ ಫುಟ್‌ಬಾಲ್‌ ಅರೆನಾ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್ ಜಯ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿದ ಸುನಿಲ್ ಚೆಟ್ರಿ ಬಳಗ ನ್ಯೂಜಿಲೆಂಡ್‌ ವಿರುದ್ಧ 1–2 ಗೋಲುಗಳಿಂದ ಸೋತಿತು.

ಮೊದಲ ಎರಡು ಪಂದ್ಯಗಳಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿರುವ ಭಾರತ ಈ ಪಂದ್ಯದಲ್ಲಿ ಒತ್ತಡವಿಲ್ಲದೆ ಆಡಿತು. ಆದರೆ ಪಂದ್ಯದುದ್ದಕ್ಕೂ ಆಕ್ರಮಣಕಾರಿ ಆಟವಾಡಿದ ಪ್ರವಾಸಿ ತಂಡ ಗೆಲುವಿನ ನಗೆ ಚೆಲ್ಲಿತು.

ಐದನೇ ನಿಮಿಷದಲ್ಲಿ ಭಾರತದ ಆಕ್ರಮಣ ವಿಭಾಗ ಚುರುಕಿನ ಆಟವಾಡಿತು. ಅಮರಿಂದರ್ ಮತ್ತು ಆಶಿಕ್ ಕಾರುಣ್ಯನ್ ಅವರ ಶ್ರಮದ ಫಲವಾಗಿ ಚೆಂಡು ಎದುರಾಳಿ ಪಾಳಯದ ಗೋಲು ಪೆಟ್ಟಿಗೆ ಬಳಿ ಸೇರಿತು. ಗೋಲು ಗಳಿಸಲು ಸುನಿಲ್ ಚೆಟ್ರಿ ಪ್ರಯತ್ನಿಸಿದರು. ಆದರೆ ನ್ಯೂಜಿಲೆಂಡ್ ಡಿಫೆಂಡರ್‌ಗಳು ಅವರಿಗೆ ನಿರಾಸೆ ಮೂಡಿಸಿದರು.

ನ್ಯೂಜಿಲೆಂಡ್‌ನ ಜಾಯ್‌ ಇಂಗಮ್‌ 14ನೇ ನಿಮಿಷದಲ್ಲಿ ಆಕ್ರಮಣಕಾರಿ ಆಟವಾಡಿ ಭಾರತ ಪಾಳಯದಲ್ಲಿ ಆತಂಕ ಮೂಡಿಸಿದರು. ಆದರೆ ಅವರು ಬಲವಾಗಿ ಒದ್ದ ಚೆಂಡು ಗೋಲು ಪೆಟ್ಟಿಗೆಯ ಮೇಲಿಂದ ಆಚೆ ಚಿಮ್ಮಿತು. 26ನೇ ನಿಮಿಷದಲ್ಲಿ ಭಾರತಕ್ಕೆ ಗೋಲು ಗಳಿಸುವ ಉತ್ತಮ ಅವಕಾಶ ಒದಗಿ ಬಂದಿತ್ತು. ತಂಡದ ಶ್ರಮವನ್ನು ನ್ಯೂಜಿಲೆಂಡ್ ಗೋಲ್ ಕೀಪರ್ ವಿಫಲಗೊಳಿಸಿದರು.

ಮೊದಲಾರ್ಧದ ಮುಕ್ತಾಯಕ್ಕೆ ನಿಮಿಷಗಳು ಬಾಕಿ ಉಳಿದಿರುವಾಗ ಭಾರತ ತಂಡ ಆಕ್ರಮಣಕ್ಕೆ ಒತ್ತು ನೀಡಿತು. 45ನೇ ನಿಮಿಷದಲ್ಲಿ ಆಶಿಕ್ ಮತ್ತು ಬಲ್ವಂತ್ ಸಿಂಗ್‌ ಅವರ ಶ್ರಮದಿಂದ ಭಾರತಕ್ಕೆ ಉತ್ತಮ ಅವಕಾಶ ಒದಗಿ ಬಂತು. ಆದರೆ ಚೆಟ್ರಿ ಒದ್ದ ಚೆಂಡು ಗೋಲುಪೆಟ್ಟಿಗೆಯ ಹೊರಗೆ ಸಾಗಿತು. ಎರಡೂ ತಂಡಗಳಿಗೆ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗದ ಕಾರಣ ಮೊದಲಾರ್ಧ ಗೋಲು ಕಾಣದೆ ಮುಕ್ತಾಯಗೊಂಡಿತು.

ಸುಲಭ ಗೋಲುಗಳು: ದ್ವಿತೀಯಾರ್ಧದಲ್ಲಿ ಆಶಿಕ್‌, ಬಲ್ವಂತ್ ಮತ್ತು ರಾವ್ಲಿನ್ ಬೋರ್ಜಸ್‌ ಬದಲಿಗೆ ಭಾರತ ಜೆಜೆ ಲಾಲ್‌ಪೆಕ್ಲುವಾ, ನರ್ಜರೆ ಮತ್ತು ಪ್ರಣಯ್‌ ಅವರನ್ನು ಕಣಕ್ಕೆ ಇಳಿಸಿತು. 47ನೇ ನಿಮಿಷದಲ್ಲಿ ಸುಲಭ ಗೋಲು ಗಳಿಸಿ ಸುನಿಲ್ ಚೆಟ್ರಿ ಭಾರತ ಪಾಳಯದಲ್ಲಿ ಸಂಭ್ರಮ ಉಕ್ಕಿಸಿದರು. ಆದರೆ ಮರು ನಿಮಿಷದಲ್ಲೇ ನ್ಯೂಜಿಲೆಂಡ್‌ನ ಆ್ಯಂಡ್ರೆ ಸಿ ಜಾಂಗ್‌ ಸುಲಭವಾಗಿ ಚೆಂಡನ್ನು ಗುರಿ ಮುಟ್ಟಿಸಿ ಪ್ರತ್ಯುತ್ತರ ನೀಡಿದರು.

86ನೇ ನಿಮಿಷದಲ್ಲಿ ಭಾರತದ ರಕ್ಷಣಾ ಕೋಟೆಯ ಒಳಗೆ ನುಗ್ಗಿದ ಮೋಸೆಸ್‌ ಡಾಯರ್‌ ನ್ಯೂಜಿಲೆಂಡ್‌ಗೆ ಜಯದ ಗೋಲು ಗಳಿಸಿಕೊಟ್ಟರು.

ಕಿನ್ಯಾ ಹಾದಿ ಕಠಿಣ: ಭಾರತದ ವಿರುದ್ಧ 0–3 ಗೋಲುಗಳಿಂದ ಸೋತ ಕಿನ್ಯಾ ಶುಕ್ರವಾರ ತೈಪೆ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಜಯ ಗಳಿಸುವ ಭರವಸೆಯಲ್ಲಿದೆ. ಈ ಪಂದ್ಯ ದಲ್ಲಿ ಹೆಚ್ಚು ಅಂತರದಿಂದ ಗೆದ್ದರೆ ಮಾತ್ರ ತಂಡದ ಫೈನಲ್ ಹಾದಿ ಸುಗಮವಾಗಲಿದೆ. ಆಡಿದ ಎರಡೂ ಪಂದ್ಯಗಳನ್ನು ಸೋತಿರುವ ತೈಪೆ ತಂಡ ಕಿನ್ಯಾಗೆ ಸುಲಭ ತುತ್ತಾಗುವ ಸಾಧ್ಯತೆ ಇದೆ.

**

47ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದ ಸುನಿಲ್ ಚೆಟ್ರಿ

ಮರು ನಿಮಿಷದಲ್ಲೇ ಪ್ರತ್ಯುತ್ತರ ನೀಡಿದ ಆ್ಯಂಡ್ರೆ ಸಿ ಜಾಂಗ್‌

86ನೇ ನಿಮಿಷದಲ್ಲಿ ಜಯದ ಗೋಲು ಗಳಿಸಿದ ಮೋಸೆಸ್‌ ಡಾಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT