ಬುಧವಾರ, ನವೆಂಬರ್ 20, 2019
20 °C

ಗಾಂಧೀಜಿ ಬದುಕಿನ ಚಿತ್ರ ಪ್ರದರ್ಶನ

Published:
Updated:
Prajavani

ಶಿವಮೊಗ್ಗ: ಭಾರತೀಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದ್ದ ಶಾಂತಿ, ಅಹಿಂಸೆ, ಸತ್ಯ ಎಂಬ ಅಂಶಗಳನ್ನು ಅಸ್ತ್ರವನ್ನಾಗಿ ಮಾರ್ಪಡಿಸಿದ ಗಾಂಧೀಜಿ ಇವುಗಳನ್ನು ಬ್ರಿಟಿಷರ ವಿರುದ್ಧ ಪ್ರಯೋಗಿಸಿ, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು ಎಂದು ಜಿಲ್ಲಾ ಪಂಚಾಯಿತಿ ಎಂ.ಎಲ್. ವೈಶಾಲಿ ಹೇಳಿದರು.

ನಗರದ ಕೆಎಸ್ಆರ್‌ಟಿಸಿ ಬಸ್‍ ನಿಲ್ದಾಣದಲ್ಲಿ ವಾರ್ತಾ ಇಲಾಖೆ, ಜಿಲ್ಲಾಡಳಿತದ ಸಹಯೋಗದಲ್ಲಿ 150ನೇ ಗಾಂಧೀಜಿ ಜಯಂತ್ಯುತ್ಸವದ ಅಂಗವಾಗಿ  ಸೋಮವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಗಾಂಧೀಜಿ ಅವರ ಜೀವನ ಮತ್ತು ಸಾಧನೆ ಬಿಂಬಿಸುವ ಅಪರೂಪದ ಚಿತ್ರಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಸತ್ಯಾಗ್ರಹ, ಅಸಹಕಾರದಂತಹ ಪ್ರತಿಭಟನೆಗಳೊಂದಿಗೆ ವಿಶ್ವದ ಗಮನ ಸೆಳೆದ ಗಾಂಧೀಜಿ ನವಯುಗದ ನೇತಾರರಾಗಿ ಹೊರಹೊಮ್ಮಿದರು. ಗಾಂಧೀಜಿ ಅವರ ಜೀವನ ಮತ್ತು ಅವರು ನಾಡಿಗೆ ನೀಡಿದ ಸಂದೇಶ ಸಾರ್ವಕಾಲಿಕ ಎಂದರು.

ಈ ಚಿತ್ರಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿ ಕರ್ನಾಟಕಕ್ಕೆ ಭೇಟಿ ಕೊಟ್ಟ ಸ್ಥಳಗಳು, ದೇಶದಾದ್ಯಂತ ನಡೆಸಿದ ಸಭೆ-ಸಮಾರಂಭಗಳು, ಹಿರಿಯ ನೇತಾರರೊಂದಿಗೆ ನಡೆಸಿದ ಸಭೆಗಳು, ಶೈಕ್ಷಣಿಕ ಮತ್ತು ಬಾಲ್ಯದ ಘಟನಾವಳಿಗಳು, ದೇಶ-ವಿದೇಶಗಳಲ್ಲಿ ಗಾಂಧೀಜಿ ಕಳೆದ ದಿನಗಳ ಕುರಿತು ಇತಿಹಾಸದ ಹಲವು ಘಟನೆಗಳ ಮೇಲೆ ಬೆಳಕು ಚೆಲ್ಲಲಿವೆ ಎಂದು ಹೇಳಿದರು.

ವಾರ್ತಾ ಇಲಾಖೆಯು ಬೇರೆ-ಬೇರೆ ಮೂಲಗಳಿಂದ ಸಂಗ್ರಹಿಸಿದ ಅಪರೂಪದ ಚಿತ್ರಗಳಲ್ಲಿ ಗಾಂಧೀಜಿ ಅವರ ಕುರಿತ ಕಪ್ಪು-ಬಿಳುಪು ಚಿತ್ರಗಳು ವೀಕ್ಷಕರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನು ಕಣ್ಣೆದುರು ತಂದು ನಿಲ್ಲಿಸಲಿವೆ ಎಂದು ಅಭಿಪ್ರಾಯಪಟ್ಟರು.

ಈ ಅಪರೂಪದ ಸಂಗ್ರಹದ ಚಿತ್ರಗಳನ್ನು ಸಾರ್ವಜನಿಕರು, ಶಿಕ್ಷಣದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಗಾಂಧೀಜಿ ಅನುಯಾಯಿಗಳು, ಪೋಷಕರು, ಶಿಕ್ಷಕರು, ಮಕ್ಕಳು, ಗಾಂಧೀಜಿ ಜೀವನಾದರ್ಶಗಳ ಪರಿಪಾಲಕರು ವೀಕ್ಷಿಸುವಂತೆ ಮನವಿ ಮಾಡಿದರು.

ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಸಂಚಲನಾಧಿಕಾರಿ ವಿ. ಸತೀಶ್, ಸಿದ್ದೇಶ್, ಆರ್. ಮಾರುತಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)