ರಾಮನಗರ: ಗಾಂಧಿ ಕುರುಹು ಸಂರಕ್ಷಣೆ ಮರೆತ ಜಿಲ್ಲಾಡಳಿತ

7
ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದರು ರಾಷ್ಟ್ರಪಿತ

ರಾಮನಗರ: ಗಾಂಧಿ ಕುರುಹು ಸಂರಕ್ಷಣೆ ಮರೆತ ಜಿಲ್ಲಾಡಳಿತ

Published:
Updated:
Deccan Herald

ರಾಮನಗರ: ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದ ಮಹಾತ್ಮ ಗಾಂಧೀಜಿ ಅವರ ಕುರುಹುಗಳನ್ನು ಸಂರಕ್ಷಿಸದಿರುವ ಬಗ್ಗೆ ಇಲ್ಲಿನ ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಗಾಂಧೀಜಿ ಅವರು ಇಲ್ಲಿಗೆ ಎರಡು ಬಾರಿ ಭೇಟಿ ನೀಡಿದ್ದಾರೆ. ಒಮ್ಮೆ ನಿಧಿ ಸಂಗ್ರಹಣೆಗಾಗಿ (31–07–1927), ಮತ್ತೊಮ್ಮೆ ಹರಿಜನೋದ್ಧಾರ ಕಾರ್ಯನಿಮಿತ್ತ(6–1–1934). ರಾಮನಗರ ಜಿಲ್ಲೆಯ ಕಾನಕನಹಳ್ಳಿ (ಕನಕಪುರ), ಕ್ಲೋಸ್‌ಪೇಟೆ (ರಾಮನಗರ)ಗೆ ಮೊದಲ ಬಾರಿಗೆ ಹಾಗೂ ಎರಡನೇ ಬಾರಿಗೆ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದರು ಎಂದು ಹಿರಿಯ ಸಂಶೋಧಕ ಡಾ. ಚಿಕ್ಕಚನ್ನಯ್ಯ ತಿಳಿಸಿದರು.

 

ಚನ್ನಪಟ್ಟಣದಲ್ಲಿ ಈಗಿನ ಗಾಂಧಿ ಭವನ ಇರುವ ಸ್ಥಳಕ್ಕೆ ಭೇಟಿ ಕೊಟ್ಟು, ಸಾರ್ವಜನಿಕ ಬಾವಿಯೊಂದನ್ನು ಉದ್ಘಾಟಿಸಿದರು. ಕನಕಪುರದಲ್ಲಿ ಈಗಿರುವ ರೂರಲ್‌ ಕಾಲೇಜಿನ ಆವರಣಕ್ಕೆ ಭೇಟಿ ನೀಡಿದ್ದರು ಎಂದು ಮಾಹಿತಿ ನೀಡಿದರು.

ಅಸ್ಪೃಶ್ಯತೆ ಆಚರಣೆ ಬಿಡಿ: 1934ರಲ್ಲಿ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದ ಗಾಂಧೀಜಿ ಅವರು ಮೊದಲು ನನ್ನನ್ನು ಹರಿಜನ ಕೇರಿಗೆ ಕರೆದುಕೊಂಡು ಹೋಗಿ ಎಂದರಂತೆ. ಆಗ ಪಟ್ಟಣದ ಮಂಗಳವಾರಪೇಟೆಯ ಆದಿಜಾಂಬವ ಕೇರಿಗೆ ಅವರನ್ನು ಕರೆದುಕೊಂಡು ಹೋಗಲಾಯಿತು. ನಂತರ ಗಾಂಧೀಜಿ ಅವರು ಅಲ್ಲಿದ್ದ ಬಾವಿಯಿಂದ ನೀರನ್ನು ತೆಗೆದು ಎಲ್ಲಾ ವರ್ಗದ ಜನರಿಗೂ ಹಾಕಿ ‘ಇನ್ನು ಮುಂದೆ ಅಸ್ಪೃಶ್ಯತೆ ಆಚರಣೆ ಮಾಡಬೇಡಿ’ ಎಂದರೆಂದು ದಾಖಲೆಗಳಿಂದ ತಿಳಿದು ಬರುತ್ತದೆ ಎಂದು ಹಿರಿಯ ಸಂಶೋಧಕ ಡಾ.ಎಚ್. ಕೃಷ್ಣೇಗೌಡ ತಿಳಿಸಿದರು.

ನಂತರ ಈಗಿನ ಜೂನಿಯರ್ ಕಾಲೇಜಿನ ಆವರಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಗಾಂಧಿ ಭವನದ ಬಳಿ ತಿಟ್ಟಮಾರನಹಳ್ಳಿ ವೆಂಕಟಪ್ಪ, ಆರ್ಯಮೂರ್ತಿ ಅವರನ್ನು ಭೇಟಿ ಮಾಡಿದರು. ನಂತರ ಹರಿಜನೋದ್ಧಾರ ನಿಧಿಗಾಗಿ ಸಂಗ್ರಹವಾಗಿದ್ದ ₨98 ಅನ್ನು ತೆಗೆದುಕೊಂಡು ಹೋದರು ಎಂದು ತಿಳಿಸಿದರು.

ಗಾಂಧೀಜಿ ಅವರು ಭೇಟಿ ನೀಡಿದ್ದ ಜಾಗದಲ್ಲಿ ‘ಗಾಂಧಿ ಭವನ’ ನಿರ್ಮಾಣವಾಗಿದ್ದರೂ ನಿರ್ವಹಣೆಯಿಲ್ಲದೆ ದುಸ್ಥಿತಿಯಲ್ಲಿದೆ. ಇವರು ಭೇಟಿ ನೀಡಿದ್ದ ಸ್ಥಳಗಳನ್ನು ಸಂರಕ್ಷಿಸಬೇಕಾಗಿದೆ ಎಂದು ತಿಳಿಸಿದರು.

ಮಂಗಳವಾರಪೇಟೆಯ ಬಳಿ ದಂಡಿನ ಮಾರಮ್ಮ ದೇವಾಲಯವಿದೆ. ಇಲ್ಲಿರುವ ಕಲ್ಲನ್ನು ಹಿರಿಯರು ಈಗಲೂ ‘ಗಾಂಧಿಕಲ್ಲು’ ಎಂತಲೇ ಕರೆಯುತ್ತಾರೆ. ಜತೆಗೆ ಭಜನೆ ಮಂಟಪವು ಇದೆ. ಇವುಗಳನ್ನು ಸ್ಮಾರಕಗಳನ್ನಾಗಿ ಮಾರ್ಪಡಿಸಬೇಕು. ಗಾಂಧೀಜಿ ಅವರು ಇಂಗ್ಲೀಷ್‌ನಲ್ಲಿ ಮಾಡಿದ ಭಾಷಣವನ್ನು ತಿಟ್ಟಮಾರನಹಳ್ಳಿ ವೆಂಕಟಪ್ಪ ಕನ್ನಡಕ್ಕೆ ಭಾಷಾಂತರಿಸಿ ಜನರಿಗೆ ತಿಳಿಸಿದರು ಎಂದರು.

ಗಾಂಧಿ ಹೆಸರಿನ ರಸ್ತೆ
ಕ್ಲೋಸ್‌ಪೇಟೆಗೆ(ರಾಮನಗರ) ಗಾಂಧೀಜಿ ಬಂದು ಹೋದ ಮೇಲೆ ಅಲ್ಲಿ ಮಹಾತ್ಮ ಗಾಂಧೀಜಿ ರಸ್ತೆ (ಎಂ.ಜಿ ರಸ್ತೆ) ಹೆಸರು ಇಟ್ಟಿದ್ದಾರೆ. ರಾಮನಗರಕ್ಕೆ ಗಾಂಧಿ ಬಂದು ಹೋಗಲು ಮೂಲ ಕಾರಣ ಕರ್ತರಾದವರು ಗಾಂಧೀ ಕೃಷ್ಣಯ್ಯ ಎನ್ನುತ್ತಾರೆ ಸಂಗೀತ ವಿದ್ವಾನ್‌ ಶಿವಾಜಿರಾವ್.

ಮೊದಲು ಎಂ.ಜಿ. ರಸ್ತೆಯೇ ಮೈಸೂರಿಗೆ ಹೋಗುವ ರಸ್ತೆಯಾಗಿತ್ತು. ನಮ್ಮ ತಾತ ಸಿಪಾಯಿ ರಾಮ್‌ರಾವ್‌ ಅವರು ಗಾಂಧೀಜಿ ರಾಮನಗರಕ್ಕೆ ಭೇಟಿ, ಭಾಷಣ ಮಾಡಿದ್ದನ್ನು ಹೇಳುತ್ತಿದ್ದರು. ಗಾಂಧಿ ಅವರು ಭಾಷಣ ಮಾಡಿದ ಜಾಗ ಇಂದು ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರವಾಗಿದೆ. ಇನ್ನೊಂದು ಸ್ಥಳ ಈಗ ನಗರಸಭೆ ವಾಣಿಜ್ಯ ಸಂಕೀರ್ಣ (ಮೊದಲು ಗಾಂಧೀ ಪಾರ್ಕ್‌)ವಾಗಿದೆ ಎಂದು ತಿಳಿಸಿದರು.

ಜಿಲ್ಲೆಗೆ ಗಾಂಧೀಜಿ ಅವರು ಭೇಟಿ ನೀಡಿದ್ದ ಸ್ಥಳಗಳನ್ನು ರಕ್ಷಿಸಬೇಕು. ಇದರ ಬಗ್ಗೆ ಈ ತಲೆಮಾರಿಗೆ ತಿಳಿಸುವ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಬೇಕು. ಜತೆಗೆ ಸಂಶೋಧಕರು ಸಹ ಈ ಬಗ್ಗೆ ಸಂಶೋಧನೆ ನಡೆಸಿ ಪುಸ್ತಕಗಳನ್ನು ಪ್ರಕಟಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !