ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮೈತ್ರಿ, ಕ್ಷೇತ್ರದಲ್ಲಿ ಗುದ್ದಾಟ

Last Updated 26 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಐದು ವರ್ಷಗಳಿಂದ ವಿವಾದದ ಕೇಂದ್ರಬಿಂದು ಆಗಿದ್ದ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಇದೇ 28ರಂದು ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರ ಶನಿವಾರ ಅಂತ್ಯಗೊಂಡಿತು. ರಾಜ್ಯದಲ್ಲಿ ಮೈತ್ರಿಕೂಟ ರಚಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿರುವ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳು ಇಲ್ಲಿ ಎದುರಾಳಿಗಳು.

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶಾಸಕ ಮುನಿರತ್ನ ಕಣದಲ್ಲಿದ್ದಾರೆ. ತುಳಸಿ ಮುನಿರಾಜು ಗೌಡ ಕಮಲ ಪಾಳಯದ ಹುರಿಯಾಳು. ಬಿಜೆಪಿಯಲ್ಲಿ ಟಿಕೆಟ್‌ ಕೈತಪ್ಪಿದ್ದರಿಂದ ಬಿಬಿಎಂಪಿಯ ಮಾಜಿ ಸದಸ್ಯ ಜಿ.ಎಚ್‌. ರಾಮಚಂದ್ರ ಜೆಡಿಎಸ್‌ಗೆ ಜಿಗಿದಿದ್ದರು. ಅವರನ್ನು ಪಕ್ಷ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದೆ.

‘ಜಯನಗರ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುತ್ತೇವೆ. ರಾಜರಾಜೇಶ್ವರಿನಗರವನ್ನು ನಮಗೆ ಬಿಟ್ಟುಕೊಡಬೇಕು’ ಎಂಬುದು ಜೆಡಿಎಸ್‌ ನಾಯಕರು ಬೇಡಿಕೆ ಮುಂದಿಟ್ಟಿದ್ದರು. ಇದಕ್ಕೆ ಕಾಂಗ್ರೆಸ್‌ ಮುಖಂಡರು ಒಪ್ಪಿರಲಿಲ್ಲ. ಸಂಧಾನ ಸಭೆಯೂ ವಿಫಲಗೊಂಡಿತ್ತು. ಹೀಗಾಗಿ, ಉಭಯ ಪಕ್ಷಗಳ ಮುಖಂಡರು ಕಣದಲ್ಲಿ ಉಳಿದಿದ್ದಾರೆ.

ಜೆಡಿಎಸ್‌ ಅಭ್ಯರ್ಥಿ ಪರ ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಹಾಗೂ ಪ್ರಜ್ವಲ್‌ ರೇವಣ್ಣ ಶನಿವಾರ ಬಿರುಸಿನ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ಪರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮತಯಾಚನೆ ಮಾಡಿದರು. ‘ಕೈ’ ಹುರಿಯಾಳು ಪರವಾಗಿ ಶಾಸಕ ಡಿ.ಕೆ. ಶಿವಕುಮಾರ್‌, ಸಂಸದ ಡಿ.ಕೆ. ಸುರೇಶ್‌ ಪ್ರಚಾರ ಮಾಡಿದರು.  ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ ಮತದಾರರ ಗುರುತಿನ ಚೀಟಿ ಗಳು ಪತ್ತೆಯಾಗಿದ್ದರಿಂದ ಕ್ಷೇತ್ರದ ಚುನಾವಣೆ ಯನ್ನು ಆಯೋಗ ಮುಂದೂಡಿತ್ತು.

ಮುನಿರತ್ನ ವಿರುದ್ಧ ವಾಗ್ದಾಳಿ

‘ಮುನಿರತ್ನ ಅವರು ಬಿಬಿಎಂಪಿಯ 1,600 ಕಡತಗಳನ್ನು ಮನೆಯಲ್ಲಿ ಇರಿಸಿಕೊಂಡಿದ್ದರು. ಅವರ ವಿರುದ್ಧ ಕಾಂಗ್ರೆಸ್‌ ಸರ್ಕಾರವೇ ಚಾರ್ಜ್‌ಶೀಟ್‌ ದಾಖಲಿಸಿದೆ. ಇದು ಧರ್ಮ ಹಾಗೂ ಅಧರ್ಮದ ನಡುವಿನ ಹೋರಾಟ’ ಎಂದು ಎಚ್.ಡಿ.ದೇವೇಗೌಡ ಹೇಳಿದರು.

ಪ್ರಚಾರದ ವೇಳೆ ಪ್ರಜ್ವಲ್‌ ರೇವಣ್ಣ ಮಾತನಾಡಲು ಮುಂದಾದರು. ದೇವೇಗೌಡರು ಮೈಕ್‌ ಕಿತ್ತುಕೊಂಡು, ‘ಇಲ್ಲಿ ಮಾತನಾಡಿದರೆ ಅಜ್ಜ–ಮೊಮ್ಮಕ್ಕಳ ಪಕ್ಷ ಎಂದು ಟೀಕೆ ಮಾಡುತ್ತಾರೆ’ ಎಂದರು.

‘ಕೆಲಸ ಮಾಡಿ ಕ್ಷೇತ್ರ ಬಿಟ್ಟು ಕೊಡಲು ಸಾಧ್ಯವೇ’

‘ಐದು ವರ್ಷ ಕೆಲಸ ಮಾಡಿದ ಮೇಲೆ ಕ್ಷೇತ್ರ ಬಿಟ್ಟುಕೊಡಿ ಎಂದು ಕೇಳುವುದು ಸರಿಯಲ್ಲ. ನನ್ನ ಸ್ಥಾನದಲ್ಲಿ ಬೇರೆ ಯಾರೇ ಇದ್ದರೂ ಕ್ಷೇತ್ರ ಬಿಟ್ಟುಕೊಡುತ್ತಿರಲಿಲ್ಲ’ ಎಂದು ಮುನಿರತ್ನ ಹೇಳಿದರು.

‘ನಾನು ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ. ಕೆಲಸಕ್ಕೆ ಪ್ರತಿಯಾಗಿ ಮತ ಹಾಕಿ ಎನ್ನುತ್ತಿದ್ದೇನೆ. ರಾಮಚಂದ್ರ ಬಿಜೆಪಿ ತ್ಯಜಿಸಿ ಜೆಡಿಎಸ್‌ಗೆ ಹೋದವರು. ಪರಿಷತ್ ಸ್ಥಾನ ನೀಡುವುದಾಗಿ ಭರವಸೆ ನೀಡಿದರೂ ಅವರು ಒಪ್ಪಿಲ್ಲ. ನಾನು ಆ ಸ್ಥಾನದಲ್ಲಿ ಇದ್ದಿದ್ರೆ ರಾಮಚಂದ್ರ ಅವರಿಗೆ ಬಿಟ್ಟುಕೊಡುತ್ತಿದ್ದೆ’ ಎಂದರು.

’ಜೆಡಿಎಸ್‌ಗೆ ಕಾಂಗ್ರೆಸ್ ಪಕ್ಷ ಇವತ್ತು ದೊಡ್ಡ ತ್ಯಾಗ ಮಾಡಿದೆ. ಇದನ್ನ ಗುರ್ತಿಸಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಿಲ್ಲಬೇಕು. ಇಲ್ಲಿ ವ್ಯಕ್ತಿಯನ್ನ ನೋಡಬಾರದು. ಪಕ್ಷದ ತ್ಯಾಗವನ್ನು ನೋಡಿ ನಮ್ಮನ್ನು ಬೆಂಬಲಿಸಬೇಕು’ ಎಂದು ಶಾಸಕ ಡಿ.ಕೆ. ಶಿವಕುಮಾರ್‌ ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT