ಗಾಂಧೀಜಿ ಮಾರ್ಗಕ್ಕೆ ಮಾರುಹೋದ ಮಹನೀಯ,ಎಂಜಿನಿಯರ್‌ ಹುದ್ದೆ ಬಿಟ್ಟು ಸ್ವರಾಜ್ಯ ಕನಸು

7
ಗ್ರಾಮದಲ್ಲಿ ನೆಲೆಸಿ ಸ್ವರಾಜ್ಯ ಕನಸು ಕಂಡ ಬೆಳಗುಂಬದ ನಾರಾಯಣಪ್ಪ

ಗಾಂಧೀಜಿ ಮಾರ್ಗಕ್ಕೆ ಮಾರುಹೋದ ಮಹನೀಯ,ಎಂಜಿನಿಯರ್‌ ಹುದ್ದೆ ಬಿಟ್ಟು ಸ್ವರಾಜ್ಯ ಕನಸು

Published:
Updated:
Deccan Herald

ಮಾಗಡಿ: ಮಹಾತ್ಮಗಾಂಧೀಜಿ ಅವರನ್ನು ನೇರವಾಗಿ ಭೇಟಿಯಾಗಿ ಕೆಲವರು ಪ್ರೇರಿತರಾದರೆ, ಇನ್ನು ಕೆಲವರು ಅವರ ಭಾಷಣ, ಸರಳ ಜೀವನಕ್ಕೆ ಮಾರು ಹೋದ ಮಹನೀಯರ ಜೀವನಗಾಥೆ ಕಾಣಬಹುದು. ಅಂತಹ ಮಹನೀಯರಲ್ಲಿ ಬೆಳಗುಂಬದಲ್ಲಿ ಜನಿಸಿದ ನಾರಾಯಣಪ್ಪ ಒಬ್ಬರು. ‌

ಗಾಂಧೀಜಿ ಅವರ ವಿಚಾರಧಾರೆಗಳಿಗೆ ಮಾರುಹೋಗಿ 1935ರಲ್ಲಿ ಮೈಸೂರು ಸಂಸ್ಥಾನದಲ್ಲಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಹುದ್ದೆ ಬಿಟ್ಟು ಸ್ವಗ್ರಾಮದಲ್ಲಿ ನೆಲೆಸಿ ಸ್ವರಾಜ್ಯ ಮತ್ತು ಹರಿಜನೋದ್ಧಾರ ಹಾಗೂ ಕೂಡೊಕ್ಕಲು ಪದ್ಧತಿ ಜಾರಿಗೊಳಿಸಿದರು. ಹರಿಜನರ ಕೇರಿಗೆ ಹೋಗಿ ಮದ್ಯಪಾನ ಮತ್ತು ಅಸ್ಪೃಶ್ಯತೆ ನಿವಾರಣೆ ಬಗ್ಗೆ ಅರಿವು ಮೂಡಿಸುವುದನ್ನು ಕಂಡು ನಾರಾಯಣಪ್ಪ ಅವರ ವಿರುದ್ಧ ಸ್ವಜಾತಿಯವರೇ ತಿರುಗಿ ಬಿದ್ದರು.

ಪತ್ನಿ ತವರೂರಾದ ತಿಪ್ಪಸಂದ್ರ ಹೋಬಳಿ ಬಗಿನಗೆರೆ ಗ್ರಾಮಕ್ಕೆ ತೆರಳಿ ಅಲ್ಲಿ ಗಂಗಮ್ಮ – ಚಿಕ್ಕರಾಮಣ್ಣ ಅವರಿಂದ ಭೂಮಿ ದಾನವಾಗಿ ಪಡೆದರು. ಹರಿಜನೋದ್ಧಾರ, ರಾಮರಾಜ್ಯ, ಗುಡಿ ಕೈಗಾರಿಕೆಗಳ ಪ್ರಗತಿ ಕನಸು ನನಸು ಮಾಡಲು ಗಾಂಧಿ ಘರ್‌ ಆಶ್ರಮವನ್ನು 1956ರ ಅಕ್ಟೋಬರ್‌2ರಂದು ಅಂದಿನ ಗಾಂಧಿವಾದಿ ಯಶೋಧರಮ್ಮ ದಾಸಪ್ಪ ಅವರಿಂದ ಉದ್ಘಾಟಿಸಿದರು.

 

ಸಮಾನತೆ ಸಾರುವುದು, ಮೇಲು– ಕೀಳು ನಿರ್ಮೂಲನೆ, ಕೂಡೊಕ್ಕಲು ಬೇಸಾಯ, ಕರಕುಶಲ ಕರ್ಮಿಗಳಿಗೆ ತರಬೇತಿ ನೀಡಿದರು. ಹತ್ತಿ ಬಳಸಿ ಚರಕದಿಂದ ನೂಲು ತೆಗೆದು ಬಟ್ಟೆ ನೇಯುವುದು, ಕುರಿ ತುಪ್ಪಳದಿಂದ ಕಂಬಳಿ ನೇಯುವುದು, ಸತ್ತ ದನಗಳ ಚರ್ಮ ಬಳಸಿ ಚಪ್ಪಲಿ ತಯಾರಿಕೆ, ಈಚಲು ಚಾಪೆ ತಯಾರಿಸಲು ಗ್ರಾಮೀಣ ಜನರಿಗೆ ತರಬೇತಿ ನೀಡಿದರು. ಗಾಂಧಿ ಘರ್‌ನಲ್ಲಿ ರಾಮ ಭಜನೆ, ಸಾಮೂಹಿಕ ಪ್ರಾರ್ಥನೆ, ಜಾತ್ಯತೀತ ತತ್ವಗಳ ಚಿಂತನೆ, ಗಾಂಧೀಜಿ ಅವರ ಸತ್ಯ, ಅಹಿಂಸೆ, ದೇಶಪ್ರೇಮ, ಸರ್ವಧರ್ಮ ಪ್ರಾರ್ಥನೆಗಳಿಗೆ ಜನರನ್ನು ಅಣಿಗೊಳಿಸಿದರು.

ಜನರಲ್ಲಿ ಪರಿಸರ ಜಾಗೃತಿ ಅಂಗವಾಗಿ ಬಗಿನೆಗೆರೆ ಕಾವಲ್‌ನಲ್ಲಿ ಗಾಂಧಿ ಶತಮಾನೋತ್ಸವದ ಸವಿ ನೆನಪಿನಲ್ಲಿ ಅ.2, 1970ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ ಅವರಿಂದ 178.14 ಹೆಕ್ಟೇರ್‌ ಭೂಮಿಯಲ್ಲಿ ಗಾಂಧಿಘರ್‌ ತೋಟಕ್ಕೆ ಚಾಲನೆ ದೊರೆಯಿತು.

ಬಗಿನೆಗೆರೆ ಕಾವಲ್‌ ತೋಟದಲ್ಲಿ ಇಂದಿಗೂ ಮಾವು, ಸಪೋಟ, ಹಲಸು, ಸೀಬೆ ಇತರೆ ಹಣ್ಣಿನ ಸಸಿಗಳು ಬೆಳೆದು ಹೆಮ್ಮರವಾಗಿವೆ ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕ ನಾಗರಾಜು, ಸಿದ್ದರಾಜು ಅವರು ನಾರಾಯಣಪ್ಪ ಅವರ ನಿಸ್ವಾರ್ಥ ಸೇವೆ ಸ್ಮರಿಸಿದರು.

ಸರಳತೆ ಮತ್ತು ನಿಸ್ವಾರ್ಥತೆಗೆ ಹೆಸರಾಗಿದ್ದ ನಾರಾಯಣಪ್ಪ ಸದಾ ಖಾದಿಧಾರಿಯಾಗಿದ್ದರು. ಇಳಿವಯಸ್ಸಿನಲ್ಲೂ ತಾಲ್ಲೂಕಿನ ಶಾಲೆಗಳಿಗೆ ಭೇಟಿ ನೀಡಿ ಗಾಂಧೀಜಿ ಮತ್ತು ವಿನೋಭಾ ಬಾವೆ ಅವರ ವಿಚಾರಧಾರೆ ಬಗ್ಗೆ ಮಕ್ಕಳಿಗೆ ಉಪನ್ಯಾಸ ನೀಡಿ, ಭಗವದ್ಗಿತೆ ಮತ್ತು ಗಾಂದೀಜಿ ಅವರ ಕೃತಿಗಳನ್ನು ಉಚಿತವಾಗಿ ವಿತರಿಸುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !